ADVERTISEMENT

‘ಬ್ಯಾಂಕಿಂಗ್‌ ಕ್ಷೇತ್ರ ದಲಿತ ವಿರೋಧಿ’

ಜಾತಿ ನಿಂದನೆ ಪ್ರಕರಣ ದಾಖಲಿಸಲು ದಿಗ್ವಿಜಯ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ‘ಬ್ಯಾಂಕಿಂಗ್ ಕ್ಷೇತ್ರ ಭ್ರಷ್ಟಾ ಚಾರದ ಕೂಪವಾಗಿದ್ದು, ಈಗೀಗ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಬ್ಯಾಂಕ್ ಅಧಿಕಾರಿಗಳು ದಲಿತ ಉದ್ಯಮಿ ಗಳಿಗೆ ಸಾಲ ನೀಡದೆ ತೊಂದರೆ ಕೊಡು ತ್ತಿದ್ದು, ಅಂತಹವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿ­ಜಯಸಿಂಗ್‌ ಆಕ್ರೋಶದಿಂದ ಹೇಳಿದರು.

ಭಾರತೀಯ ದಲಿತ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ (ಡಿಐಸಿಸಿಐ) ರಾಜ್ಯ ಘಟಕ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ದಲಿತ ಉದ್ಯಮಿ­ಗಳಿಗೆ ಸಾಲ ನಿರಾಕರಣೆ ಮಾಡುವುದು ಹಾಗೂ ಅಸಹಕಾರ ನೀಡುವುದು ಸಹ ಜಾತಿ ನಿಂದನೆಯೇ’ ಎಂದು ಅವರು ವ್ಯಾಖ್ಯಾನಿಸಿದರು.

‘ದಲಿತ ಸಮುದಾಯಕ್ಕೆ ‘ಮತ­ಬ್ಯಾಂಕ್‌’ ಎಂಬ ನಾಮಕರಣವನ್ನು ಮಾಡಿದ್ದು ಮಾಧ್ಯಮ. ಆದರೆ, ಮತ­ಬ್ಯಾಂಕ್‌ ಎನ್ನುವುದು ಈಗ ಎಲ್ಲಿಯೂ ಇಲ್ಲ. ಅಪ್ಪ ಒಂದು ಪಕ್ಷಕ್ಕೆ, ಮಗ ಇನ್ನೊಂದು ಪಕ್ಷಕ್ಕೆ, ಅಮ್ಮ ಬೇರೆ ಯಾವುದೋ ಅಭ್ಯರ್ಥಿಗೆ ಮತ ನೀಡುವ ಕಾಲ ಇದು. ದೇಶ ವೇಗದಿಂದ ಬದಲಾ ಗುತ್ತಿದ್ದು, ದಲಿತರೂ ಅದರ ಭಾಗವಾಗಿ ರುವುದು ಖುಷಿ ನೀಡುವ ಸಂಗತಿ ಯಾಗಿದೆ’ ಎಂದು ತಿಳಿಸಿದರು.

‘ಮೀಸಲಾತಿಯಿಂದ ಎಲ್ಲ ದಲಿತರಿಗೆ ಸರ್ಕಾರಿ ನೌಕರಿಯೇ ಸಿಗುತ್ತದೆ ಎನ್ನು­ವುದು ಭ್ರಮೆ. ಹುದ್ದೆಗಳ ಸಂಖ್ಯೆ ಅಲ್ಪವಾ ಗಿದ್ದು, ದಲಿತರ ಸಂಖ್ಯೆ ದೊಡ್ಡ­ದಾಗಿದೆ. ಉದ್ಯಮಶೀಲತಾ ಮನೋ­ಭಾವ ಬೆಳೆಸಿ ಕೊಳ್ಳುವ ಮೂಲಕ ಈ ಸಮುದಾಯ ದವರು ಬೇರೆಯವರಿಗೆ ನೌಕರಿ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು’ ಎಂದು ಆಶಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ, ‘ಲೋಕೋಪ­ಯೋಗಿ ಇಲಾಖೆ­ಯಲ್ಲಿ ₨50 ಲಕ್ಷ ಮೊತ್ತದವರೆಗಿನ ಕಾಮಗಾರಿಗಳನ್ನು ಟೆಂಡರ್‌ ಕರೆಯದೆ ದಲಿತ ಗುತ್ತಿಗೆದಾರ ರಿಗೆ ಮೀಸಲಿಡುವ ಪ್ರಸ್ತಾವವಿದ್ದು, ಈ ಸಂಬಂಧ ಇಷ್ಟರಲ್ಲೇ ಆದೇಶ ಹೊರಬೀ ಳಲಿದೆ’ ಎಂದು ಪ್ರಕಟಿಸಿದರು.

ಡಿಐಸಿಸಿಐ ಅಧ್ಯಕ್ಷ ಮಿಲಿಂದ್‌ ಕಾಂಬ್ಳೆ, ‘ದಲಿತ ಸಮುದಾಯದ ಮೊದಲ ಪೀಳಿಗೆ ಉದ್ಯಮ ಕ್ಷೇತ್ರಕ್ಕೂ ಧುಮು ಕಿದ್ದು, ದೊಡ್ಡ ಯಶಸ್ಸು ಸಾಧಿಸಿದೆ. ದೇಶದ ತುಂಬಾ ನೂರಾರು ಜನ ದಲಿತ ಕೋಟ್ಯಧಿಪತಿಗಳು ಬೆಳೆದಿರುವುದು ಹೆಮ್ಮೆ ತಂದಿದೆ. ಕೆಲವರಂತೂ ಸಾವಿ ರಾರು ಕೋಟಿ ಮೌಲ್ಯದ ಉದ್ದಿಮೆಗಳಿಗೆ ಒಡೆಯ­ರಾಗಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಸುಮಾರು 10 ಕೋಟಿ ದಲಿತ ಯುವಕರಿದ್ದು, ಅವರೆಲ್ಲ ವಿದ್ಯಾ­ವಂತರು. ಅವಕಾಶಕ್ಕಾಗಿ ಕಾದಿರುವ ಈ ಯುವಪೀಳಿಗೆಗೆ ಬೇಕಾಗಿರುವ ತಾಂತ್ರಿಕ ಸಹಾಯವನ್ನು ಸಂಸ್ಥೆ ಒದಗಿಸಲಿದೆ. ಸಾಲ ಸೌಲಭ್ಯವನ್ನೂ ನೀಡಲಿದ್ದು, ಸರ್ಕಾರದ ಯೋಜನೆಗಳು ಸಹ ಅವರಿಗೆ ಸಿಗುವಂತೆ ನೋಡಿಕೊಳ್ಳಲಿದೆ’ ಎಂದು ವಿವರಿಸಿದರು.

‘ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ದಲಿತ ಪರವಾದ ಉದ್ಯಮ ನೀತಿಯನ್ನು ಹೊಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿ­ಸಿದರು.

ಡಿಐಸಿಸಿಐ ರಾಜ್ಯ ಘಟಕದ ಅಧ್ಯಕ್ಷ ರಾಜಾ ನಾಯಕ್‌, ‘ನಮ್ಮ ಸಮುದಾ ಯದ ಉದ್ಯಮಿಗಳು ಮೊದಲು ದಲಿತ ರೆಂದು ಹೇಳಿಕೊಳ್ಳಲು ಹಿಂಜರಿಯುತ್ತಿ ದ್ದರು. ಆದರೆ, ಈಗ ಜಾಗೃತಿ ಮೂಡಿದ್ದು, ಸಂಘಟನೆ ದೊಡ್ಡದಾಗಿ ಬೆಳೆಯುತ್ತಿದೆ’ ಎಂದು ಹೇಳಿದರು.

ಅಬಕಾರಿ ಸಚಿವ ಸತೀಶ್‌ ಜಾರಕಿ­ಹೊಳಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿ-­ದ್ದರು. ಡಿಐಸಿಸಿಐ ಮುಖಂಡರಾದ ಚಂದ್ರಭಾನ್‌ ಪ್ರಸಾದ್‌, ರವಿಕುಮಾರ್‌ ನಾರಾ, ಸಂಜೀವ್‌ ಢಾಂಗಿ, ಕಲ್ಪನಾ ಸರೋಜ್‌ ಹಾಗೂ ಅನಿತಾ ರಾಜ್‌ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.