ADVERTISEMENT

ಸ್ಥಿರತೆಯತ್ತ ಷೇರುಪೇಟೆ ಪಯಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:31 IST
Last Updated 16 ಜೂನ್ 2018, 9:31 IST

ವಾರದಿಂದ ವಾರಕ್ಕೆ ಷೇರುಪೇಟೆ ಸಂವೇದಿ ಸೂಚ್ಯಂಕದ ಬದಲಾವಣೆ ಯನ್ನು ಗಮನಿಸಿದಾಗ ಕೇವಲ ಎರಡು ಅಂಶಗಳ ಏರಿಕೆ ಪೇಟೆಗೆ ಸ್ಥಿರತೆ ತಂದಿದೆ ಎಂಬ ಭಾವವನ್ನು ಮೂಡಿಸುತ್ತದೆ. ಇದು ಸಹಜ. ಆದರೆ ಆಂತರಿಕವಾಗಿ ನಿತ್ಯದ ಬದಲಾವಣೆಗಳನ್ನು ಗಮನಿಸಿ ದಾಗ ಪೇಟೆಯಲ್ಲಿನ ಉಬ್ಬರವಿಳಿತಗಳ ವಾಸ್ತವ ಅರಿವಾಗುತ್ತದೆ.

ವಾರದ ಆರಂಭದ ದಿನ ಸಂವೇದಿ ಸೂಚ್ಯಂಕವು 551 ಅಂಶಗಳ ಕುಸಿತ ಕಂಡು, ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕಗಳಲ್ಲಿಯೂ ಹೆಚ್ಚಿನ ಹಾನಿ ಗೋಚರಿಸುವಂತೆ ಮಾಡಿತು. ಈ ಕುಸಿತದ ನಡೆ ಮಂಗಳವಾರವೂ ಮುಂದುವರೆಯಿತು. 

ಮೂಲಾಧಾರಿತ ಪೇಟೆಯ ಚುಕ್ತಾದಿನದ ಮುಂಚಿನ ದಿನ ಬುಧವಾರ ತನ್ನ ಇಳಿಕೆಯ ದಿಶೆ ಬದಲಿಸಿ ಏರಿಕೆಯತ್ತ ತಿರುಗಿ ವಾರಾಂತ್ಯದ ಶುಕ್ರವಾರ 409 ಅಂಶಗಳ ಭಾರಿ ಏರಿಕೆಯೊಂದಿಗೆ ಸ್ಥಿರತೆಯತ್ತ ಸಾಗುತ್ತಿರುವ ಚಿತ್ರಣ ನೀಡಿದೆ.

ಇಂತಹ ಚಿತ್ರಣದ  ಹಿಂದೆ ಸ್ಥಳೀಯ ವಿತ್ತೀಯ ಸಂಸ್ಥೆಗಳ ಪಾತ್ರ ಪ್ರಮುಖ ವಾದುದು. ಇವು ವಾರದುದ್ದಕ್ಕೂ ಷೇರು ಖರೀದಿ ಹಾದಿಯಲ್ಲಿಯೇ ಇದ್ದವು. ವಿದೇಶಿ ವಿತ್ತೀಯ ಸಂಸ್ಥೆಗಳ ಸತತ ಮಾರಾಟದ ಚಟುವಟಿಕೆಗೆ ವಿರುದ್ಧವಾಗಿ, ಷೇರುಗಳನ್ನು ಖರೀದಿಸಿ ಪೇಟೆಯಲ್ಲಿ ಸ್ಥಿರತೆಯನ್ನು ಮೂಡಿಸಲು ಯತ್ನಿಸಿದವು. ಈ ವಾರದ ಅಂತ್ಯದ ಚಿತ್ರಣದಲ್ಲಿ ಬ್ಯಾಂಕಿಂಗ್ ವಲಯ, ಟೈರ್ ಕಂಪೆನಿ ಗಳು, ರಿಯಲ್ ಎಸ್ಟೇಟ್ ವಲಯದ ಕಂಪೆನಿಗಳು ಚುರುಕಾಗಿದ್ದವು.

