ADVERTISEMENT

ಸುಳ್ಳಾದ ನಂಬಿಕೆ: ಮಳೆಗೆ ಅಡ್ಡಿಯಾಗದ ಒರಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 4:56 IST
Last Updated 12 ಜೂನ್ 2017, 4:56 IST

ಶ್ರೀನಿವಾಸಪುರ: ಮಳೆ ಹಿನ್ನಡೆಯಾದಾಗ ಗ್ರಾಮೀಣ ಪ್ರದೇಶದ ಜನರು, ತಮ್ಮ  ಗ್ರಾಮದಲ್ಲಿನ ಜಖಂಗೊಂಡ ಒರಳು ಕಲ್ಲುಗಳನ್ನು ಬೇರೆಡೆಗೆ ಕೊಂಡೊಯ್ದು ಎಸೆಯುವ ಪದ್ಧತಿ ತಾಲ್ಲೂಕಿನಲ್ಲಿ ಜೀವಂತವಾಗಿದೆ.

ಮುಕ್ಕಾದ ಒರಳು ಗ್ರಾಮದಲ್ಲಿದ್ದರೆ ಮಳೆಯಾಗುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಪ್ರದೇಶದ ಜನರಲ್ಲಿದೆ. ಗ್ರಾಮದಲ್ಲಿ ಜಖಂಗೊಂಡ ಒರಳು ಕಾಣಿಸಿದರೆ, ಅದನ್ನು ಹೊರಗೆ ಸಾಗಿಸುವಂತೆ ಸಲಹೆ ಮಾಡುತ್ತಾರೆ. ಇಲ್ಲವಾದರೆ ಮಳೆಯಾಗುವುದಿಲ್ಲ ಎಂದು ಹೇಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದಲ್ಲೂ ಮಿಕ್ಸಿ ಹಾಗೂ ಗ್ರೈಂಡರ್‌ಗಳು ಬಳಕೆಗೆ ಬಂದಿವೆ. ಮನೆಗಳಲ್ಲಿ ಅಳವಡಿಸಲಾಗಿದ್ದ ಒರಳುಗಳನ್ನು ತೆಗೆದು ಹೊರಗೆ ಹಾಕಲಾಗುತ್ತಿದೆ. ಹಾಗೆ ತೆಗೆಯುವಾಗ ಒರಳುಗಳು ಜಖಂಗೊಳ್ಳುವುದು ಸಾಮಾನ್ಯ.

ADVERTISEMENT

ಅಂಥ ಒರಳುಗಳು ಅಲ್ಲಿನ ಜನರ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತವೆ. ಮಳೆ ಬರುವುದಿಲ್ಲ ಎಂದು ಭಯಗೊಂಡ ಗ್ರಾಮದ ನಾಗರಿಕರು, ಹಳ್ಳಿಯಲ್ಲಿನ ಇಂಥ ಕಲ್ಲುಗಳನ್ನು ಟೆಂಪೋಗೆ ಹೇರಿಕೊಂಡು ಗ್ರಾಮದ ಸರಹದ್ದಿನ ಹೊರಗೆ ಎಸೆದು ಬರುತ್ತಾರೆ. ಮುಂದಿನ ಗ್ರಾಮದ ಜನರು ಈ ಕಲ್ಲುಗಳನ್ನು ನೋಡಿ ಹೆದರಿ ಇನ್ನೂ ಮುಂದೆ ಸಾಗಿಸುತ್ತಾರೆ. ಹೀಗೆ ಈ ಅನುಪಯುಕ್ತ ಒರಳುಗಳ ಪ್ರಯಾಣ ಸಾಗುತ್ತದೆ.

ತಾಲ್ಲೂಕಿನ ರಾಯಲ್ಪಾಡ್‌ ಸಮೀಪ ರಸ್ತೆ ಪಕ್ಕದಲ್ಲಿ ಕೆಲವು ಅನುಪಯುಕ್ತ ಒರಳು ಕಲ್ಲುಗಳನ್ನು ಹಾಕಲಾಗಿತ್ತು. ಅಲ್ಲಿ ಒರಳುಗಳನ್ನು ಹಾಕಿರುವುದರಿಂದಲೇ ಮಳೆ ಬರುತ್ತಿಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆದರೆ ಈಚೆ ಒಂದು ರಾತ್ರಿ ಮಾತ್ರ ಸುರಿದ ಭಾರಿ ಮಳೆಗೆ ರಾಯಲ್ಪಾಡ್‌ ಗ್ರಾಮದ ಸುತ್ತಮುತ್ತಲಿನ ಕೆರೆ ಕುಂಟೆಗಳಿಗೆ ಸ್ವಲ್ಪ ಮಟ್ಟಿನ ನೀರು ಬಂದಿದೆ. ಸುರಿದ ಭಾರಿ ಮಳೆ ಜನರ ನಂಬಿಕೆಯನ್ನು ಸುಳ್ಳಾಗಿಸಿದೆ.

ಮಳೆ ತಡವಾದರೆ, ಕಪ್ಪೆಗಳಿಗೆ ಮದುವೆ ಮಾಡುವುದು, ಕತ್ತೆಗಳ ಮೆರವಣಿಗೆ ಮಾಡುವುದು, ಕೆರೆಯಲ್ಲಿ ಗಂಜಿ ಕಾಯಿಸಿ ಕುಡಿದು, ಬಾಯಿ ಬಡುಕೊಳ್ಳುವುದು ಮುಂತಾದ ಆಚರಣೆಗಳನ್ನು ಮಾಡುವುದು ಸಾಮಾನ್ಯ. ಹಾಗೆ ಮಾಡುವುದರಿಂದ ಮಳೆ ಸುರಿಯುತ್ತದೆ ಎಂಬುದು ಸುಳ್ಳು. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಜನರು ತಮಗೆ ತೋಚಿದಂತೆ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾರೆ. ಅದ ರಲ್ಲಿ ಮೂಢ ನಂಬಿಕೆಗಳೂ ಇರುತ್ತವೆ ಎಂಬುದು ಚಿಂತಕ ಹಾಗೂ ಸಾಹಿತಿ ಸ.ರಘುನಾಥ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.