ADVERTISEMENT

ಬಾಲ್ಯ ವಿವಾಹ ವಿರುದ್ಧ ಕಿಡಿ ಹೊತ್ತಿಸಿದ ಬಾಲೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:12 IST
Last Updated 16 ಜೂನ್ 2018, 9:12 IST

ಪಶ್ಚಿಮ ಬಂಗಾಳ ಹುಡುಗಿಯೊಬ್ಬಳು ಬಾಲ್ಯ ವಿವಾಹದ ವಿರುದ್ಧ ತಿರುಗಿಬಿದ್ದು ಜಗತ್ತಿನ ಗಮನ ಸೆಳೆದಿದ್ದಾಳೆ. ಪುರುಲಿಯಾ ಜಿಲ್ಲೆಯ ದೂರದ ಹಳ್ಳಿಯೊಂದರ ಹನ್ನೆರಡು ವರ್ಷದ ಹುಡುಗಿ ಮದುವೆ ಧಿಕ್ಕರಿಸಿ, ಓದು ಮುಂದುವರಿಸಿದ್ದಾಳೆ. ಈಕೆಯ ಯಶೋಗಾಥೆ­ಯನ್ನು ನೆದರಲೆಂಡ್‌ ಪತ್ರಕರ್ತ, ಲೇಖಕ ಅಲೆಟ ಆ್ಯಂಡ್ರಿ ತಮ್ಮ ‘ಚಿಲ್ಡ್ರನ್‌ ವೂ ಚೇಂಜ್ಡ್‌ ದಿ ವರ್ಲ್ಡ್‌’ ಕೃತಿಯಲ್ಲಿ ದಾಖಲಿಸುತ್ತಿದ್ದಾರೆ. ಅದು ಡಚ್‌ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ತಾಲಿ­ಬಾನಿ­ಗಳ ಆದೇಶ ಲೆಕ್ಕಿಸದೆ ಮಹಿಳಾ ಶಿಕ್ಷಣದ ಪರ ದನಿ ಎತ್ತಿದ ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಮತ್ತಿತರ 20 ಮಕ್ಕಳ ಸಾಮಾಜಿಕ ಕಾಳಜಿ ಒಳಗೊಂಡಿರುವ ಈ ಪುಸ್ತಕ ನವೆಂಬರ್‌ 20ರಂದು ಬಿಡುಗಡೆ ಆಗಲಿದೆ.

ಜಾಲ್ಡಾದ ಬಾಲ ಕಾರ್ಮಿಕ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಆ ಹುಡುಗಿ ಹೆಸರು ರೇಖಾ ಕಳಿಂದಿ. 2009ರಲ್ಲೇ ರೇಖಾ­ಳನ್ನು ಮದುವೆ ಮಾಡಿ ಜವಾಬ್ದಾರಿ ಕಳೆದು­ಕೊಳ್ಳಲು ತಂದೆ, ತಾಯಿ ಬಯಸಿದ್ದರು. ಓದುವ ಹಂಬಲದಿಂದ ಹುಡುಗಿ ಮದುವೆ ವಿರೋಧಿಸಿ­ದಳು. ಅವಳ ದನಿ ಜಿಲ್ಲಾ ಕೇಂದ್ರಕ್ಕೆ ತಲುಪಿತು. ಸರ್ಕಾರ, ಅವಳ ಬೆಂಬಲಕ್ಕೆ ಧಾವಿಸಿತು. ಅವಳ ಹೋರಾಟ ಪಶ್ಚಿಮ ಬಂಗಾಳ ಹೆಣ್ಣು ಮಕ್ಕಳಲ್ಲಿ ಸಂಚಲನ ಮೂಡಿಸಿದೆ. ಪುರುಲಿಯಾ ಜಿಲ್ಲೆ­ಯೊಂದ­ರಲ್ಲೇ 10 ಸಾವಿರ ಮಕ್ಕಳು ಶಾಲೆಗಳ ಹಾದಿ ಹಿಡಿದಿದ್ದಾರೆ. ಅವರೆಲ್ಲ ಬಾಲ್ಯ ವಿವಾಹದ ಉರುಳಿಗೆ ಕೊರಳೊಡ್ಡಲು ನಿರಾಕರಿಸುತ್ತಿದ್ದಾರೆ.

