ADVERTISEMENT

‘ಸ್ವಂತಿ’ ಸೆರೆಗೆ ಅವಳಿ ಕ್ಯಾಮೆರಾ!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2016, 19:30 IST
Last Updated 29 ಮಾರ್ಚ್ 2016, 19:30 IST
‘ಸ್ವಂತಿ’ ಸೆರೆಗೆ ಅವಳಿ ಕ್ಯಾಮೆರಾ!
‘ಸ್ವಂತಿ’ ಸೆರೆಗೆ ಅವಳಿ ಕ್ಯಾಮೆರಾ!   

‘ಸ್ವಂತಿ’ ಅಥವಾ ‘ಸೆಲ್ಫಿ’ ಜನಪ್ರಿಯತೆ ಅತಿಶಯ ಎನಿಸುವ ರೀತಿಯಲ್ಲಿ ಬೆಳೆಯುತ್ತಿರುವುದರಿಂದ ಮೊಬೈಲ್‌ ತಯಾರಿಕಾ ಕಂಪೆನಿಗಳು ಅದರ ಮುಂದಿನ ಹಂತದ ಮಾರುಕಟ್ಟೆ ಸಾಧ್ಯತೆಗಳ ಕುರಿತು ಚಿಂತಿಸುತ್ತಿವೆ.

ಈಗಂತೂ ‘ಫ್ರಂಟ್‌ ಫೇಸಿಂಗ್‌’ ಅಥವಾ ಸೆಕೆಂಡರಿ ಕ್ಯಾಮೆರಾ ಮೊಬೈಲ್‌ನಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸೌಲಭ್ಯ ಎನಿಸಿದೆ. ಅಷ್ಟೇ ಅಲ್ಲ, 1.2 ರಿಂದ 5 ಮೆಗಾಪಿಕ್ಸೆಲ್‌ಗೆ ಸೀಮಿತವಾಗಿದ್ದ ಸೆಕೆಂಡರಿ ಕ್ಯಾಮೆರಾಗಳ ಗುಣಮಟ್ಟ ಈಗ  5 ರಿಂದ 13 ಮೆಗಾಪಿಕ್ಸೆಲ್‌ಗಳಿಗೆ ಹೆಚ್ಚಿದೆ. ಉದಾಹರಣೆಗೆ ಆರು ತಿಂಗಳ ಹಿಂದಷ್ಟೇ ಮಾರುಕಟ್ಟೆಗೆ ಬಿಡುಗಡೆಯಾದ ‘ಸೋನಿ ಎಕ್ಸ್‌ಪೀರಿಯಾ ಎಂ–5 ಡ್ಯುಯಲ್‌’ ಸ್ಮಾರ್ಟ್‌ಫೋನ್‌ನಲ್ಲಿ ಪ್ರಾಥಮಿಕ ಕ್ಯಾಮೆರಾ 21.2 ಮೆಗಾಪಿಕ್ಸಲ್ ಇದ್ದರೆ ಸೆಕೆಂಡರಿ ಕ್ಯಾಮೆರಾ 13 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದೆ. 

ಸಾಮಾಜಿಕ ಜಾಲತಾಣಗಳ ಅಬ್ಬರದಿಂದ ‘ಸೆಲ್ಫಿ’ ಚಿತ್ರಗಳು ಮಾತ್ರವಲ್ಲ,  ಸ್ವಂತಿ ವಿಡಿಯೊಗಳು  ಕೂಡ ಜನಪ್ರಿಯವಾಗುತ್ತಿವೆ.  ಈ ಕಾರಣಕ್ಕೆ ರೆಟಿನಾ ಪ್ಲಾಷ್, ಆಟೊಫೋಕಸ್‌, ಮತ್ತು ಸ್ವಯಂ ಚಾಲಿತ ‘ಹೈ–ಡೈನಾಮಿಕ್‌ ರೇಂಜ್‌ ಇಮೇಜ್‌ (ಎಚ್‌ಡಿಆರ್‌)  ಸೌಲಭ್ಯಗಳಿರುವ ಸೆಕೆಂಡರಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾದ ‘ಐಫೋನ್‌ ಎಸ್‌ಇ’ನ (ಐಫೋನ್‌ ಸ್ಪೆಷಲ್‌ ಎಡಿಷನ್) ಸೆಕೆಂಡರಿ ಕ್ಯಾಮೆರಾದಲ್ಲಿ ‘ಎಚ್‌ಡಿಆರ್‌’ ತಂತ್ರಜ್ಞಾನ ಅಳವಡಿಸಲಾಗಿದೆ. ಮೈಕ್ರೊಸಾಫ್ಟ್‌ ಕಂಪೆನಿ ತನ್ನ ‘ಲುಮಿಯಾ’ ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ವೈಡ್‌–ಆ್ಯಂಗಲ್‌ ಲೆನ್ಸ್‌ ಸೌಲಭ್ಯದ ಸ್ವಂತಿ ಕ್ಯಾಮೆರಾ ಪರಿಚಯಿಸಿದೆ. ಆದರೆ, ‘ವೈಡ್‌–ಆ್ಯಂಗಲ್‌ ಲೆನ್ಸ್‌’ ಬಳಸಿ ತೆಗೆದ ‘ಸ್ವಂತಿ’ ಚಿತ್ರಗಳಲ್ಲಿ ಮೂಗು ದೊಡ್ಡದಾಗಿ ಕಾಣಿಸುತ್ತಿರುವುದರಿಂದ ಗ್ರಾಹಕರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. 

