ADVERTISEMENT

ಹೊರನಾಡ ಕನ್ನಡ ಪೀಠಗಳು ಜಾಗೃತವಾಗಲಿ

ಹೊನಕೆರೆ ನಂಜುಂಡೇಗೌಡ
Published 24 ಆಗಸ್ಟ್ 2014, 19:30 IST
Last Updated 24 ಆಗಸ್ಟ್ 2014, 19:30 IST
ಹೊರನಾಡ ಕನ್ನಡ ಪೀಠಗಳು ಜಾಗೃತವಾಗಲಿ
ಹೊರನಾಡ ಕನ್ನಡ ಪೀಠಗಳು ಜಾಗೃತವಾಗಲಿ   

‘ಬನಾರಸ್‌ ಹಿಂದೂ ವಿಶ್ವವಿದ್ಯಾಲಯ’ (ಬಿಎಚ್‌ಯು) ಇನ್ನೇನು ಶತಮಾ­ನೋ­ತ್ಸವಕ್ಕೆ ಕಾಲಿಡಲಿದೆ. ಕಿರಿದಾದ ರಸ್ತೆಗಳಿ­ರುವ ವಾರಾಣಸಿ ಕಡ್ಡಿಪೊಟ್ಟಣದಂತೆ ಪುಟ್ಟದಾಗಿ ಕಂಡರೂ, ವಿ.ವಿ. ಕ್ಯಾಂಪಸ್‌ ಅಪವಾದವೆನ್ನು­ವಂತಿದೆ. 1916ರಲ್ಲಿ ಆರಂಭವಾಗಿರುವ ಈ ವಿ.ವಿ. ದೆಹಲಿಯ ಜೆಎನ್‌ಯು ಮಟ್ಟಕ್ಕಿಲ್ಲದಿ­ದ್ದರೂ, ಎಡಪಂಥ, ಬಲಪಂಥವೂ ಒಳ­ಗೊಂಡಂತೆ ಎಲ್ಲ ‘ಪೊಲಿಟಿಕಲ್‌ ಸ್ಕೂಲ್‌ ಆಫ್‌ ಥಾಟ್‌’ನ ಹುಡುಗರಿದ್ದಾರೆ.

ವಾರಾಣಸಿ ಲೋಕಸಭೆ ಚುನಾವಣೆ ಸಮಯ­ದಲ್ಲಿ ಬಿಎಚ್‌ಯು ನೋಡುವ ಅವಕಾಶ ಒದಗಿ ಬಂತು. ಕ್ಯಾಂಪಸ್‌ನಲ್ಲಿ ಕಲೆ, ವಿಜ್ಞಾನ, ಸಾಹಿತ್ಯ ಮತ್ತಿತರ ಬಹಳಷ್ಟು ವಿಭಾಗಗಳಿವೆ. ಅಷ್ಟೇ ಅಲ್ಲ, ಐಐಟಿಯೂ ಅಲ್ಲೇ ಇದೆ. ಒಂದೊಂದೇ ವಿಭಾಗ­ವನ್ನು ಸುತ್ತು ಹೊಡೆಯುವಾಗ ‘ತೆಲುಗು ವಿಭಾಗ’ ಕಣ್ಣಿಗೆ ಬಿತ್ತು. ಬಾಗಿಲಲ್ಲಿ ಪ್ರೊ.ವಿಶ್ವನಾಥ್‌, ಮುಖ್ಯಸ್ಥರು ಎನ್ನುವ ಫಲಕವಿತ್ತು. ಕುತೂಹಲದಿಂದ ಒಳಹೊಕ್ಕೆ. ಉತ್ತರ ಪ್ರದೇಶದ ವಿದ್ಯಾರ್ಥಿಗಳಿಬ್ಬರಿಗೆ ಅವರು ಪಾಠ ಹೇಳು­ತ್ತಿ­ದ್ದರು. ಪರಿಚಯ  ಮಾಡಿಕೊಳ್ಳುತ್ತಿ­ದ್ದಂತೆ ಕುರ್ಚಿ ಕೊಟ್ಟು ಆತ್ಮೀಯವಾಗಿ ಮಾತನಾಡಿಸಿದರು.

