ADVERTISEMENT

₨500ಕೋಟಿ ಆವರ್ತ ನಿಧಿಗೆ ಆಗ್ರಹ

ರೇಷ್ಮೆ ಗೂಡು, ನೂಲು ಬೆಲೆ ಸ್ಥಿರೀಕರಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರು:  ‘ಚೀನಾದ ಕಚ್ಚಾ ರೇಷ್ಮೆ ಆಮದಿನಿಂದ ರಾಜ್ಯದಲ್ಲಿ ರೇಷ್ಮೆ ಗೂಡು ಮತ್ತು ನೂಲಿನ ಬೆಲೆಯಲ್ಲಿ ಏರಿಳಿತವಾಗಿ, ರೈತರ ಮೇಲೆ ವ್ಯತಿರಿಕ್ತ ಪರಿಣಾಮವಾಗು ತ್ತಿದೆ. ಹೀಗಾಗಿ, ಸರ್ಕಾರ ಕೂಡಲೇ ₨500 ಕೋಟಿ ಆವರ್ತ ನಿಧಿ ಸ್ಥಾಪಿಸಿ ರೇಷ್ಮೆ ಗೂಡು ಬೆಲೆ ಸ್ಥಿರೀಕರಣಗೊಳಿಸ ಬೇಕು’ ಎಂದು ಭಾರತ ರೇಷ್ಮೆ ಸಂಘದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಆಮದು ರೇಷ್ಮೆ ಮೇಲಿನ ತೆರಿಗೆ ಈ ಹಿಂದೆ  ಶೇ 15 ರಷ್ಟಿತ್ತು. ಕೇಂದ್ರ ಸರ್ಕಾರ ಅದನ್ನು ಇತ್ತೀಚೆಗೆ ಶೇ 10ಕ್ಕೆ ಇಳಿಕೆ ಮಾಡಿದೆ. ಇದ ರಿಂದ, ಆಮದು ಹೆಚ್ಚಿ ಸ್ಥಳೀಯ ರೇಷ್ಮೆ ಗೂಡಿನ ಬೆಲೆ ಕುಸಿತವಾಗುತ್ತಿದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ, ತೆರಿಗೆಯನ್ನು  ಮೊದಲಿನಂತೆಯೇ ಶೇ 15ಕ್ಕೆ ಏರಿಕೆ ಮಾಡಬೇಕು’ ಎಂದರು.

‘ರೈತರ ಹಿತಕಾಯುವ ದೃಷ್ಟಿಯಿಂದ ಸರ್ಕಾರ ಕೂಡಲೇ ರೇಷ್ಮೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ಜತೆಗೆ, ಆವರ್ತ ನಿಧಿ ಸ್ಥಾಪಿಸಬೇಕು. ಒಂದೊಮ್ಮೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ  ಕೆಳಗೆ ಬೆಲೆ ಕುಸಿತವಾದರೆ ಆವರ್ತ ನಿಧಿಯ ಹಣ ಬಳಸಿಕೊಂಡು ರೈತರಿಗೆ ವ್ಯತ್ಯಾಸವಾಗುವ ಹಣವನ್ನು ಭರಿಸಬೇಕು’ ಎಂದು ತಿಳಿಸಿದರು.

‘ಬೆಳೆಗಾರರು, ಮೊಟ್ಟೆ ಉತ್ಪಾದ ಕರು, ಚಾಕಿ ಸಾಕಾಣಿಕೆದಾರರು, ರೀಲರ್‌ ಗಳು, ನೇಕಾರರು, ವರ್ತಕರು, ರಫ್ತುದಾ ರರು, ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡಂತೆ ರೇಷ್ಮೆ ಸಚಿವರ ಅಧ್ಯಕ್ಷತೆ ಯಲ್ಲಿ ರೇಷ್ಮೆ ಉದ್ಯಮದ ಭಾಗಿದಾರ ಪ್ರತಿನಿಧಿಗಳ ಸಮಿತಿ ರಚಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಿ ರೇಷ್ಮೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಕ್ರಮ ರೂಪಿಸ ಬೇಕು’ ಎಂದು ಸಲಹೆ ನೀಡಿದರು.

‘ಬಿತ್ತನೆ ಗೂಡುಗಳ ಮಾರಾಟದ ಹಣ ಪಾವತಿಗೆ ಬಹಳ ವಿಳಂಬವಾಗು ತ್ತಿದೆ. ಆದ್ದರಿಂದ, ಗೂಡು ಮಾರಾಟದ ದಿನದಂದೇ ವಿದ್ಯುನ್ಮಾನ  ವ್ಯವಸ್ಥೆ (ಇಸಿಎಸ್‌) ಮೂಲಕ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು. ರೇಷ್ಮೆ ಮೊಟ್ಟೆ ತಯಾರಿಕೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಆರೋಗ್ಯ ವಿಮೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ರೇಷ್ಮೆ ಪ್ರದೇಶ ಇಳಿಕೆ: ‘ಈ ಹಿಂದೆ ರಾಜ್ಯ ದಲ್ಲಿ 1.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿತ್ತು. ಆದರೆ, ಬೆಲೆ ಏರಿಳಿತದಿಂದ ರೈತರು ಕೈಸುಟ್ಟುಕೊಂಡು ಬೇರೆ ಕೃಷಿಯತ್ತ ವಲಸೆ ಹೋಗುತ್ತಿದ್ದಾರೆ. ಪರಿಣಾಮ, ಕಳೆದ ಹತ್ತು ವರ್ಷಗಳಲ್ಲಿ ರೇಷ್ಮೆ ಕೃಷಿ 87 ಸಾವಿರ ಹೆಕ್ಟೇರ್‌ಗೆ ಇಳಿಕೆ ಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿ ದರೆ ಮುಂದೊಂದು ದಿನ ರೇಷ್ಮೆ ಕೃಷಿಯೇ ಕಣ್ಮರೆಯಾಗುತ್ತದೆ’ ಎಂದು ಸಂಘದ ಉಪಾಧ್ಯಕ್ಷ ವಿ.ಬಾಲಸುಬ್ರಮಣಿಯನ್‌ ಹೇಳಿದರು.

ಮೈಸೂರು ಪವರ್‌ಲೂಮ್‌ ಸಿಲ್ಕ್‌ ಮ್ಯಾನುಫ್ಯಾಕ್ಚರರ್ಸ್‌ ಕೋ–ಆಪರೇಟಿವ್‌  ಸೊಸೈಟಿ ಅಧ್ಯಕ್ಷ ಸಿ.ಬನಶಂಕರ್‌ ಮಾತನಾಡಿ, ‘ಕೈಮಗ್ಗ ಮೀಸಲಾತಿ ಕಾಯ್ದೆ ಪ್ರಕಾರ ವಿದ್ಯುತ್‌ ಚಾಲಿತ ಮಗ್ಗದಲ್ಲಿ ಬಣ್ಣದ ರೇಷ್ಮೆ ಬಟ್ಟೆಗಳನ್ನು ನೇಯುವಂತಿಲ್ಲ. ಆದರೆ, ಇತ್ತೀಚೆಗೆ ಕೈಮಗ್ಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರ ಈ ಕಾಯ್ದೆ ಸಡಿಲಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.