ADVERTISEMENT

₹820 ಕೋಟಿ ಸಂಗ್ರಹ ನಿರೀಕ್ಷೆ

ಚಿನ್ನದ ಬಾಂಡ್‌ 5ನೇ ಕಂತಿಗೆ 2 ಲಕ್ಷ ಅರ್ಜಿ: ದೀಪಾವಳಿಗೂ ಮುನ್ನ 6ನೇ ಕಂತು

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
₹820 ಕೋಟಿ ಸಂಗ್ರಹ ನಿರೀಕ್ಷೆ
₹820 ಕೋಟಿ ಸಂಗ್ರಹ ನಿರೀಕ್ಷೆ   

ನವದೆಹಲಿ: ಚಿನ್ನದ ಬಾಂಡ್‌ ಯೋಜನೆಯ ಐದನೇ ಕಂತಿನಲ್ಲಿ ₹820 ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಂದಾಜು 2.37 ಟನ್‌ಗಳಷ್ಟು ಪ್ರಮಾಣದ ಚಿನ್ನದ ಖರೀದಿಗೆ 2 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಬಾಂಡ್‌ ಖರೀದಿಗೆ ಬೇಡಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಆರನೇ ಕಂತಿನ ಯೋಜನೆಯು ದೀಪಾವಳಿಗೂ ಮುನ್ನವೇ ಆರಂಭವಾಗಲಿದ್ದು, ಹೆಚ್ಚು ಆಕರ್ಷಣೀಯವಾಗಿರಲಿದೆ ಎಂದೂ ಸರ್ಕಾರ ಹೇಳಿದೆ.
ಐದನೇ ಕಂತಿನ ಬಾಂಡ್‌ ವಿತರಣೆ ಬೆಲೆಯು ಪ್ರತಿ ಗ್ರಾಂಗೆ ₹3,150ರಷ್ಟು ಗರಿಷ್ಠ ಮಟ್ಟದಲ್ಲಿದೆ. ಇದು ಆಗಸ್ಟ್‌ 22 ರಿಂದ 26ರವರೆಗೆ ಶೇ 99.9ರಷ್ಟು ಶುದ್ಧತೆ ಇರುವ ಚಿನ್ನದ ವಹಿವಾಟಿನ ಅಂತ್ಯದ ಸರಾಸರಿ ಬೆಲೆಯಾಗಿದೆ ಎಂದು ಇಂಡಿಯನ್‌ ಬುಲಿಯನ್‌ ಆ್ಯಂಡ್‌ ಜುವೆಲರ್ಸ್‌ ಅಸೋಸಿಯೇಷನ್‌ (ಐಬಿಜೆಎ) ತಿಳಿಸಿದೆ.

2015–16ನೇ ಆರ್ಥಿಕ ವರ್ಷದಲ್ಲಿ ಮೂರು ಕಂತಿನಲ್ಲಿ ಯೋಜನೆ  ಜಾರಿಗೊಳಿಸಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಒಟ್ಟು ಎರಡು ಕಂತಿನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. 4ನೇ ಕಂತು, 2016ರ ಜುಲೈ 18 ರಿಂದ 22ರವರೆಗೆ ಮತ್ತು 5ನೇ ಕಂತು 2016ರ ಸೆಪ್ಟೆಂಬರ್‌ 1 ರಿಂದ 9ರವರೆಗೆ ಜಾರಿಯಲ್ಲಿತ್ತು.

ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಷೇರುಪೇಟೆ (ಬಿಎಸ್‌ಇ ಮತ್ತು ಎನ್‌ಎಸ್‌ಇ), ಸ್ಟಾಕ್‌ ಹೋಲ್ಡಿಂಗ್ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಎಸ್‌ಎಚ್‌ಸಿಐಎಲ್‌) ಈ ಬಾಂಡ್‌ಗಳನ್ನು  ಮಾರಾಟ ಮಾಡಲಿವೆ.

ಬಾಂಡ್‌ಗಳನ್ನು ಹೆಚ್ಚು ಆಕರ್ಷಕಗೊಳಿಸಲು ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಕನಿಷ್ಠ ಹೂಡಿಕೆಯನ್ನು 2 ಗ್ರಾಂಗಳಿಂದ 1 ಗ್ರಾಂಗಳಿಗೆ ಇಳಿಸಲಾಗಿದೆ. ವರ್ಷಕ್ಕೆ ವ್ಯಕ್ತಿಯೊಬ್ಬನ ಗರಿಷ್ಠ ಹೂಡಿಕೆ ಮಿತಿಯನ್ನು 500 ಗ್ರಾಂಗಳಿಗೆ ನಿಗದಿಪಡಿಸಲಾಗಿದೆ. ಬಾಂಡ್‌ಗಳಿಗೆ ವಾರ್ಷಿಕ ಶೇ 2.75 ಬಡ್ಡಿ ದರ  ನಿಗದಿಪಡಿಸಲಾಗಿದ್ದು, ಆರಂಭಿಕ ಹೂಡಿಕೆಗೆ ಅರ್ಧ ವರ್ಷಕ್ಕೊಮ್ಮೆ ಬಡ್ಡಿ ಪಾವತಿಸಲಾಗುವುದು.

ಅವಧಿ ವಿಸ್ತರಣೆ: ಚಿನ್ನದ ಬಾಂಡ್‌ನ ಐದನೇ ಕಂತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಹೀಗಾಗಿ ಬಾಂಡ್ ನೀಡಿಕೆ ಅವಧಿಯನ್ನು  ಸೆಪ್ಟೆಂಬರ್‌ 23 ರಿಂದ 30ಕ್ಕೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ  ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಾಂಡ್‌ ಖರೀದಿಗೆ ಗ್ರಾಹಕರು ಬರುತ್ತಿದ್ದಾರೆ. ಈ ಅರ್ಜಿಗಳನ್ನು ಆರ್‌ಬಿಐನ ಇ–ಕುಬೇರ್‌ ವ್ಯವಸ್ಥೆಗೆ ಅಪ್‌ಲೋಡ್‌ ಮಾಡಲು ಸಮಯ ಹಿಡಿಯುತ್ತದೆ. ಈ ಕಾರಣಕ್ಕಾಗಿ ಬಾಂಡ್‌ ನೀಡಿಕೆ ಅವಧಿ  ವಿಸ್ತರಿಸಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.