‘ನೋಡಿ ಈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವೂ ಇದೆ. ಪ್ರಾಧ್ಯಾಪಕರಿಲ್ಲದೆ ಮುಚ್ಚಿ­ಹೋಗಿದೆ. ಆಸಕ್ತರು ಯಾರಾದರೂ ಇದ್ದರೆ ಅರ್ಜಿ ಹಾಕಲು ಹೇಳಿ. ಕುಲಪತಿಗೆ ನೇರವಾಗಿ ಬರೆದುಕೊಳ್ಳಲಿ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಅಧ್ಯಯನ ಕೈಗೊಳ್ಳುವವರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು. ತೆಲುಗು ಮಾಸ್ತರರ ಕನ್ನಡ ಪ್ರೀತಿ ಮೆಚ್ಚಬೇಕು...

ಬಿಎಚ್‌ಯು ಕ್ಯಾಂಪಸ್‌ನಲ್ಲಿ 70ರ ದಶಕ­ದಲ್ಲೇ ಕನ್ನಡ ಪೀಠ ಸ್ಥಾಪನೆಯಾಗಿತ್ತು. ಡಾ.ಪ್ರಭುಶಂಕರ ಅವರಂಥ ಹಿರಿಯ ವಿದ್ವಾಂಸರು ನಿಯೋಜನೆ ಮೇಲೆ ಹೋಗಿ ಕನ್ನಡ ಕೆಲಸ ಮಾಡಿದ್ದಾರೆ. ಅವರ ಬಳಿಕ ಭಾಷಾ ಶಾಸ್ತ್ರಜ್ಞ ಡಾ. ಶಿವಾನಂದ ವಿರಕ್ತಮಠ ಅಲ್ಲಿ­ದ್ದರು. ವಿರಕ್ತಮಠ ಅಪಘಾತದಲ್ಲಿ ತೀರಿಕೊಂಡ ಬಳಿಕ ಸೂಕ್ತ ಪ್ರಾಧ್ಯಾಪಕರು ಸಿಗಲಿಲ್ಲವೆಂಬ ಕಾರಣಕ್ಕೆ ಕನ್ನಡ ಪೀಠ ಮುಚ್ಚಿ ಹೋಯಿತು. ಕರ್ನಾಟಕ ರಾಜ್ಯದಲ್ಲಿ ಬಿಎಚ್‌ಯುಗೆ ಹೋಗಿ ಕೆಲಸ ಮಾಡುವ ಒಬ್ಬ ಪ್ರಾಧ್ಯಾಪಕ ಸಿಗಲಿಲ್ಲ­ವಂತೆ!