ರೇಖಾ ಆರನೇ ತರಗತಿಯಲ್ಲಿದ್ದಾಗ ಇತರ ಮಕ್ಕಳಿಗೆ ಮಾಡಿದಂತೆ ಮದುವೆ ಮಾಡಲು ಮನೆಯವರು ನಿರ್ಧರಿಸಿದರು. ಆಕೆ ಅದಕ್ಕೆ ಒಪ್ಪ­ಲಿಲ್ಲ. ಓದು ನಿಲ್ಲಿಸಲು ಸಾಧ್ಯವಿಲ್ಲವೆಂದು ಖಡಾ­ಖಂಡಿತವಾಗಿ ಹೇಳಿಬಿಟ್ಟಳು. ಮನೆಯೊಳಗೆ ಪ್ರತಿ­ಭಟನೆ ಕಿಡಿ ಹೊತ್ತಿಸಿದಳು. ಅವಳ ಪ್ರತಿಭಟನೆ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಪಶ್ಚಿಮ ಬಂಗಾಳ ಮಾತ್ರವಲ್ಲ, ಇಡೀ ವಿಶ್ವವೇ ಪುರುಲಿಯಾ ಕಡೆ ನೋಡಿತು. ಡಚ್‌ ಲೇಖಕನ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಹುಡುಗಿ ಈ ರೇಖಾ.  ಈಕೆಯ ಭಾವಚಿತ್ರವನ್ನು ಬಾಲ್ಯ ವಿವಾಹ ವಿರುದ್ಧ ಪ್ರಚಾರ ಮಾಡಲು ಮುದ್ರಿಸಿರುವ ಪೋಸ್ಟರ್‌ಗೂ ‘ಯೂನಿಸೆಫ್‌’ ಉಪಯೋಗಿಸಿದೆ.

ಐದು ವರ್ಷಗಳ ಹಿಂದೆ ಬಾಲ್ಯ ವಿವಾಹದ ವಿರುದ್ಧ ರೇಖಾ ಸಾರಿದ ಬಂಡಾಯ ವಿಳಂಬ­ವಿಲ್ಲದೆ ರಾಷ್ಟ್ರಪತಿ ಭವನ ತಲುಪಿತು. ಈ ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಈ ಬಾಲಕಿಗೆ ‘ಶೌರ್ಯ ಪ್ರಶಸ್ತಿ’ ಘೋಷಿಸಿದರು. ರಾಷ್ಟ್ರಪತಿ ಭವನಕ್ಕೂ ಕರೆಸಿಕೊಂಡು ಅಭಿನಂದಿ­ಸಿ­ದ್ದಾರೆ. ಇದಾದ ನಂತರ ಹುಡುಗಿಯ ಹೋರಾಟ ದಂತಕಥೆಯಾಗಿ ಹರಡುತ್ತಿದೆ. ಇದಾದ ಬಳಿಕವೇ  ಆ್ಯಂಡ್ರಿ ಈ ಹುಡುಗಿಯ ಹಳ್ಳಿಗೆ ಬಂದು ಹೋಗಿದ್ದು. ರೇಖಾ ತನ್ನ ಹೋರಾ­ಟದ ಕಥೆಯನ್ನು ಅವರಿಗೆ ವಿವರಿಸಿ­ದ್ದಾಳೆ. ನಾಲ್ಕು ವರ್ಷ­ಗಳಲ್ಲಿ ಪಶ್ಚಿಮ ಬಂಗಾಳ­ದಲ್ಲಿ ಬಾಲ್ಯ ವಿವಾಹಗಳ ಪ್ರಮಾಣ ಕಡಿಮೆ­ಯಾಗಿದೆ. ಆದರೆ, ಸಂಪೂರ್ಣ ನಿಂತಿಲ್ಲ. ಈ ಅನಿಷ್ಟ ಪದ್ಧತಿ ಪೂರ್ಣ ನಿಂತರೆ ತನ್ನ ಹೋರಾಟಕ್ಕೆ ಸಾರ್ಥಕತೆ ಬರುತ್ತದೆಂದು ರೇಖಾ ಹೇಳಿದ್ದಾಳೆ. ಅವಳ ಮನೆ­ಯವರಿಗೂ, ‘ನಾವು ತಪ್ಪು ಮಾಡುತ್ತಿದ್ದೆವು’ ಎನ್ನುವ ಭಾವನೆ ಈಗ ಬಂದಿದೆ. ಮಗಳು ಆರಂಭಿಸಿರುವ ಹೋರಾಟದ ಬಗ್ಗೆ ಅವರಿಗೂ ಹೆಮ್ಮೆ ಇದೆ.