ಬ್ಯಾಂಕ್‌ಗಳಿಗೆ ನೆರವು: ವಸೂಲಾಗದ ಸಾಲಗಳ (ಎನ್‌ಪಿಎ) ಸುಳಿಯಿಂದ ಹೊರಬರಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲು ಕೇಂದ್ರ ಹಣಕಾಸು ಸಚಿವಾಲಯ ಮುಂದಿನ ನಾಲ್ಕು ವರ್ಷಗಳಲ್ಲಿ ₹70 ಸಾವಿರ ಕೋಟಿ ಹೆಚ್ಚುವರಿ ಬಂಡವಾಳ ನೀಡಲು ನಿರ್ಧರಿಸಿದೆ.  ಈ ವರ್ಷ ₹25 ಸಾವಿರ ಕೋಟಿ ನೀಡಲಿದೆ. ಈ ಸುದ್ದಿಯಿಂದ  ಪ್ರೇರಿತವಾಗಿ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಕಳೆದ ವಾರ ಮಿಂಚು ಸಂಚರಿಸಿ ಅನಿರೀಕ್ಷಿತ ಏರಿಕೆಗೂ ಕಾರಣವಾಯಿತು. ಬ್ಯಾಂಕ್ ಆಫ್ ಬರೋಡಾ  ವಾರದಿಂದ ವಾರಕ್ಕೆ ₹152ರಿಂದ ₹179ರವರೆಗೂ ಜಿಗಿತ ಕಂಡು, ಶುಕ್ರವಾರ ₹166ರಿಂದ ₹179ರವರೆಗೂ ಏರಿಕೆ ಪ್ರದರ್ಶಿಸಿದೆ.

ಕಳೆದ ವಾರ ಕೆನರಾ ಬ್ಯಾಂಕ್ ಅದರ ವಾರ್ಷಿಕ ಕನಿಷ್ಠ ಮಟ್ಟವಾದ ₹254ಕ್ಕೆ ತಲುಪಿತು. ವಾರಾಂತ್ಯದ ದಿನ ಮತ್ತೆ ₹284ಕ್ಕೆ ಜಿಗಿತ ಕಂಡು ₹276ರಲ್ಲಿ ಕೊನೆಗೊಂಡಿದೆ. ಇದೇ ಶೈಲಿಯ ಏರಿಕೆಯನ್ನು ಪ್ರಮುಖ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರುಗಳು ಪ್ರದರ್ಶಿಸಿದವು. ಸಿಂಡಿಕೇಟ್ ಬ್ಯಾಂಕ್ ತ್ರೈಮಾಸಿಕ ಫಲಿತಾಂಶವು ಉತ್ತೇಜಕವಾಗಿಲ್ಲ ಎಂದು ಷೇರಿನ ಬೆಲೆಯನ್ನು ವಾರ್ಷಿಕ ಕನಿಷ್ಠ ₹86ಕ್ಕೆ ಕುಸಿಯಿತು. ವಾರಾಂತ್ಯದ ದಿನ ₹96ಕ್ಕೆ ಏರಿಕೆ ಕಾಣುವಂತಾಯಿತು.

ಕಂಪೆನಿಗಳ ಉತ್ತಮ ಫಲಿತಾಂಶ: ಮಾಧ್ಯಮ ಕಂಪೆನಿ ಸನ್ ಟಿ.ವಿ  ಇತ್ತೀಚಿನ ದಿನಗಳಲ್ಲಿ ಭಾರಿ ಕುಸಿತ ಕಂಡಿದ್ದು, ಚುಕ್ತಾ ಚಕ್ರದ ಈ ವಾರ ಸುಮಾರು ಶೇ 23ರಷ್ಟು ಏರಿಕೆ ಕಂಡಿದೆ. ಟೈರ್ ಕಂಪೆನಿ ಎಂ.ಆರ್.ಎಫ್ ಮತ್ತು ಸಿಯಟ್ ಉತ್ತಮ ಫಲಿತಾಂಶ ಪ್ರಕಟಿಸಿದ ಕಾರಣ ಇದುವರೆಗೂ ನಿರ್ಲಕ್ಷಕ್ಕೊಳಗಾಗಿದ್ದ ಜೆ.ಕೆ.ಟೈರ್, ಅಪೊಲೊ ಟೈರ್ ಕಂಪೆನಿಗಳ ಷೇರು ಗಮನಾರ್ಹ ಏರಿಕೆಯಿಂದ ಹೂಡಿಕೆದಾರರನ್ನು ಹರ್ಷಿತಗೊಳಿಸಿದವು. 