ಹೀಗಾಗಿ ಮೈಕ್ರೊಸಾಫ್ಟ್‌, ಮೂಗು ಸುಂದರವಾಗಿ ಕಾಣಿಸುವಂತೆ ಫ್ರಂಟ್‌ ಫೇಸಿಂಗ್  ಕ್ಯಾಮೆರಾಗಳಲ್ಲಿ ತಾಂತ್ರಿಕ ಪರಿಷ್ಕರಣೆ ಮಾಡಿದೆ.  ಸೆಲ್ಫಿ ಚಿತ್ರ/ವಿಡಿಯೋಗಳನ್ನು ಎಡಿಟ್‌ ಮಾಡಿ, ಅದಕ್ಕೆ ಧ್ವನಿ, ದೃಶ್ಯ, ಸಂಗೀತ, ಸಂಭಾಷಣೆ ಸೇರಿಸಬಹುದಾದಂತ ವೆಲ್ಫಿ, ಡಬ್‌ಸ್ಮಾಶ್‌, ಲೆಜೆಂಡ್‌, ಆ್ಯಂಡ್ರೊವಿಜ್‌ನಂತಹ ಆಪ್ಲಿಕೇಷನ್ಸ್‌ಗಳ ಬಳಕೆಯೂ ಹೆಚ್ಚುತ್ತಿದೆ. ಹೀಗಾಗಿ  ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ತಲೆಮಾರಿನ ಸೆಲ್ಫಿ ಕ್ಯಾಮೆರಾಗಳು ಅಭಿವೃದ್ಧಿಯಾಗುತ್ತಿವೆ.

ಲೆನೊವೊ ಮತ್ತು ಎಲ್‌.ಜಿ ಕಂಪೆನಿಗಳು ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ, ಎರಡೆರಡು ಫ್ರಂಟ್‌ ಫೇಸಿಂಗ್ ಕ್ಯಾಮೆರಾಗಳಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿವೆ.  ‘ಲೆನೊವೊ ವೈಬ್‌ ಎಸ್‌–1’  ಮತ್ತು  ‘ಎಲ್‌ಜಿ ವಿ–10’  ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಭಾಗದಲ್ಲಿ  ಒಂದು ಕ್ಯಾಮೆರಾ ಇದ್ದರೆ, ಮುಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ‘ಲೆನೊವೊ ವೈಬ್‌ ಎಸ್‌–1’ನಲ್ಲಿ ಮುಂಭಾಗದ ಒಂದು ಕ್ಯಾಮೆರಾ 2 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು 8 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದೆ.  

ಸೃಜನಶೀಲ ‘ಸೆಲ್ಫಿ’ ತೆಗೆಯುವವರಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತದೆ ಕಂಪೆನಿ. ಚಿತ್ರದಲ್ಲಿ ಹಿನ್ನೆಲೆಯ ಎಲ್ಲ ದೃಶ್ಯಗಳು  ಸ್ಪಷ್ಟವಾಗಿ ದಾಖಲಾಗಬೇಕು. ಇದಕ್ಕಾಗಿ ಗ್ರಾಹಕರಿಗೆ ಎರಡು  ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಸ್ಥಳ, ಸಮಯ ಮತ್ತು ಬೆಳಕಿನ ಲಭ್ಯತೆಗೆ ತಕ್ಕಂತೆ ಗ್ರಾಹಕರು ಎರಡರಲ್ಲಿ ತಮಗೆ ಬೇಕಿರುವ ಕ್ಯಾಮೆರಾದಲ್ಲಿ ಚಿತ್ರಗಳನ್ನು ಸೆರೆಹಿಡಿಯಬಹುದು. ಒಂದು ಸಾಮಾನ್ಯ ‘ಸೆಲ್ಫಿ’ ಕ್ಯಾಮೆರಾ ಆಗಿದ್ದರೆ, ಇನ್ನೊಂದು ದುರ್ಬೀನಿನಂತೆ ಕೆಲಸ ಮಾಡಲಿದೆ ಎಂದು ಕಂಪೆನಿ ಹೇಳಿದೆ.