ಹಳ್ಳಿ ಹುಡುಗಿ ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿದ್ದಾಳೆ. ತನ್ನಂತೆ ಸಮಸ್ಯೆ ಎದುರಿಸಿದ ಹುಡುಗಿಯರ ಜತೆಗೂಡಿ ಈ ಪಿಡುಗಿನ ವಿರುದ್ಧ ಚಳವಳಿ ರೂಪಿಸಿದ್ದಾಳೆ. ಸಭೆಗಳನ್ನು ನಡೆಸುತ್ತಿ­ದ್ದಾಳೆ. ಮಕ್ಕಳ ಮದುವೆ ವಿರುದ್ಧ ಜನರಿಗೆ ತಿಳಿ ಹೇಳುತ್ತಿದ್ದಾಳೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ಪ್ರೇರೇಪಿಸುತ್ತಿದ್ದಾಳೆ. ಈ ಹುಡುಗಿ ಸಾಮಾ­ಜಿಕ ಬದಲಾವಣೆಯ ಕೆಲಸಕ್ಕೆ ಕೈ­ಹಾಕಿದ್ದಾಳೆ.

ಪಶ್ಚಿಮ ಬಂಗಾಳ ಇಂದು ಯೋಚಿಸುವುದನ್ನು ದೇಶ ನಾಳೆ ಆಲೋಚಿಸುತ್ತದೆ ಎನ್ನುವ ಮಾತು ಒಂದು ಕಾಲದಲ್ಲಿತ್ತು. ಈಗದು ಸವಕಲಾಗಿದೆ. ಮಹಿಳಾ ಶೋಷಣೆಯ ವಿಷಯದಲ್ಲೂ ಅಷ್ಟೇ. ಈ ಬಗ್ಗೆ ಮೊದಲು ಆಲೋಚಿಸಿದ್ದು ಪಶ್ಚಿಮ ಬಂಗಾಳ. ಬಂಗಾಳದ ಸಮಾಜ ಸುಧಾರಕರು ‘ಸತಿ ಪದ್ಧತಿ’,‘ಬಾಲ್ಯ ವಿವಾಹ’ದಂಥ ಅನಿಷ್ಟಗಳ ವಿರುದ್ಧ ಮೊದಲು ಕೂಗೆಬ್ಬಿಸಿದರು. ಆದರೆ, ಈ ರಾಜ್ಯದಲ್ಲೇ ಅತೀ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬ ಸಂಗತಿ ಸಮೀಕ್ಷೆಗಳಿಂದ ಖಚಿತವಾಗಿದೆ.

ದೇಶದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರುವ ನಾಲ್ಕು ರಾಜ್ಯಗಳ ಸಾಲಿನಲ್ಲಿ ಪಶ್ಚಿಮ ಬಂಗಾಳವೂ ಸೇರಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ನಡೆಸಿರುವ ಸಮೀಕ್ಷೆ ಪ್ರಕಾರ ಈ ರಾಜ್ಯ­ದಲ್ಲಿ ನಡೆಯುತ್ತಿರುವ ಒಟ್ಟು ಮದುವೆ­ಗಳಲ್ಲಿ ಶೇಕಡ 55ರಷ್ಟು ಬಾಲ್ಯ ವಿವಾಹಗಳು.  ಕೆಲವು ಜಿಲ್ಲೆಗಳಲ್ಲಿ ಪ್ರತಿ ಎರಡು ಹೆಣ್ಣು ಮಕ್ಕ­ಳಲ್ಲಿ ಒಬ್ಬರಿಗೆ 18 ತುಂಬುವ ಮೊದಲೇ ಮದು­ವೆಯಾಗುತ್ತಿದೆ.  ಆಡುವ ವಯಸ್ಸಿನಲ್ಲಿ ಹಸೆ­ಮಣೆ ಹತ್ತಿಸಿ, ಮಕ್ಕಳ ಬದುಕನ್ನು ನರಕ ಮಾಡ­ಲಾಗುತ್ತಿದೆ. ಹದಿನೈದು ವರ್ಷ ತುಂಬುವ ಮುನ್ನ ತಾಯಿ ಆಗುವವರ ಸಂಖ್ಯೆಯೂ ಇಲ್ಲಿ ಹೆಚ್ಚಿದೆ.

ಬಾಲ್ಯ ವಿವಾಹ ಅಪರಾಧ ಎಂದು ವ್ಯಾಖ್ಯಾನಿ­ಸುವ ಕಾನೂನುಗಳು ಜಾರಿಯಲ್ಲಿವೆ. ಆದರೆ ಅವು ಸರಿಯಾಗಿ ಜಾರಿಯಾಗಿಲ್ಲ. ಪೊಲೀಸ್‌ ದಾಖ­ಲೆಗಳಲ್ಲಿ ದೊರೆಯುವ ಮಾಹಿತಿಯಂತೆ 2008ರಿಂದ 12ರವರೆಗೆ ಈ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಬಂಧಿತರಾದವರ ಸಂಖ್ಯೆ ಕೇವಲ 88. ಸರ್ಕಾರ, ಕಾನೂನನ್ನು ಹೇಗೆ ಜಾರಿ­ಗೊಳಿಸಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾ­ಹರಣೆ ಬೇಕಿಲ್ಲ.

ಬಾಲ್ಯ ವಿವಾಹದಲ್ಲಿ ಬಿಹಾರ ಮೊದಲ ಸ್ಥಾನ­ದಲ್ಲಿದೆ. ಎರಡನೇ ಸ್ಥಾನ ರಾಜಸ್ತಾನದ್ದು. ಮೂರನೇ ಸ್ಥಾನದಲ್ಲಿ ಜಾರ್ಖಂಡ್‌, ನಾಲ್ಕನೇ ಸ್ಥಾನ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾ­ಳದ್ದು. ಕರ್ನಾಟಕದಲ್ಲೂ ವಯಸ್ಸಿಗೆ ಬರುವ ಮೊದಲೇ ಮಕ್ಕಳಿಗೆ ಮದುವೆ ಮಾಡಲಾಗು­ತ್ತಿದೆ. ಗಿರಿಜನರ ಹಾಡಿಗಳಲ್ಲಿ ಸಮಸ್ಯೆ ತೀವ್ರವಾ­ಗಿದೆ. ಉತ್ತರ ಭಾರತದ ಕೆಲವು ರಾಜ್ಯಗಳ ಜನ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಿಗೆ ಹೋಗಿ ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಂಡು ಕರೆದೊಯ್ಯುವುದು ಅನೇಕ ವರ್ಷಗಳಿಂದ ನಿರಾತಂಕವಾಗಿ ನಡೆದಿದೆ. ಇದನ್ನು ವ್ಯಾಪಾರವಾಗಿ ಮಾಡಿಕೊಂಡಿರುವ ಒಂದು ದೊಡ್ಡ ದಲ್ಲಾಳಿ ವರ್ಗವೇ ಉತ್ತರ ಕರ್ನಾಟಕ­ದಲ್ಲಿದೆ. ಅದನ್ನು ತಡೆಯಲು ಗಂಭೀರ ಪ್ರಯತ್ನ ನಡೆದಿಲ್ಲ.

