ADVERTISEMENT

ಹೆಚ್ಚುವರಿ ಆರೋಗ್ಯ ವಿಮೆಯ ಲಾಭಗಳು...

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 19:30 IST
Last Updated 31 ಅಕ್ಟೋಬರ್ 2017, 19:30 IST
ಹೆಚ್ಚುವರಿ ಆರೋಗ್ಯ ವಿಮೆಯ ಲಾಭಗಳು...
ಹೆಚ್ಚುವರಿ ಆರೋಗ್ಯ ವಿಮೆಯ ಲಾಭಗಳು...   

ನಿಮಗೆ ಸೂಕ್ತವಾದ ಆರೋಗ್ಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವಾಗಿ ಯಾರಿಂದಲಾದರೂ ಸಲಹೆಗಳನ್ನು ಕೇಳಿ ನೋಡಿ, ಅವರು ಅತಿ ಕಡಿಮೆ ಕಂತು ಪಾವತಿಸುವ ಯೋಜನೆಯನ್ನೇ ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತಾರೆ. ಆದರೆ, ಇದು ಸರಿಯಾದ ನಿರ್ಧಾರವೇ?

ನಾವೆಲ್ಲರೂ ಈಗ ವಿಪರೀತ ಒತ್ತಡದ ಜೀವನ ನಡೆಸುತ್ತಿದ್ದೇವೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ (ಬಿ.ಪಿ), ಆಸ್ತಮಾ, ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್‌ ಮುಂತಾಗಿ ಜೀವನಶೈಲಿಯಿಂದ ಬರುವ ರೋಗಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇವು ನಮ್ಮೊಳಗೆ ಯಾವುದೇ ಕ್ಷಣದಲ್ಲಿ ಸ್ಫೋಟಿಸಬಹುದಾದ ಟೈಮ್‌ ಬಾಂಬ್‌ನಂತೆ ಅವಿತು ಕುಳಿತಿವೆ.

2016ರ ಒಂದು ವರ್ಷದಲ್ಲೇ  ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ 14.5 ಲಕ್ಷದಷ್ಟು ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ವರದಿ ತಿಳಿಸಿದೆ. ಒತ್ತಡದ ಬದುಕಿನ ಪರಿಣಾಮವಾಗಿ ಭಾರತೀಯರು ಇಂದು ಅನೇಕ ಆರೋಗ್ಯಸಂಬಂಧಿ ಕಾಯಿಲೆಗಳಿಂದ ಬಳಲುವಂತಾಗಿದೆ.

ADVERTISEMENT

ಇಂತಹ ಸಂದರ್ಭದಲ್ಲಿ ಆರೋಗ್ಯ ಕಾಪಾಡುವುದು ಒಂದು ಸವಾಲಾದರೆ, ಆರೋಗ್ಯ ಸೇವೆಗಳ ವೆಚ್ಚ ವಿಪರೀತವಾಗಿರುವುದು ಇನ್ನೊಂದು ಬಗೆಯ ಚಿಂತೆಗೆ ಕಾರಣವಾಗಿದೆ. ಒಂದು ಹೃದಯ ಕವಾಟದ ಶಸ್ತ್ರಚಿಕಿತ್ಸೆಯ ವೆಚ್ಚ ಸುಮಾರು ₹ 1 ಲಕ್ಷದಿಂದ ₹ 3.5 ಲಕ್ಷದಷ್ಟಾಗಬಹುದು. ಯಕೃತ್ತಿನ ಕಸಿಗೆ ಕನಿಷ್ಠವೆಂದರೂ ₹ 30ಲಕ್ಷ ವೆಚ್ಚ ತಗಲುತ್ತದೆ. ಅಷ್ಟೇ ಏಕೆ, ಮಧುಮೇಹಿಗಳು ವರ್ಷಕ್ಕೆ ಕನಿಷ್ಠವೆಂದರೂ  ₹ 10,000 ದಷ್ಟು ಔಷಧಗಳಿಗಾಗಿ ವೆಚ್ಚ ಮಾಡಬೇಕಾಗುತ್ತದೆ. ಒಮ್ಮೆ ಶರೀರದ ಸಂಪೂರ್ಣ ತಪಾಸಣೆ ಮಾಡಿಸಬೇಕಾದರೆ ಕನಿಷ್ಠ ₹ 12,000 ದಿಂದ ₹ 15,000 ವೆಚ್ಚ ಬರುತ್ತದೆ.

