ADVERTISEMENT

ಹೆಚ್ಚು ಮೈಲೇಜ್‌ನ ‘ಮೈಕ್ರೊ ಹೈಬ್ರಿಡ್‌ ಸ್ಕೂಟಿ’

ಬಸವರಾಜ ಸಂಪಳ್ಳಿ
Published 26 ನವೆಂಬರ್ 2015, 19:39 IST
Last Updated 26 ನವೆಂಬರ್ 2015, 19:39 IST

ಬಾಗಲಕೋಟೆ: ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಗುರು– ಶಿಷ್ಯರ ಸಂಶೋಧನೆಯ ಫಲವಾಗಿ, ಅಧಿಕ ಮೈಲೇಜ್‌ ಸಾಮರ್ಥ್ಯದ ‘ಮೈಕ್ರೊ ಹೈಬ್ರಿಡ್‌ ಸ್ಕೂಟಿ’ ತಯಾರಾಗಿದೆ.

ಕಡಿಮೆ ವೆಚ್ಚ, ಹೆಚ್ಚು ಮೈಲೇಜ್‌ ಹಾಗೂ ಮಾಲಿನ್ಯರಹಿತ ಎಂಬುದು ಇದರ ಹೆಗ್ಗಳಿಕೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿನಯ್ ವಿ. ಕುಪ್ಪಸ್ತ ಅವರ ಮಾರ್ಗದರ್ಶನದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ ಸೂರಜ್ ಸಿ. ರಾಯ್ಕರ್ ಒಂದು ವರ್ಷ ನಿರಂತರ ಶ್ರಮವಹಿಸಿ, ಕೇವಲ ₹ 35 ಸಾವಿರ ವೆಚ್ಚದಲ್ಲಿ ಈ ಸ್ಕೂಟರ್‌ ಸಿದ್ಧಪಡಿಸಿದ್ದಾರೆ.

ಈ ಸಂಶೋಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಪ್ರಶಂಸೆ ವ್ಯಕ್ತವಾಗಿದೆ. ‘ಮೇಕ್‌ ಇನ್‌ ಇಂಡಿಯಾ’ದಲ್ಲಿ ಈ ಸ್ಕೂಟಿಯನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸಲು ಅಗತ್ಯ ಸಹಕಾರ ನೀಡುವ ಭರವಸೆಯೂ ಸಿಕ್ಕಿದೆ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕಲ್‌ ಸ್ಕೂಟರ್‌ಗಳು ಭಾರ ಎಳೆಯುವಲ್ಲಿ ಹಾಗೂ ಉತ್ತಮ ಮೈಲೇಜ್‌ ನೀಡುವಲ್ಲಿ ಅಸಮರ್ಥವಾದ ಕಾರಣ ಜನಪ್ರಿಯವಾಗಲಿಲ್ಲ. ಈ ನಿಟ್ಟಿನಲ್ಲಿ ಅವುಗಳ ಕ್ಷಮತೆ ಹೆಚ್ಚಿಸಿ, ಯಾವುದೇ ಅಡೆತಡೆ ಇಲ್ಲದೇ ಸಾಗುವಂತೆ ಮಾಡಲು ನಡೆಸಿದ ಪ್ರಯತ್ನದ ಫಲವೇ ಇದು ಎಂದು ಡಾ. ವಿನಯ್ ತಿಳಿಸಿದರು.

ಈ ನೂತನ ತಂತ್ರಜ್ಞಾನ ಬಳಸಿ ಬೃಹತ್‌ ಪ್ರಮಾಣದಲ್ಲಿ ಸ್ಕೂಟರ್‌ ನಿರ್ಮಿಸಿದರೆ ಗ್ರಾಹಕರಿಗೆ ಕೇವಲ ₹ 45 ರಿಂದ ₹ 50 ಸಾವಿರದಲ್ಲಿ ಸಿಗುತ್ತದೆ. ಪೇಟೆಂಟ್‌ ಪಡೆಯುವ ಪ್ರಕ್ರಿಯೆ ನಡೆದ್ದು, ಈ ತಂತ್ರಜ್ಞಾನವನ್ನು ಆಸಕ್ತ ಕಂಪೆನಿಗಳಿಗೆ ನೀಡಲು ಸಿದ್ಧವಿರುವುದಾಗಿ ಹೇಳಿದರು. ಇದೇ ತಂತ್ರಜ್ಞಾನವನ್ನು ಆಟೊ ಮತ್ತು ಟ್ಯಾಕ್ಸಿಗಳಿಗೆ ಅಳವಡಿಸಲು ಪ್ರಯತ್ನಿಸುವುದಾಗಿ ಸೂರಜ್‌ ಹೇಳಿದರು.

ಮೈಕ್ರೊ ಹೈಬ್ರಿಡ್‌ ತಂತ್ರಜ್ಞಾನ: ಸಾಂಪ್ರದಾಯಿಕ ಎಂಜಿನ್‌ (ಪೆಟ್ರೋಲ್‌, ಡೀಸೆಲ್‌ನಿಂದ ಚಲಿಸುವ) ಹಾಗೂ ಎಲೆಕ್ಟ್ರಿಕಲ್‌ ಬ್ಯಾಟರಿಯಿಂದ ಚಲಿಸುವ ವಾಹನಗಳ ತಂತ್ರಜ್ಞಾನವನ್ನು ಮೈಕ್ರೊ ಹೈಬ್ರಿಡ್‌ ಸ್ಕೂಟಿಯಲ್ಲಿ ಸಂಯೋಜಿಸಲಾಗಿದೆ. ಇದರ ಎಂಜಿನ್‌ ಒಂದು ಲೀಟರ್‌ ಪೆಟ್ರೋಲ್‌ ಬಳಸಿಕೊಂಡು ಬ್ಯಾಟರಿಗಳನ್ನು ಚಾರ್ಜ್‌ ಮಾಡಲಿದೆ. ಅವುಗಳ ಸಹಾಯದಿಂದ ವಾಹನದಲ್ಲಿ 366 ಕಿ.ಮೀ ಕ್ರಮಿಸಬಹುದಾಗಿದೆ. ಇದನ್ನೇ ಡಾ. ವಿನಯ್‌ ಮತ್ತು ವಿದ್ಯಾರ್ಥಿ ಸೂರಜ್‌ ‘ಮೈಕ್ರೊ ಹೈಬ್ರಿಡ್‌ ತಂತ್ರಜ್ಞಾನ’ ಎಂದು ಹೆಸರಿಸಿದ್ದು ಸ್ಕೂಟಿಗೂ ಆ ಹೆಸರೇ ಇಟ್ಟಿದ್ದಾರೆ.

ಹೀರೊ ಕಂಪೆನಿಯ ಎಲೆಕ್ಟ್ರಿಕಲ್‌ ಸ್ಕೂಟರ್‌ ಒಂದನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಎರಡು ಜೊತೆ ಚಾರ್ಜಿಂಗ್‌ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಗಳು ಡಿಸ್‌ಚಾರ್ಜ್‌ ಆದ ತಕ್ಷಣ ತನ್ನಿಂದ ತಾನೇ ಕೇವಲ 12 ನಿಮಿಷದಲ್ಲಿ ಚಾರ್ಜ್‌ ಆಗುವಂತೆ  70 ಸಿ.ಸಿ ಸಾಮರ್ಥ್ಯದ ಎಂಜಿನ್‌ಗೆ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಡಾ.ವಿನಯ್‌ ಕುಪ್ಪಸ್ತ (9986419729) ಅಥವಾ ಸೂರಜ್‌ ರಾಯ್ಕರ್‌( 7026613461) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.