ADVERTISEMENT

ಸಿದ್ದರಾಮಯ್ಯಗೆ ಇದು ಕೊನೆಯ ಅಧಿವೇಶನ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 7:09 IST
Last Updated 13 ನವೆಂಬರ್ 2017, 7:09 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾದರೂ ಜನರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ, ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಇದುವರೆಗೂ ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದು ಕೊನೆಯ ಅಧಿವೇಶನವಾಗಲಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

‘ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ, ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಪಟ್ಟು ಹಿಡಿಯಲಿದೆ’ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆ ಅವೈಜ್ಞಾನಿಕವಾಗಿದೆ. ಇದರ ಬದಲಿಗೆ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ವರದಿಯನ್ನು ಜಾರಿಗೆ ತರಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಈ ಮಸೂದೆ ವ್ಯಾಪ್ತಿಯಿಂದ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಕೈಬಿಟ್ಟಿರುವುದು ಸರಿಯಲ್ಲ, ಅವರನ್ನೂ ಸೇರ್ಪಡೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಅವೈಜ್ಞಾನಿಕವಾಗಿರುವ ಈ ಮಸೂದೆ ಮಂಡನೆಗೆ ಬಿಜೆಪಿ ಸದನದಲ್ಲಿ ವಿರೋಧ ವ್ಯಕ್ತಪಡಿಸಲಿದೆ’ ಎಂದರು.

‘ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ಎಡವಿದೆ, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 40 ಸಾವಿರ ವಿವಿಧ ಹುದ್ದೆಗಳನ್ನು ಇದುವರೆಗೂ ನೇಮಕ ಮಾಡಿದೆ ನಿರ್ಲಕ್ಷ್ಯ ವಹಿಸಲಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಈ ಎಲ್ಲ ಅಂಶಗಳ ಕುರಿತು ಸರ್ಕಾರದ ಗಮನಸೆಳೆಯಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.