ಫಾರ್ಮಾ ಕಂಪೆನಿ ಲುಪಿನ್ ಈ ವಾರ ₹1590ರವರೆಗೂ ಕುಸಿದು ನಂತರ ಚೇತರಿಕೆ ಕಂಡು ವಾರಾಂತ್ಯದ ದಿನ ₹1705 ರ ಗರಿಷ್ಠ  ಮಟ್ಟ ತಲುಪಿತು. ಟೊರೆಂಟ್ ಫಾರ್ಮಾ, ಸಿಪ್ಲಾ, ಮೊದಲಾದ ಔಷಧ ತಯಾರಿಕೆ ವಲಯದ ಕಂಪೆನಿಗಳ ಷೇರುಗಳು ಏರಿಕೆಗೆ ಕೈಜೋಡಿಸಿದವು.
ವಿಮಾನಯಾನ ವಲಯದ ಕಂಪೆನಿ ಜೆಟ್ ಏರ್‌ವೇಸ್‌ ಈ ವಾರ ₹307ರಿಂದ ₹408ರವರೆಗೂ ಏರಿಕೆ ಕಂಡಿದೆ. ಈ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ಆಗಸ್ಟ್‌ 14 ರಂದು ನಡೆಯಲಿದೆ.

ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಕ್ಷೇಮ ನಿಧಿ ಹಣವು ಪೇಟೆಯತ್ತ ಹರಿದು ಬರುವ ನಿರೀಕ್ಷೆಯು ಸಹ ಪೇಟೆಯನ್ನು ಉಲ್ಲಸಿತಗೊಳಿಸಲು ಕಾರಣವಾಗಿದೆ. ಇದರ ಹಿಂದೆ ಇತ್ತೀಚಿನ ದಿನಗಳಲ್ಲಿ ಪೇಟೆಯಲ್ಲಿ ಪ್ರಮುಖ ವಲಯದ ಕಂಪೆನಿಗಳು ಕಂಡಿದ್ದ ಭಾರಿ ಇಳಿಕೆಯು ಮುಖ್ಯ ಕಾರಣವಾಗಿ  ಶುಕ್ರವಾರದ ಬೃಹತ್ ಏರಿಕೆಯ ಹಿಂದೆ ವ್ಯಾಲ್ಯೂ ಪಿಕ್ ಎಂಬ ಮೂಲ ತತ್ವ ಅಡಕವಾಗಿದೆ ಎಂಬುದು ನಿರ್ವಿವಾದ.

ಈ ವಾರ ಸ್ಥಳೀಯ ವಿತ್ತೀಯ ಸಂಸ್ಥೆಗಳು ಒಟ್ಟು  ಮೂರು ಸಾವಿರ ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದರೆ ವಿದೇಶಿ ವಿತ್ತೀಯ ಸಂಸ್ಥೆ ಗಳು ಸುಮಾರು ₹2800 ಕೋಟಿಗೂ ಹೆಚ್ಚಿನ ಷೇರು ಮಾರಾಟಮಾಡಿವೆ. ಪೇಟೆಯ ಬಂಡವಾಳೀಕರಣ  ಮೌಲ್ಯ ₹104.79 ಲಕ್ಷ ಕೋಟಿಯಲ್ಲಿತ್ತು.

ಹೊಸ ಷೇರು: ಅದಾನಿ ಟ್ರಾನ್ಸ್ ಮಿಷನ್ ಕಂಪೆನಿಯು ಅದಾನಿ ಎಂಟರ್ಪ್ರೈಸಸ್ ನಿಂದ ಬೇರ್ಪಡಿಸಿದ ಟ್ರಾನ್ಸ್ ಮಿಷನ್ ವಿಭಾಗವನ್ನು ತನ್ನಲ್ಲಿ ವಿಲೀನಗೊಳಿಸಿ ಕೊಂಡಿದ್ದು ಜುಲೈ 31 ರಿಂದ ಬಿಎಸ್‌ಇನ  ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. 
 
