ADVERTISEMENT

ವರುಣನ ಕೃಪೆ: ಕಾಳು, ಸೊಪ್ಪು ಬಿತ್ತನೆ ಆರಂಭ

ಪೂರ್ವ ಮುಂಗಾರು ಜೋರು; ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು

​ಪ್ರಜಾವಾಣಿ ವಾರ್ತೆ
Published 11 ಮೇ 2017, 9:09 IST
Last Updated 11 ಮೇ 2017, 9:09 IST
ವರುಣನ ಕೃಪೆ: ಕಾಳು, ಸೊಪ್ಪು ಬಿತ್ತನೆ ಆರಂಭ
ವರುಣನ ಕೃಪೆ: ಕಾಳು, ಸೊಪ್ಪು ಬಿತ್ತನೆ ಆರಂಭ   
l ಎಂ.ಎನ್‌.ಯೋಗೇಶ್‌
ಮಂಡ್ಯ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಾದ್ಯಂತ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
 
ಬೇಸಿಗೆಯ ಬಿಸಿಲಿನಿಂದ ನಲುಗಿದ್ದ ರೈತರಲ್ಲಿ ಈ ಮಳೆ ಚೈತನ್ಯ ಮೂಡಿಸಿದೆ. ಪೂರ್ವ ಮುಂಗಾರಿನಲ್ಲಿ ಅಲ್ಪಾವಧಿ ಬೆಳೆ ಬೆಳೆಯಲು ರೈತರು ಹೊಲ ಹದ ಮಾಡಿಕೊಳ್ಳುತ್ತಿದ್ದಾರೆ. 
 
ಕಳೆದ 15 ದಿನಗಳ ಹಿಂದೆ ಸುರಿದ ಮಳೆಯಲ್ಲೇ ಜಮೀನು ಹದ ಮಾಡಿಕೊಂಡಿದ್ದ ರೈತರು ಈಗ ಬಿತ್ತನೆ ಆರಂಭಿಸಿದ್ದಾರೆ. ಎಳ್ಳು, ಹಲಸಂದೆ, ಹೆಸರು, ಉದ್ದು ಮುಂತಾದ ಬೀಜ ಬಿತ್ತುವಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲ ರೈತರು ಜಾನುವಾರುಗಳ ಮೇವಿಗಾಗಿ ಚಂಬೆ, ಹಪಸೆಣಬು ಮುಂತಾದ ಸೊಪ್ಪಿನ ಬೀಜ ಬಿತ್ತುತ್ತಿದ್ದಾರೆ.
 
‘ಹೊಲ ಹದ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ. ಸಂಗ್ರಹ ಮಾಡಿ ಇಟ್ಟುಕೊಂಡಿದ್ದ ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ತಂದು ಹಾಕುತ್ತಿದ್ದೇವೆ. ಇನ್ನೊಂದು ಹದ ಮಳೆ ಬಂದರೆ ಎಳ್ಳು, ಹಲಸಂದೆ ಬಿತ್ತುತ್ತೇನೆ’ ಎಂದು ತಾಲ್ಲೂಕಿನ ಪಣಕನಹಳ್ಳಿ ರೈತ ಶಿವಣ್ಣ ಹೇಳಿದರು.
 
‘ಹೊಲಕ್ಕೆ ಚಂಬೆ ಸೊಪ್ಪು, ಹಪಸೆಣೆಬು ಹಾಕಿದ್ದೇನೆ. ಇದರಿಂದ ದನಗಳಿಗೆ ಮೇವು ಸಿಗಲಿದೆ. ಮುಂಗಾರು ಮಳೆ ಆರಂಭವಾದೊಡನೆ ಸೊಪ್ಪು ಸೇರಿಸಿ ಉಳುಮೆ ಮಾಡುತ್ತೇನೆ. ಭೂಮಿ ಫಲವತ್ತಾಗುತ್ತದೆ’ ಎಂದು ರೈತ ನಾರಾಯಣಗೌಡ ಹೇಳಿದರು.
 
ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿ ಹೊರತುಪಡಿಸಿ ಉಳಿದ ಕಡೆ ಉತ್ತಮ ಮಳೆಯಾಗಿದೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಬಿರುಗಾಳಿ ಜೊತೆಗೆ ಮಳೆ ಸುರಿದಿದ್ದು ಹಲವೆಡೆ ಹಾನಿ ಸಂಭವಿಸಿದೆ. ಅಲ್ಲಿ ಸಿಡಿಲಿಗೆ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಮಳವಳ್ಳಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಸುರಿದ ಮಳೆಗೆ ಮನೆಗಳ ಚಾವಣಿ ಹಾರಿ ಹೋಗಿವೆ.
 
ನಾಗಮಂಗಲ ತಾಲ್ಲೂಕಿನಲ್ಲಿ ಮೇ 6ರಿಂದ ಮೂರು ದಿನಗಳ ಕಾಲ ಉತ್ತಮ ಮಳೆ ಸುರಿದಿದೆ. ಪಾಂಡವಪುರ ಪಟ್ಟಣದಲ್ಲಿ ಮಳೆ ಆಗಿಲ್ಲ, ಆದರೆ ಚಿನಕುರುಳಿ ಹಾಗೂ ತೆಂಡೇಕೆರೆ ಭಾಗದಲ್ಲಿ ಉತ್ತಮ ಮಳೆ ಆಗಿದೆ. ಶ್ರೀರಂಗಪಟ್ಟಣದ ಹಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಗರಿಗೆದರಿವೆ.
 
ಹೆಚ್ಚುವರಿ ಮಳೆ: 
ಏಪ್ರಿಲ್‌ 1ರಿಂದ ಮೇ 8ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ನಾಗಮಂಗಲ ತಾಲ್ಲೂಕಿನಲ್ಲಿ ಈ ವಾರ ಅತಿ ಹೆಚ್ಚು ಮಳೆ ಸುರಿದಿದೆ.
 
ನಾಗಮಂಗಲ ತಾಲ್ಲೂಕಿನಲ್ಲಿ ವಾಡಿಕೆ ಮಳೆ (ಏ.1ರಿಂದ ಮೇ8) 58 ಮಿ.ಮೀ ಇದೆ. ವಾಸ್ತವವಾಗಿ 98 ಮಿ.ಮೀ ಸುರಿದಿದ್ದು ಹೆಚ್ಚುವರಿಯಾಗಿ ಶೇ 59ರಷ್ಟು ಮಳೆಯಾಗಿದೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಶೇ 8ರಷ್ಟು ಮಳೆ ಬಿದ್ದಿದೆ.
 
‘ರೈತರು ಹೊಲ ಹಸನು ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ವಿವಿಧ ಸೌಲಭ್ಯ ಒದಗಿಸಿದ್ದೇವೆ. ಪೂರ್ವ ಮುಂಗಾರಿನಲ್ಲಿ ಬೆಳೆಯುವ  ಅಲ್ಪಾವಧಿ ಕಾಳಿನ ಬಿತ್ತನೆ ಬೀಜವನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ರವಾನಿಸಲಾಗಿದೆ.
 
ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.