ಕನ್ನಡ ಪೀಠಕ್ಕೆ ಯೋಗ್ಯರೊಬ್ಬರನ್ನು ನೇಮಿ­ಸಲು ವಿಶ್ವವಿದ್ಯಾಲಯ ಪ್ರಯತ್ನಿಸಿತು. ಕರ್ನಾಟಕ ಸರ್ಕಾರಕ್ಕೂ ಪತ್ರ ಬರೆಯಿತು. ಕನ್ನಡ ಸಂಸ್ಕೃತಿ ಇಲಾಖೆ ಪತ್ರವನ್ನು ಕನ್ನಡ ವಿ.ವಿ.ಗೆ ರವಾನಿಸಿ ಕೈತೊಳೆದುಕೊಂಡಿತು. ಅಲ್ಲಿಗೆ ಎಲ್ಲವೂ ಮುಗಿ­ಯಿತು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಪ್ರಾಧ್ಯಾಪಕರ ಹುದ್ದೆ ಮಂಜೂರು ಮಾಡಿತ್ತು. ಸಂಬಳ, ಸಾರಿಗೆ ಎಲ್ಲ­ವನ್ನೂ ಯುಜಿಸಿ ಕೊಡುತ್ತಿತ್ತು. ರಾಜ್ಯಕ್ಕೆ ಹಣಕಾ­ಸಿನ ಹೊರೆಯೇನೂ ಇರಲಿಲ್ಲ. ಆದರೂ ಸರ್ಕಾರ ಆಸಕ್ತಿ ವಹಿಸಲಿಲ್ಲ. ಸ್ವಲ್ಪ ಕಾಳಜಿ ತೋರಿದ್ದರೂ ಪೀಠ ಉಳಿಯುತ್ತಿತ್ತು. ಈಗ ಯುಜಿಸಿ ಪ್ರಾಧ್ಯಾ­ಪಕರ ಹುದ್ದೆ ರದ್ದು ಮಾಡಿದೆ. ಪುನಃ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪೀಠ ಆಗ­ಬೇಕೆಂದರೆ ಮೊದಲಿಂದ ಪ್ರಕ್ರಿಯೆ ನಡೆಯಬೇಕು. ಕನಿಷ್ಠ ಐದು ವರ್ಷ ರಾಜ್ಯ ಸರ್ಕಾರ ವೆಚ್ಚಗಳನ್ನು ಭರಿಸಬೇಕು.

ಬಹುಶಃ  ಬಹಳಷ್ಟು ಕನ್ನಡಿಗರಿಗೆ ಗೊತ್ತಿಲ್ಲ. ಗುಜ­ರಾತಿನ ಅಹಮದಾಬಾದ್‌ ವಿಶ್ವವಿದ್ಯಾ­ಲಯ­­ದಲ್ಲೂ ಕನ್ನಡ ಪೀಠವಿತ್ತು. ಚಂಡೀಗಡ ಮತ್ತು ದೆಹಲಿ ವಿ.ವಿ.ಗಳ ‘ಆಧುನಿಕ ಭಾರತೀಯ ಭಾಷಾ ಕೇಂದ್ರ’ದಲ್ಲಿ ಕನ್ನಡದ ಸರ್ಟಿಫಿಕೇಟ್‌ ಕೋರ್ಸ್‌ಗಳು ನಡೆಯುತ್ತಿತ್ತು. ಅಲ್ಲಿ ಕನ್ನಡದ ಪ್ರಾಧ್ಯಾಪಕರಿದ್ದರು. ದೆಹಲಿಯಲ್ಲಿ 60ರ ದಶಕ­ದಲ್ಲೇ ಕ.ವೆಂ. ರಾಘವಾಚಾರ್‌, ಡಾ.ವಿನೋದಾ­ಬಾಯಿ, 80ರ ದಶಕದಲ್ಲಿ ಪ್ರೊ.ಟಿ.ಎಸ್.­ಸತ್ಯನಾಥ ಮೊದಲಾದವರು ಕೆಲಸ ಮಾಡಿ­ದ್ದಾರೆ. ಸತ್ಯನಾಥರ ನಿವೃತ್ತಿ ಬಳಿಕ ಕನ್ನಡ ಪ್ರಾಧ್ಯಾ­ಪಕರು ನೇಮಕವಾಗಿಲ್ಲ. ಅವುಗಳ ಗತಿ ಈಗ ಏನಾಗಿದೆಯೋ?

ಪ್ರಾಧ್ಯಾಪಕರಿಲ್ಲದೆ ಕನ್ನಡ ಪೀಠ ಅಥವಾ ವಿಭಾಗಗಳು ಮುಚ್ಚಿದರೆ ವಿಶ್ವವಿದ್ಯಾಲಯಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ದಕ್ಷಿಣದ ರಾಜ್ಯದ­ವರು ಯಾರಾದರೂ ಕುಲಪತಿ ಇದ್ದರೆ  ಸ್ವಲ್ಪ ಮುತುವರ್ಜಿ ತೋರಿಸುತ್ತಾರೆ. ಬೇರೆಯವರು ಮುಚ್ಚಿ ಹೋಗಲಿ ಎಂದೇ ಬಯಸುತ್ತಾರೆ. ಹೊರ­ಗಿನವರಿಗೆ ಕನ್ನಡ ಕೋರ್ಸ್‌ ನಡೆದರೇನು? ಬಿಟ್ಟ­ರೇನು? ಈ ಬಗ್ಗೆ ಕರ್ನಾಟಕ ಸರ್ಕಾರ ಅಥವಾ ಕನ್ನಡ ವಿ.ವಿ. ಎಚ್ಚರ ವಹಿಸಬೇಕು.