ದುಡ್ಡಿನ ಆಸೆಗಾಗಿ ಬಡವರು ತಮ್ಮ ಮಕ್ಕಳನ್ನು ಮದುವೆ ಮಾಡಿಕೊಡುತ್ತಿದ್ದಾರೆ. ಒಮ್ಮೆ ಮದುವೆ ಆಯಿತೆಂದರೆ ಮುಗಿಯಿತು. ಮತ್ತೆ ಹುಡುಗಿಗೆ ತವರು ಕನಸಿನ ಮಾತು. ವಿಚಿತ್ರ­ವೆಂದರೆ ಹುಡುಗಿ ತಂದೆ, ತಾಯಿಗೂ ತಮ್ಮ ಮಗಳನ್ನು ಯಾವ ಊರಿಗೆ ಮದುವೆ ಮಾಡಿ­ಕೊಟ್ಟಿದ್ದೇವೆ, ಯಾರಿಗೆ ಮದುವೆ ಮಾಡಿ­ಕೊಟ್ಟಿದ್ದೇವೆ ಎಂಬ ಖಚಿತ ಮಾಹಿತಿ ಸಿಗುವು­ದಿಲ್ಲ. ಮದುವೆಯಾಗಿ ದೂರದ ರಾಜ್ಯಗಳಿಗೆ ಹೋಗುವ ಮಗಳು ಸತ್ತಿದ್ದಾಳೋ, ಬದುಕಿ­ದ್ದಾಳೋ ಎಂದೂ ಗೊತ್ತಾಗುವುದಿಲ್ಲ.

ಬಾಲ್ಯ ವಿವಾಹ ರಾಜ್ಯಗಳಿಗೆ ತಲೆನೋವು. ಅದಕ್ಕೆ ಕಡಿವಾಣ ಹಾಕಲು ಇರುವ ದಾರಿ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡುವುದು. ಕಡ್ಡಾಯ ಶಿಕ್ಷಣವೇನೊ ನಮ್ಮಲ್ಲಿ ಜಾರಿ­ಯ­ಲ್ಲಿದೆ. ಅನುಷ್ಠಾನ ಸರಿಯಾಗಿ ಆಗಿಲ್ಲ. ಹೆಣ್ಣು ಮಕ್ಕಳ ಶಾಲಾ ಹಾಜರಾತಿ ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಧ್ಯಾ­ಹ್ನದ ಊಟ, ಸೈಕಲ್‌, ಬಟ್ಟೆ, ಪುಸ್ತಕ, ಲ್ಯಾಪ್‌ಟಾಪ್‌ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಒಂದಿಲ್ಲೊಂದು ಯೋಜನೆ ಜಾರಿಯಲ್ಲಿದೆ. ಈಚೀಚೆಗೆ ಶಾಲೆ ಅರ್ಧಕ್ಕೆ ಬಿಡುವವರ ಸಂಖ್ಯೆ ಕಡಿಮೆ ಆಗುತ್ತಿದೆ.