‘ಎಲ್‌ಜಿ ವಿ–10’ನಲ್ಲೂ 5 ಮೆಗಾಪಿಕ್ಸಲ್‌ ಸಾಮರ್ಥ್ಯದ ಎರಡು ಕ್ಯಾಮೆರಾಗಳಿವೆ. ಇದರಲ್ಲಿ ಒಂದನ್ನು ಬಳಸಿ 120 ಡಿಗ್ರಿ ಕೋನದಲ್ಲಿ ಮತ್ತೊಂದನ್ನು ಬಳಸಿ 80 ಡಿಗ್ರಿ ಕೋನದಲ್ಲಿ  ‘ವೈಡ್‌ ಆ್ಯಂಗಲ್‌’ ಚಿತ್ರಗಳನ್ನು ಸೆರೆ ಹಿಡಿಯಬಹುದು. ಅಷ್ಟೇ ಅಲ್ಲ, ಎರಡೂ ಕ್ಯಾಮೆರಾಗಳನ್ನು ಜತೆಗೂಡಿಸಿ 3ಡಿ ಚಿತ್ರೀಕರಣ ಕೂಡ ಮಾಡಬಹುದು. ಒಂದೆಡೆ ಸೆಲ್ಫಿ ಕ್ಯಾಮೆರಾಗಳ ತಾಂತ್ರಿಕ ಗುಣಮಟ್ಟ ಹೆಚ್ಚುತ್ತಿದೆ. ಇನ್ನೊಂದೆಡೆ ಸೆಲ್ಫಿ ಚಿತ್ರಗಳನ್ನು ತೆಗೆಯಲು ಬಳಸುವ ಸೆಲ್ಫಿ ಸ್ಟಿಕ್‌ ಅಥವಾ ‘ಸ್ವಂತಿ ಕೋಲಿನಲ್ಲೂ’ ಭಾರಿ ಬದಲಾವಣೆಗಳಾಗಿವೆ.

ದಕ್ಷಿಣ ಕೊರಿಯಾದ ಕಂಪೆನಿಯೊಂದು ಬ್ಲೂಟೂಥ್‌ ತಂತ್ರಜ್ಞಾನ ಮತ್ತು ವಾಯಿಸ್‌ ರೆಕಾರ್ಡಿಂಗ್‌ ಸೌಲಭ್ಯವಿರುವ ಸ್ವಂತಿ ಕೋಲು ಬಿಡುಗಡೆ ಮಾಡಿದೆ.  ಕೆಲವು ಸೆಲ್ಫಿ ಸ್ಟಿಕ್‌ಗಳಲ್ಲಿ ಟೈಮರ್‌ ಸೌಲಭ್ಯವಿದೆ. ಇನ್ನು ಕೆಲವು ಬಳಕೆದಾರನ ಧ್ವನಿ, ಸನ್ನೆಯನ್ನು ಅರ್ಥ ಮಾಡಿಕೊಳ್ಳುತ್ತವೆ. ಹೌದು. ಸೆಲ್ಫಿ ಕೋಲು ಹಿಡಿದು ನಕ್ಕರೆ, ಕಣ್ಣು ರಪ್ಪೆ ಮಿಟುಕಿಸಿದರೆ, ಗಾಳಿಯಲ್ಲಿ ಕೈಯಾಡಿಸಿದರೆ, ಹಲ್ಲಿಯಂತೆ ಲೊಚಗುಟ್ಟಿದರೆ ಅಥವಾ  ಚಿಟಕಿ ಹೊಡೆದರೆ ಚಿತ್ರ ಸೆರೆಯಾಗುವ ತಂತ್ರಜ್ಞಾನವೂ ಬಂದಿದೆ.

ದಿ ಅಬ್ಸರ್ವರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.