ಇಂದು ಬಹುತೇಕ ಕಂಪೆನಿಗಳು ತಮ್ಮ ಸಿಬ್ಬಂದಿಗೆ ಆರೋಗ್ಯ ವಿಮಾ ಸೌಲಭ್ಯಗಳನ್ನು ಒದಗಿಸುತ್ತಿವೆ. ಅವು ಗರಿಷ್ಠವೆಂದರೆ ಆಸ್ಪತ್ರೆ ವೆಚ್ಚದ ಶೇ 96ರಷ್ಟನ್ನು ತುಂಬಿಕೊಡುತ್ತವೆ. ಆದರೆ ಅನೇಕ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ ಇದಕ್ಕಿಂತ ಹೆಚ್ಚಿರುತ್ತದೆ ಅಥವಾ ಆಸ್ಪತ್ರೆಯಿಂದ ಬಂದ ಬಳಿಕವೂ ಕೆಲವರಿಗೆ ದೀರ್ಘ ಕಾಲದವರೆಗೆ ಚಿಕಿತ್ಸೆಯ ಅಗತ್ಯ ಇರುತ್ತದೆ. ಇದಕ್ಕೂ ಭಾರಿ ವೆಚ್ಚ ತಗಲುತ್ತದೆ. ಇಂಥ ಸಂದರ್ಭದಲ್ಲಿ ಕಾರ್ಪೊರೇಟ್‌ ವಿಮಾ ವ್ಯವಸ್ಥೆ ಎಷ್ಟು ಸಹಕಾರಿ ಎಂಬುದು ಪ್ರಶ್ನೆ.

ವಾಸ್ತವದಲ್ಲಿ ಕಾರ್ಪೊರೇಟ್‌ ವಿಮಾ ವ್ಯವಸ್ಥೆ, ತಕ್ಷಣದ ಚಿಕಿತ್ಸಾ ವೆಚ್ಚವನ್ನು ಮಾತ್ರ ಕೊಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಬರುವ ಸಂಪೂರ್ಣ ವೆಚ್ಚವನ್ನು ಭರಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಎದುರಾಗುವ ಯಾವುದೇ ಸಮಸ್ಯೆಯನ್ನು ಪರಿಹರಿಸಬೇಕಾದರೆ ಇದಕ್ಕಿಂತ ಭಿನ್ನವಾದ, ಆರ್ಥಿಕವಾಗಿ ಸಂಪೂರ್ಣ ರಕ್ಷಣೆ ಒದಗಿಸುವ ವಿಮೆಯನ್ನು ಪಡೆಯುವುದು ಅಗತ್ಯ.

ಒಂದು ಉದಾಹರಣೆಯೊಂದಿಗೆ ಈ ವಿಚಾರವನ್ನು ಇಲ್ಲಿ ಇನ್ನಷ್ಟು ವಿವರಿಸಲಾಗಿದೆ– ವ್ಯಕ್ತಿಯೊಬ್ಬ ತುರ್ತಾಗಿ ಹೃದಯ ಕವಾಟದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದಿಟ್ಟುಕೊಳ್ಳೋಣ. ಇದಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚ ಬರುತ್ತದೆ. ಇಂತಹ ಸಂದರ್ಭದಲ್ಲಿ ಗರಿಷ್ಠ ಒಂದು ಲಕ್ಷ ರೂಪಾಯಿ ನೆರವನ್ನು ಮಾತ್ರ ನೀಡುವ, ಸಾಮಾನ್ಯ ಗುಂಪು ವಿಮೆಯಿಂದ ಅಗತ್ಯ ಪೂರೈಸಲು ಸಾಧ್ಯವೇ?

ಇಂಥ ಅಗತ್ಯ ಪೂರೈಸಬೇಕಾದರೆ ಆ ವ್ಯಕ್ತಿ ಬೇರೆ ವಿಮೆ ಮಾಡಿಸಿಕೊಳ್ಳಬೇಕು. ಅದಕ್ಕೆ ವಾರ್ಷಿಕ ಕನಿಷ್ಠವೆಂದರೂ ಆರು ಸಾವಿರ ರೂಪಾಯಿ ಕಂತು ಬರಬಹುದು. ಅಥವಾ ಹಾಲಿ ಇರುವ ಕಾರ್ಪೊರೇಟ್‌ ವಿಮೆಯ ಜೊತೆಗೆ ಒಂದು ‘ಹೈ ಡಿಡಕ್ಟಿಬಲ್‌’ ಆರೋಗ್ಯ ವಿಮೆಯನ್ನು ಪಡೆಯುವುದು ಸೂಕ್ತ. ಇದರ ಕಂತು ಸಹ ಸ್ವಲ್ಪ ಕಡಿಮೆ ಆಗಲಿದೆ.

ಗ್ರಾಹಕರು ಹೊಂದಿರುವ ಯಾವುದೇ ವಿಮಾ ಯೋಜನೆಯ ಜೊತೆಗೆ ಜೋಡಿಸಿ ಈ ಹೈ ಡಿಡಕ್ಟಿಬಲ್‌ ವಿಮಾ ಯೋಜನೆಯನ್ನು ಪಡೆಯಬಹುದಾಗಿದೆ. ಹೀಗಾಗಿ ಆಸ್ಪತ್ರೆಯ ದೊಡ್ಡ ಮೊತ್ತದ ಬಿಲ್‌ಗಳಿಂದ ರಕ್ಷಿಸಿಕೊಳ್ಳಲು ಇದು ಒಳ್ಳೆಯ ಆಯ್ಕೆಯಾಗಬಲ್ಲದು.

ಏನಿದು ಹೈ ಡಿಡಕ್ಟಿಬಲ್‌ ವಿಮೆ?
ಸಾಮಾನ್ಯವಾಗಿ ಕಾರ್ಪೊರೇಟ್‌ ಆರೋಗ್ಯ ವಿಮೆ ಅಥವಾ ಇತರ ಗುಂಪು ಆರೋಗ್ಯ ವಿಮೆಗಳು ದೊಡ್ಡ ಮೊತ್ತವನ್ನೇನೂ ಕೊಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ಒಂದುವೇಳೆ ಆಸ್ಪತ್ರೆ ವೆಚ್ಚಗಳು ಹೆಚ್ಚಾದಲ್ಲಿ ಗ್ರಾಹಕರು ಕೈಯಿಂದ ಹಣ ವೆಚ್ಚ ಮಾಡಬೇಕಾಗುತ್ತದೆ. ಈ ಬಗೆಯ ತುರ್ತು ಸಂದರ್ಭದಲ್ಲಿ ಟಾಪ್‌ ಅಪ್‌ ಯೋಜನೆಗಳು ನೆರವಿಗೆ ಬರುತ್ತವೆ.

ಗ್ರಾಹಕರು ಈಗಾಗಲೇ ಹೊಂದಿರುವ ಆರೋಗ್ಯ ವಿಮೆಗೆ ಹೆಚ್ಚುವರಿಯಾಗಿ ಈ ಹೈ ಡಿಡಕ್ಟಿಬಲ್‌ ವಿಮಾ ಯೋಜನೆ ಕಾರ್ಯ ನಿರ್ವಹಿಸುತ್ತದೆ. ಈ ವಿಮೆ ಪಡೆಯುವ ಸಂದರ್ಭದಲ್ಲಿ ಗ್ರಾಹಕರು ತಾವು ಈಗಾಗಲೇ ಹೊಂದಿರುವ ವಿಮೆಯಲ್ಲಿ ಲಭ್ಯವಿರುವ ಗರಿಷ್ಠ ಮೊತ್ತವನ್ನು ಉಲ್ಲೇಖಿಸಬೇಕು. ಯಾವುದೇ ತುರ್ತು ಸಂದರ್ಭ ಬಂದು, ಈ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸುವ ಸಂದರ್ಭ ಬಂದಾಗ ಅದನ್ನು ಹೈ ಡಿಡಕ್ಟಿಬಲ್‌ ವಿಮೆಯಿಂದ ಪಡೆಯಲು ಸಾಧ್ಯವಾಗುತ್ತದೆ.