ಪಶ್ಚಿಮ ಬಂಗಾಳ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಿಸಲು ‘ಕನ್ಯಾಶ್ರೀ ಪ್ರಕಲ್ಪ ಯೋಜನೆ’ ಜಾರಿಗೊಳಿಸಿದೆ. ಬಾಲ್ಯ ವಿವಾಹ ತಪ್ಪಿಸಿ, ಹೆಣ್ಣು ಮಕ್ಕಳಿಗೆ ಕಲಿಯುವ ಅವಕಾಶ ಕಲ್ಪಿಸಲು ಜಾರಿ ಮಾಡಿರುವ ಈ ಯೋಜನೆ ಕಳೆದ ವರ್ಷ ಜಾರಿಗೆ ಬಂದಿದೆ. ಈ ಯೋಜನೆ ಜಾರಿ­ಯಾದ ಬಳಿಕ ಶಾಲೆಗೆ ಬರುವ ಹೆಣ್ಣು­ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಶೇ 13ರಷ್ಟು ಹೆಚ್ಚಾಗಿದೆ. ಈ ಪ್ರಮಾಣ ಕಡಿಮೆಯೇನಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪರಿಸ್ಥಿತಿ ಸುಧಾರಣೆ ಆಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಕನ್ಯಾಶ್ರೀ ಪ್ರಕಲ್ಪ ಯೋಜ­ನೆಯ ಪ್ರಯೋಜನ ಸುಮಾರು 16 ಲಕ್ಷ ಹೆಣ್ಣು­ಮಕ್ಕಳಿಗೆ ಸಿಗುತ್ತಿದೆ. ಎರಡು ರೀತಿಯ ಹಣಕಾಸು ನೆರವನ್ನು ಸರ್ಕಾರ ಕೊಡುತ್ತಿದೆ. ಈ ಯೋಜನೆ ಜಾರಿಗೆ ಬಂದ ಬಳಿಕ ಪೋಷಕರಿಗೆ ಶಿಕ್ಷಣ ಹೊರೆ ಎಂಬ ಭಾವನೆ ದೂರವಾಗಿದೆ. ಸರ್ಕಾರದ ಲಾಭ ಪಡೆಯುವ ದೃಷ್ಟಿಯಿಂದ ಹೆಣ್ಣು ಮಕ್ಕ­ಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಇದ­ರಿಂದ ಸರ್ಕಾರಕ್ಕೆ ವಾರ್ಷಿಕ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿದೆ. ಹಣ­ಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಮುಖ್ಯ­ಮಂತ್ರಿಗೆ ಈ ಯೋಜನೆಗೆ ಹಣ ಹೊಂದಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಪ್ರಶ್ನೆ.

ಪಶ್ಚಿಮ ಬಂಗಾಳ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಿಸುವ ಯೋಜನೆ ಜಾರಿ ಹಿಂದಿನ ಪ್ರೇರಣೆಯೇ ರೇಖಾ ಮತ್ತು ಅವಳ ಗೆಳತಿ­ಯರು. ಅವರು ಸರ್ಕಾರದ ಗಮನ ಸೆಳೆ­ಯದಿದ್ದರೆ ಮಮತಾ ಅವರು ಈ ಮಹತ್ವದ ಯೋಜನೆ ರೂಪಿಸಿ, ಜಾರಿಗೆ ತರುತ್ತಿರಲಿಲ್ಲ­ವೇನೋ. ರೇಖಾ ಕಡು ಬಡವರ ಮನೆಯಲ್ಲಿ ಹುಟ್ಟಿದ ಹುಡುಗಿ. ಅವರಪ್ಪ ಬೀಡಿ ಸುತ್ತುವ ಕಾರ್ಮಿಕ. ಬಿಡುವಿನ ವೇಳೆಯಲ್ಲಿ ಈಕೆಯೂ ಅದೇ  ಕೆಲಸ ಮಾಡುತ್ತಾಳೆ. ಎಳೆಯ ವಯಸ್ಸಿ­ನಲ್ಲಿ ನಡೆದ ಅಕ್ಕನ ಮದುವೆ ರೇಖಾಳ ಬದುಕಿಗೆ ಪಾಠವಾಗಿದೆ. ಅದೇ ಪಾಠ ಬಾಲ್ಯ ವಿವಾಹದ ವಿರು­ದ್ಧದ ಚಳವಳಿಗೆ ಸ್ಫೂರ್ತಿ ಆಗಿದೆ. ಒಂದೊಂದು ರಾಜ್ಯದಲ್ಲಿ ಒಬ್ಬೊಬ್ಬರು ಈ ಹುಡು­ಗಿಯಂತೆ ಸಾಮಾಜಿಕ ಬದಲಾವಣೆಗೆ ಮುಂದಾದರೆ ಹತ್ತೇ ವರ್ಷದಲ್ಲಿ ಪರಿಸ್ಥಿತಿ ಬದಲಾಗ­ಬಹುದು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.