ಬೋನಸ್ ಷೇರು: ಅನೂ ಫಾರ್ಮ ಕಂಪೆನಿ ವಿತರಿಸಲಿರುವ 2:1 ರ ಅನುಪಾತದ ಬೋನಸ್ ಷೇರಿಗೆ ಆಗಸ್ಟ್ 6 ನಿಗದಿತ ದಿನವಾಗಿದೆ.
ಕಾಲ್ಗೇಟ್ ಪಾಲ್ಮೊಲೀವ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ವಿತರಿಸಲಿದೆ. ಆಪ್ಕೋಟೆಕ್ಸ್ ಇಂಡಸ್ಟ್ರೀಸ್ ಕಂಪೆನಿಯು 1:1 ರ ಅನುಪಾತದ ಬೋನಸ್ ಷೇರು ವಿತರಿಸಲಿದೆ.

ವಹಿವಾಟಿನಿಂದ ಹಿಂದಕ್ಕೆ: ಬಹುರಾಷ್ಟ್ರೀಯ ಕಂಪೆನಿ ಫುಲ್ ಫೋರ್ಡ್ (ಇಂಡಿಯಾ) ಲಿ. ಪ್ರತಿ ಷೇರಿಗೆ ₹2400 ರಂತೆ ತನ್ನ ಷೇರುದಾರರಿಂದ ಹಿಂಕೊಂಡು ಡಿಲೀಸ್ಟಿಂಗ್ ನಿಯಮಗಳಿಗನುಸಾರ ಪ್ರಕ್ರಿಯೆಗಳನ್ನು ಪೂರೈಸಿರುವುದರಿಂದ ಆಗಸ್ಟ್ 7 ರಿಂದ ಡಿಲೀಸ್ಟ್ ಆಗಲು ಅನುಮತಿಸಲಾಗಿದೆ. ಹಾಗಾಗಿ ಜುಲೈ 31 ರಿಂದ ಈ ಷೇರಿನ ವಹಿವಾಟು ಸ್ಥಗಿತವಾಗಿದೆ.  ಆದರೂ ಷೇರುಗಳನ್ನು ಹಿಂದಿರುಗಿಸಲು ಆಸಕ್ತ ಷೇರು ದಾರರಿಂದ ಮುಂದಿನ ಒಂದು ವರ್ಷದವರೆಗೂ ಷೇರುದಾರರಿಂದ ನಿರ್ಗಮನ ದರವಾದ ₹2400ರಲ್ಲಿ  ಮರು ಖರೀದಿ ಮಾಡಲಿದೆ.

ಷೇರು ಮರು ಖರೀದಿ: ಬಾಯೆರ್ ಕ್ರಾಪ್ ಸೈನ್ಸ್ ಲಿ. ಕಂಪೆನಿಯು ತನ್ನ ಷೇರುದಾರರಿಂದ ಷೇರುಗಳನ್ನು, ಸೆಬಿಯ ನಿಯಮ 8(1) ರ ಪ್ರಕಾರ ಪ್ರತಿ ಷೇರಿಗೆ ₹4 ಸಾವಿರದಂತೆ ಮರು ಖರೀದಿ ನಡೆಸಲಿದ್ದು, ಇದಕ್ಕೆ ಆಗಸ್ಟ್ 4 ನಿಗದಿತ ದಿನವಾಗಿದೆ. ಕೇವಲ 12.65 ಲಕ್ಷ ಷೇರುಗಳನ್ನು ಮಾತ್ರ ಈ ಯೋಜನೆಯಂತೆ ಮರು ಖರೀದಿ ಮಾಡಲಾಗುವುದು. ಇದು ಡಿಲೀಸ್ಟಿಂಗ್ ಅಲ್ಲ.
*
ಷೇರುಪೇಟೆಯಲ್ಲಿ ನಡೆಯುತ್ತಿರುವ ವಹಿವಾಟಿನ ಶೈಲಿಗಳು ದಿನೇ ದಿನೇ ಬದಲಾಗುತ್ತಿದೆ. ಅರವಿಂದ್ ಲಿ.,  ಕಂಪೆನಿಯು ಗುರುವಾರದಂದು ಲಾಭಾಂಶದ ನಂತರದ ವಹಿವಾಟಿನಲ್ಲಿ ₹285 ರ ಸಮೀಪದಿಂದ ₹323 ರರವರೆಗೂ ಜಿಗಿತ ಕಂಡಿದ್ದಾಗಲಿ,  ಪಿರಮಲ್ ಎಂಟರ್ಪ್ರೈಸಸ್ ಕಂಪೆನಿಯ ಪ್ರತಿ ಷೇರಿಗೆ ₹ 20 ಲಾಭಾಂಶದ ನಂತರ ತೋರಿದ ಭಾರಿ ಏರಿಳಿತ, ರಾಜೇಶ್ ಎಕ್ಸ್‌ಪೋರ್ಟ್‌ ಕಂಪೆನಿಯು ₹520ರಿಂದ ₹450ರ ಸಮೀಪಕ್ಕೆ ಇಳಿದು ನಂತರ ₹520 ನ್ನು ತಲುಪಿದ ರೀತಿಯಾಗಲಿ, ಹಿಂದಿನ ಪದ್ಧತಿಗಳಿಗೆ ವಿರುದ್ಧವಾಗಿದೆ.