ನಾಡಿನೊಳಗೆ ಮತ್ತು ಹೊರಗೆ ಕನ್ನಡ ಭಾಷೆ­–ಸಂಸ್ಕೃತಿಯನ್ನು ಕಟ್ಟುವ ಹೊಣೆ ರಾಜ್ಯ ಸರ್ಕಾರದ್ದು. ಕನ್ನಡದ ತೇರು ಎಳೆಯಲು ಜನರೂ ಕೈಜೋಡಿಸಬೇಕು. ದೂರ ದೃಷ್ಟಿಯುಳ್ಳ ಮುಖ್ಯಮಂತ್ರಿ, ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿ, ಅಧಿಕಾರಿಗಳು ಇರಬೇಕು. ಯಾವುದೋ ಒಂದು ಪಕ್ಷದ ಸರ್ಕಾರವನ್ನು ಗಮನದಲ್ಲಿ ಇಟ್ಟು­ಕೊಂಡು ಈ ಮಾತು ಹೇಳುವುದು ಸರಿಯಲ್ಲ. ಕರ್ನಾಟಕದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ನೆರೆಯ ತಮಿಳು, ತೆಲುಗು ಭಾಷೆಗೆ ಹೋಲಿಸಿ­ದರೆ ಕನ್ನಡ ಹಿಂದೆ ಬಿದ್ದಿದೆ ಎನ್ನುವುದು ಒಪ್ಪಬೇಕಾದ ಸತ್ಯ.

ಭಾಷೆ ವಿಷಯದಲ್ಲಿ ತಮಿಳರು ಮತ್ತು ಅಲ್ಲಿನ ಸರ್ಕಾರದ ನಡವಳಿಕೆ ಸ್ವಲ್ಪ ಅತಿ ಎನಿಸಿ­ದರೂ, ಭಾಷೆಯನ್ನು ಕಟ್ಟುವುದು ಹೇಗೆ ಎನ್ನು­ವುದನ್ನು ಅವರಿಂದ ಕಲಿಯಬೇಕು. ತಮಿಳಿಗೆ ತಮಿಳುನಾಡಿನಲ್ಲಷ್ಟೇ ಅಲ್ಲ, ಹೊರಗೂ ಸಿಕ್ಕಾ­ಪಟ್ಟೆ ಮನ್ನಣೆ ದೊರೆತಿದೆ. ಉತ್ತರ ಭಾರತ­ದವ­ರಿಗಂತೂ ದಕ್ಷಿಣದವರೆಂದರೆ ‘ಮದರಾಸಿ’­ಗಳೆಂಬ ತಪ್ಪು ಕಲ್ಪನೆ ಇದೆ. ‘ಕನ್ನಡ  ಮಾತನಾ­ಡುವ ಒಂದು ರಾಜ್ಯವಿದೆ’ ಎಂದು ಬಹುತೇಕರಿಗೆ ಗೊತ್ತಿಲ್ಲ. ಅದರಲ್ಲಿ ನಮ್ಮ ತಪ್ಪೂ ಇದೆ. ಕರ್ನಾಟಕ ಮತ್ತು ಕನ್ನಡಕ್ಕೆ ಜಾಗತಿಕ ಮಾನ್ಯತೆ ತಂದುಕೊಡಲು ನಾವೂ ಸೋತಿದ್ದೇವೆ.

ತಮಿಳರು ಒಂದೇ ಕಡೆ ನೆಲೆ ನಿಲ್ಲದೆ, ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ದೇಶ­ದಿಂದ ದೇಶಕ್ಕೆ  ಹಿಂದೆಯೇ ವಲಸೆ ಹೋಗಿದ್ದಾರೆ. ಇದರಿಂದಾಗಿ ತಮಿಳು ಅಚ್ಚರಿ ಹುಟ್ಟಿಸುವಂತೆ ಬೆಳೆದಿದೆ. ನಮ್ಮವರಿಗೆ ಊರು ಬಿಡುವುದೆಂದರೆ ಒಗ್ಗದ ಕೆಲಸ. ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಳ್ಳುವುದು ರಕ್ತಗತವಾಗಿ ಬಂದಿದೆ. ಯಾವ ಭಾಷೆಯೇ ಆಗಲಿ ಅದು ಚಲನಶೀಲ­ವಾದರೆ ಮಾತ್ರ ಬೆಳೆಯಲು ಸಾಧ್ಯ. ತಮಿಳು ಇದಕ್ಕೊಂದು ಉತ್ತಮ ಉದಾಹರಣೆ.

ಶ್ರೀಲಂಕಾ, ಮಲೇಷ್ಯಾ, ಸಿಂಗಪುರ ಸೇರಿದಂತೆ ಅನೇಕ ದೇಶಗಳಲ್ಲಿ ತಮಿಳಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ದೇಶದೊಳಗೆ, ಹೊರಗೆ ಹಲವು ವಿ.ವಿ.ಗಳಲ್ಲಿ ತಮಿಳು ಪೀಠಗಳಿವೆ. ಕನ್ನಡಕ್ಕಿಂತ ಆರೇಳು ವರ್ಷ ಮೊದಲು ತಮಿಳಿಗೆ ಶಾಸ್ತ್ರೀಯ ಭಾಷೆ ಗೌರವ ಸಿಕ್ಕಿದೆ. ದಶಕದ ಹಿಂದೆಯೇ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ­ದಲ್ಲಿ ತಮಿಳು ಪೀಠ ಆರಂಭವಾಗಿದೆ. ಕನ್ನಡ ಪೀಠ ತೆರೆಯುವ ಪ್ರಯತ್ನ ಈಗ ನಡೆಯುತ್ತಿದೆ. ಅದೂ ನಮ್ಮ ಕೆಲವು ಚಿಂತಕರ ಪ್ರಯತ್ನದ ಫಲವಾಗಿ.

ಜೆಎನ್‌ಯು ಪ್ರತಿಷ್ಠಿತ ವಿಶ್ವವಿದ್ಯಾಲಯ. ಈ ವಿ.ವಿ.ಯಲ್ಲಿ ಕನ್ನಡ ಪೀಠ ಆಗುತ್ತಿದೆ ಎನ್ನುವುದೇ ಹೆಮ್ಮೆಯ ವಿಷಯ. ಅದಕ್ಕೆ ಕಾರಣ ಶೈಕ್ಷಣಿಕ– ಸಂಶೋಧನೆ ಗುಣಮಟ್ಟ. ಡಾ.ಪುರುಷೋತ್ತಮ ಬಿಳಿಮಲೆ, ಡಾ. ವೆಂಕಟಾಚಲ ಹೆಗಡೆ, ಪ್ರೊ.ಸತ್ಯನಾಥ, ವಸಂತಶೆಟ್ಟಿ ಬೆಳ್ಳಾರೆ ಅವರನ್ನೊಳ­ಗೊಂಡ ಸಮಿತಿ ಕನ್ನಡ ಪೀಠ ಸ್ಥಾಪನೆಗೆ ಪ್ರಯತ್ನ ಮಾಡಿದೆ. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶ­ಕ­ರಾದ ದಯಾನಂದ ಈಚೆಗೆ ದೆಹಲಿಗೆ ಬಂದು ಹೋಗಿದ್ದಾರೆ. ಕನ್ನಡ ಪೀಠಕ್ಕೆ ವರ್ಷಕ್ಕೆ ₨ 50 ಲಕ್ಷ ಕೊಡುವ ಭರವಸೆ ಕೊಟ್ಟಿದ್ದಾರೆ.

ಎರಡು ಪ್ರಸ್ತಾವಗಳನ್ನು ಜೆಎನ್‌ಯು, ಕರ್ನಾ­ಟಕದ ಮುಂದಿಟ್ಟಿದೆ. ಒಂದು ಮೂರರಿಂದ ನಾಲ್ಕು ಕೋಟಿ, ಮತ್ತೊಂದು ಏಳರಿಂದ ಎಂಟು ಕೋಟಿ ರೂಪಾಯಿ ಹಣವನ್ನು ಒಂದೇ ಕಂತಿನಲ್ಲಿ ಠೇವಣಿ ಇಡುವುದು. ಸರ್ಕಾರ ಕೊಡುವ ಹಣಕ್ಕೆ ಅನುಗುಣವಾಗಿ ಹುದ್ದೆಗಳನ್ನು ಸೃಷ್ಟಿಸಲಾ­ಗು­ತ್ತದೆ. ನಾಲ್ಕು ಕೋಟಿ ರೂಪಾಯಿ ಕೊಡಲು ಆಗುವುದಿಲ್ಲ. ಸದ್ಯಕ್ಕೆ ₨ 50 ಲಕ್ಷ ಬಿಡುಗಡೆ ಮಾಡು­ತ್ತೇವೆ. ಮುಂದಿನ ಬಜೆಟ್‌ನಲ್ಲಿ ನಾಲ್ಕು ಕೋಟಿ ರೂಪಾಯಿ ನಿಗದಿಪಡಿಸುವ ಬಗ್ಗೆ ಪರಿ­ಶೀಲಿಸುತ್ತೇವೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಹೇಳಿದೆ. ಲಿಖಿತ ಬದ್ಧತೆ ನೀಡುವಂತೆ ಜೆಎನ್‌ಯು ಕೇಳಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಇನ್ನು ನಿರ್ಧಾರ ಮಾಡಬೇಕಿದೆ.

ಜೆಎನ್‌ಯು ನಾಲ್ಕೈದು ಕೋಟಿ ರೂಪಾಯಿ ಕೊಡ­ಬೇಕೆಂದು ಕೇಳಿದರೆ ಸರ್ಕಾರ ಹಿಂಜರಿಯ­ಬಾರದು. ಸರ್ಕಾರಕ್ಕಿದು ಸಣ್ಣ ವಿಷಯ. ‘ಪ್ರಸ್ತಾವ ಸಿದ್ಧಪಡಿಸಬೇಕು. ಬಜೆಟ್‌ನಲ್ಲಿ ಹಣ ನಿಗದಿಯಾಗಬೇಕು’ ಎಂದು ಸಬೂಬು ಹೇಳು­ವುದು ಸರಿಯಲ್ಲ. ರಾಜ್ಯ ಸರ್ಕಾರ ಕನಿಷ್ಠ ಐದು ವರ್ಷ ಖರ್ಚುವೆಚ್ಚಗಳನ್ನು ನಿರ್ವಹಿಸಿದರೆ, ಮುಂದೆ ಯುಜಿಸಿಯಿಂದ ಹಣ ಬರುತ್ತದೆ. ಆಮೇಲೆ ಕನ್ನಡ ಪೀಠ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ನಡೆಯುತ್ತದೆ.

ಜವಾಹರಲಾಲ್‌ ನೆಹರೂ ವಿಶ್ವ­ವಿದ್ಯಾ­ಲಯದಲ್ಲಿ ಕನ್ನಡ ಪೀಠವಾದರೆ ಪ್ರಾಧ್ಯಾಪಕರ ನೇಮಕ ಅಥವಾ ನಿಯೋಜನೆ ಹೊಣೆ ಕರ್ನಾಟಕ ಸರ್ಕಾರದ ಕೈಯಲ್ಲಿರುವುದಿಲ್ಲ. ವಿಶ್ವವಿದ್ಯಾಲ­ಯವೇ ನೋಡಿಕೊಳ್ಳುತ್ತದೆ. ಅರ್ಹತೆ– ಸಾಮ­ರ್ಥ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವು­ದಿಲ್ಲ. ಇದರಿಂದ ಕನ್ನಡದ ವ್ಯಾಪ್ತಿ ವಿಸ್ತಾರ­ಗೊ­ಳ್ಳುತ್ತದೆ. ಭಾಷೆ – ಸಂಸ್ಕೃತಿ ಘನತೆ ಹೆಚ್ಚುತ್ತದೆ. ಕರ್ನಾಟಕದ ಬಾಗಿಲು ಜಾಗತಿಕವಾಗಿ ತೆರೆದು­ಕೊಳ್ಳುತ್ತದೆ. ಯಾವುದೇ ದೇಶದ ಯಾವುದೇ ಭಾಗದ ವಿದ್ಯಾರ್ಥಿಗಳು ಸಾಹಿತ್ಯದ ತೌಲನಿಕ ಅಧ್ಯಯನ ಮಾಡಬಹುದು. ಇತಿಹಾಸ– ಸಂಸ್ಕೃತಿ, ಶಿಲ್ಪಕಲೆ ಸೇರಿದಂತೆ ಯಾವುದೇ ವಿಷಯ ಕುರಿತು ಓದಲು ಅವಕಾಶ ದೊರೆಯಲಿದೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿರುವುದರಿಂದ ಕೇಂದ್ರೀಯ ವಿಶ್ವವಿದ್ಯಾಲ­ಯ­ಗಳಲ್ಲಿ ಕನ್ನಡ ಪೀಠಗಳನ್ನು ಸ್ಥಾಪಿಸಲು ಅವಕಾಶ­ವಿದೆ. ಶಾಸ್ತ್ರೀಯ ಭಾಷೆಯಡಿ ಕೇಂದ್ರದಿಂದ ಬೇಕಾದಷ್ಟು ಹಣಕಾಸು ನೆರವು ಬರಲಿದೆ. ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇರಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಮಾನ್ಯತೆ ಬಂದು ಐದಾರು ವರ್ಷಗಳು ಕಳೆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥಾನದ (ಸಿಐಐಎಲ್) ಅಧೀನದಿಂದ ಕನ್ನಡವನ್ನು ಬಿಡಿಸಿಕೊಳ್ಳಲು ಆಗಿಲ್ಲ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿ­ವಾಲಯ ಕಳೆದ ಐದು ವರ್ಷದಲ್ಲಿ ಶಾಸ್ತ್ರೀಯ ಭಾಷೆ ಯೋಜನೆಯಡಿ ಬಿಡುಗಡೆ ಮಾಡಿರುವ ಹಣ ಬರೀ ₨ 5 ಕೋಟಿ. ಅದರಲ್ಲಿ ಖರ್ಚಾಗಿರುವ ಹಣ ₨ 1 ಕೋಟಿಯನ್ನೂ ದಾಟಿಲ್ಲ. ಹೀಗಾದರೆ ಕನ್ನಡ ಭಾಷೆಯನ್ನು ಬೆಳೆಸುವುದಾದರೂ ಹೇಗೆ? ಇನ್ನಾದರೂ ಕರ್ನಾ­ಟಕ ಸರ್ಕಾರ ಕನ್ನಡ ನಾಡು– ನುಡಿಗೆ  ವ್ಯಾಪಕತೆ ತಂದುಕೊಡುವ ನಿಟ್ಟಿನಲ್ಲಿ ಆಲೋಚಿಸಲಿ. ಈ ಬಗ್ಗೆ ಚಿಂತಿಸಿ, ಯೋಜನೆಗಳನ್ನು ರೂಪಿಸಲು ರೊಕ್ಕ  ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.