ಉದ್ಯೋಗಿಗಳಿಗೆ ಕಂಪೆನಿ ನೀಡುವ ಗುಂಪು ವಿಮೆ ಸೌಲಭ್ಯವು ಆಸ್ಪತ್ರೆ ಬಿಲ್‌ ಪಾವತಿಗೆ ಸಹಾಯ ಮಾಡಿದರೆ, ಹೆಚ್ಚುವರಿಯಾಗಿ ಬರುವ ವೆಚ್ಚಗಳನ್ನು ಈ ಹೈಡಿಡಕ್ಟಿಬಲ್‌ ವಿಮೆಯಿಂದ ಭರಿಸಲು ಸಾಧ್ಯವಾಗುತ್ತದೆ.

ಕಂಪೆನಿಯ ವಿಮೆಯ ಜೊತೆಗೆ ಇನ್ನೂ ಒಂದಿಷ್ಟು ಹಣ ಹೂಡಿಕೆ ಮಾಡಿ ಈ ಬಗೆಯ ವಿಮೆ ಮಾಡಿಸಿಕೊಂಡರೆ ಹಲವಾರು ಲಾಭಗಳಿವೆ. ಮೊದಲನೆಯದಾಗಿ, ಕೈಯಲ್ಲಿ ಹಣ ಇಲ್ಲದಿದ್ದರೂ ತುರ್ತು ಸಂದರ್ಭಗಳಲ್ಲಿ ಬರುವ ಎಲ್ಲ ಆರೋಗ್ಯ ವೆಚ್ಚಗಳನ್ನೂ ಭರಿಸಲು ಸಾಧ್ಯವಾಗುತ್ತದೆ. ಆ ಮೂಲಕ ಆರೋಗ್ಯ ವಿಚಾರದಲ್ಲಿ ಬರಬಹುದಾದ ಅಪಾಯ ಮತ್ತು ಹಣಕಾಸಿನ ಮುಗ್ಗಟ್ಟಿನ ವಿಚಾರದಲ್ಲಿ ನಿಶ್ಚಿಂತೆಯಿಂದ ಇರಬಹುದು. ತಮ್ಮ ಕಂಪೆನಿ ವಿಮಾ ಸೌಲಭ್ಯ ಒದಗಿಸುವ ಸಂಸ್ಥೆಯಿಂದಲೇ ಹೈ ಡಿಡಕ್ಟಿಬಲ್‌ ವಿಮೆಯನ್ನೂ ಮಾಡಿಸಬೇಕೆಂದಿಲ್ಲ. ಗ್ರಾಹಕರು ತಮಗಿಷ್ಟವಿರುವ ಸಂಸ್ಥೆಯಿಂದ ಈ ವಿಮೆ ಮಾಡಿಸಿಕೊಳ್ಳಬಹುದು.

ಕಡಿಮೆ ಮೊತ್ತದ ಕಂತು ಪಾವತಿಸಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು ಎನ್ನುವುದು ಹೈ ಡಿಡಕ್ಟಿಬಲ್‌ ವಿಮೆಯಲ್ಲಿರುವ ಇನ್ನೊಂದು ಲಾಭವಾಗಿದೆ.

(ಲೇಖಕ, ಭಾರ್ತಿ ಆಕ್ಸಾ ಜನರಲ್‌ ಇನ್ಶುರನ್ಸ್‌ ಸಂಸ್ಥೆಯ ಹಿರಿಯ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.