ADVERTISEMENT

ಎಸ್‌ಡಿಎಂಸಿ ರಚನೆಯಲ್ಲಿ ಗೊಂದಲ:ಗಲಭೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2016, 7:32 IST
Last Updated 1 ಡಿಸೆಂಬರ್ 2016, 7:32 IST

ಕುಷ್ಟಗಿ: ಎಸ್‌ಡಿಎಂಸಿ ರಚನೆಗೆ ಸಂಬಂಧಿಸಿದ ವಿಷಯದಲ್ಲಿ ಗ್ರಾಮಸ್ಥರಲ್ಲಿ ಒಮ್ಮತ ಮೂಡದ ಕಾರಣ ಗೊಂದಲ ಉಂಟಾಗಿ ಕೆಲ ವ್ಯಕ್ತಿಗಳು ಶಾಲೆಯಲ್ಲಿ ದಾಂಧಲೆ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿ, ಮುಖ್ಯಶಿಕ್ಷಕಿಯ ಮೇಲೆ ಹಲ್ಲೆಗೂ ಮುಂದಾದ ಘಟನೆ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.

ಸಭೆ ನಡೆಸಿದ್ದಕ್ಕೆ ಆಕ್ಷೇಪಿಸಿ ಏಕಾಏಕಿ ಶಾಲೆಗೆ ನುಗ್ಗಿದ ಪಾನಮತ್ತರ ಗುಂಪು ಶಾಲೆಯಲ್ಲಿದ್ದ ಟೇಬಲ್‌ ಗಾಜು ಮತ್ತಿತರ ವಸ್ತುಗಳನ್ನು ಪುಡಿಪುಡಿ ಮಾಡಿ ಮುಖ್ಯಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಸೇರಿದಂತೆ 18 ಜನರನ್ನು ಒಳಗೊಂಡ ಎಸ್‌ಡಿಎಂಸಿ ರಚನೆ ಸಂಬಂಧ ಪಾಲಕರ ಸಭೆ ಕರೆಯಲಾಗಿತ್ತು. ಆಗ ಪಾನಮತ್ತರಾಗಿ ಶಾಲೆಯ ಒಳಗೆ ನುಗ್ಗಿದ ಕೆಲವರು ಸಭೆ ನಡೆಸುವುದು ಬೇಡ ಎಂದು ಒತ್ತಾಯಿಸಿದ್ದಲ್ಲದೇ ಶಿಕ್ಷಕರೊಂದಿಗೆ ವಾಗ್ವಾದಕ್ಕಿಳಿದು ಕುರ್ಚಿ, ಟೇಬಲ್‌ ಮತ್ತು ಟೇಬಲ್‌ ಮೇಲಿದ್ದ ದೊಡ್ಡ ಗಾಜುಗಳನ್ನು ಒಡೆದು  ಧ್ವಂಸಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದರು.

ಸಮಿತಿ ರಚನೆ ಸಂಬಂಧ ಬಂದೋಬಸ್ತ್‌ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರೂ ಬಾರದ ಪೊಲೀಸರು ನಂತರ ಬಂದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಅಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾಗುವುದಕ್ಕೆ ಕೆಲ ಜಾತಿಗಳ ನಡುವೆ ತೀವ್ರ ಪೈಪೋಟಿ ಇದ್ದುದು ಮತ್ತು ಒಮ್ಮತ ಇಲ್ಲದಿರುವುದೇ ಈ ಘಟನೆಗೆ ಕಾರಣವಾಗಿದೆ. ಆದರೆ ಮೀಸಲಾತಿ ಸ್ಥಾನಗಳ ಆಯ್ಕೆ ನಡೆಸಲಾಗಿತ್ತು, ಸಾಮಾನ್ಯ ಸ್ಥಾನಗಳಿಗೆ ಆಯ್ಕೆ ನಡೆಯುವ ಮುನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತಿತರರು ಸಭೆಯಿಂದ ನಿರ್ಗಮಿಸಿದ್ದರು. ಹಾಗಾಗಿ ಸಾಮಾನ್ಯರ ಆಯ್ಕೆಗೆ ಇನ್ನೊಂದು ಬಾರಿ ಸಭೆ ನಡೆಸಲಾಗುತ್ತದೆ ಎಂದು ಶಿಕ್ಷಕರು ಹೇಳಿ ಸಭೆ ಮುಂದೂಡಿದ್ದು, ಕೆಲವರನ್ನು ಕೆರಳಿಸಿತು. ಇದನ್ನು ಆಕ್ಷೇಪಿಸಿದಾಗ ಗೊಂದಲ ಉಂಟಾಯಿತು ಎಂದು ಗ್ರಾಮಸ್ಥರು ದೂರಿದರು.

ಈ ಕುರಿತು ವಿವರಿಸಿದ ಮುಖ್ಯಶಿಕ್ಷಕಿ ಹನುಮವ್ವ ಗಾಡಗೋಳಿ, ‘ಇನ್ನೂ ಜನರು ಸೇರುವ ಮೊದಲೇ ಈ ಘಟನೆ ನಡೆಯಿತು. ದಾಂಧಲೆ ನಡೆಸಿದ್ದು ನಿಜ ಆದರೆ ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪೊಲೀಸರಿಗೆ ದೂರು ನೀಡಿಲ್ಲ’ ಎಂದು ವಿವರಿಸಿದರು.

‘ಶಾಲೆಯಲ್ಲಿ ಗದ್ದಲ ನಡೆದಿರುವ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದರೂ ಸ್ಪಷ್ಟವಾಗಿಲ್ಲ, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ ಹೇಳಿದರು.

‘ಎಸ್‌ಡಿಎಂಸಿ ರಚನೆ ಬಗ್ಗೆ ಜನರಲ್ಲಿ ಸಹಮತ ಇರಲಿಲ್ಲ, ಪೂರ್ವಭಾವಿ  ಸಭೆ ನಡೆಸಿ ಒಮ್ಮತದ ವಾತಾವರಣ ಮೂಡಿಸದೆ ಏಕಾಏಕಿ ಸಭೆ ನಡೆಸಿದ್ದು ಗೊಂದಲಕ್ಕೆ ಕಾರಣ’ ಎಂದು ಸಬ್‌ ಇನ್‌ಸ್ಪೆಕ್ಟರ್‌ ರಮೇಶ ಜಲಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.