ಸಾಮಾನ್ಯವಾಗಿ ಬೋನಸ್ ಷೇರು ವಿತರಣೆ ಪ್ರಕಟಿಸಿದಲ್ಲಿ ಷೇರಿನ ಬೆಲೆಯು ಏರಿಕೆ ಕಾಣುವುದು ಸಹಜ ಆದರೆ ಕಾಲ್ಗೇಟ್ ಪಾಲ್ಮೊಲೀವ್ ಕಂಪೆನಿಯಿಂದ ಬೋನಸ್ ಷೇರು ಪ್ರಕಟಣೆಯಾದ ನಂತರ ಬೆಲೆ ಕುಸಿತ ಕಂಡಿದೆ. ಕಂಪೆನಿಯ ಸಾಧನೆಯು, ಕಳೆದ ತ್ರೈಮಾಸಿಕದಲ್ಲಿ ಪ್ರೋತ್ಸಾಹ ದಾಯಿಕವಲ್ಲ ಎಂಬುದು ತರ್ಕವಾದರೆ, ಕಳೆದ ಕೆಲವು ದಶಕಗಳಲ್ಲಿ ಪ್ರಥಮ ಭಾರಿ ಹಾನಿಗೊಳಗಾದ ನೆಸ್ಲೆ ಕಂಪೆನಿಯ ಫಲಿತಾಂಶ ಪ್ರಕಟಣೆ ನಂತರ ಷೇರಿನ ಬೆಲೆಯು ಏರಿಕೆ ಕಂಡಿತು. ಇದು ಸಹ ಅನಿರೀಕ್ಷಿತ ಚಲನೆ.

ಇತ್ತೀಚಿನ ದಿನಗಳಲ್ಲಿ ಕ್ಯಾಸ್ಟೆಕ್ಸ್ ಟೆಕ್ನಾಲಜೀಸ್, ಸ್ಟೀಲ್ ಸ್ಟ್ರಿಪ್ಸ್ ಅಂಡ್ ವೀಲ್ಸ್, ಯುಫ್ಲೆಕ್ಸ್, ಹಿಮ್ಮತ್ ಸಿಂಗ್ಕ, ಮೆಟಲಿಸ್ಟ್ ಫೋರ್ಜ್,  ಮುಂತಾದ ಕಂಪೆನಿಗಳಲ್ಲಿನ ಏರಿಳಿತಗಳಿಗೆ ಕಾರಣವನ್ನು ಹುಡುಕಿ ನಿರ್ಧರಿಸಲು ಸಾಧ್ಯವಿಲ್ಲದಷ್ಟು ವೇಗ ಪ್ರದರ್ಶಿಸಲಾಗಿದೆ. 
ಒಟ್ಟಿನಲ್ಲಿ ಎಲ್ಲವನ್ನು ವ್ಯವಹಾರಿಕ ರೀತಿ ನೋಡುವ ಈಗಿನ ದಿನಗಳಲ್ಲಿ ದೀರ್ಘಕಾಲೀನ ಹೂಡಿಕೆಯು ಮರೀಚಿಕೆಯಂತಾಗಿದೆ. ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮಂತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಅಗಾಧ ಅವಕಾಶಗಳನ್ನು ಪೇಟೆ ಒದಗಿಸುತ್ತಿದೆ ಎನ್ನಬಹುದು. ಇಲ್ಲಿ ಹೂಡಿಕೆಯ ಅವಧಿ ನಗಣ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT