ADVERTISEMENT

ಹೂವು ಕೊಟ್ಟರು, ಸಿಗರೇಟ್ ದಹಿಸಿದರು!

ವಿಶ್ವ ತಂಬಾಕು ರಹಿತ ದಿನಾಚರಣೆ: ಬೀದರ್‌ನಲ್ಲಿ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 10:58 IST
Last Updated 1 ಜೂನ್ 2017, 10:58 IST

ಬೀದರ್: ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ‘ತಂಬಾಕು ತ್ಯಜಿಸಿ ಜೀವನ ಉಳಿಸಿ’, ‘ತಂಬಾಕು ಅಭಿವೃದ್ಧಿಗೆ ಮಾರಕ’ ಎನ್ನುವ ಘೋಷವಾಕ್ಯದೊಂದಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ನಗರದಲ್ಲಿ ಬುಧವಾರ ಜನಜಾಗೃತಿ ಜಾಥಾ  ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಜಾಥಾದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.

ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ನೌಕರರು ಕೈಯಲ್ಲಿ ಭಿತ್ತಿ ಚಿತ್ರಗಳನ್ನು ಹಿಡಿದುಕೊಂಡಿದ್ದರು. ‘ತಂಬಾಕು ಅಭಿವೃದ್ಧಿಗೆ ಮಾರಕ’ ಎಂದು ಬರೆಯಲಾಗಿದ್ದ ಟೋಪಿಯನ್ನು ಧರಿಸಿದ್ದರು. ಬೃಹತ್‌ ಗಾತ್ರದ ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳನ್ನು ದಹಿಸಿದರು.

ನಂದೀಶ್ವರ ಹಾಗೂ ಕಲಾ ಕುಸುಮ ನಾಟ್ಯ ಕಲಾ ತಂಡದವರು ಬಸವೇಶ್ವರ ವೃತ್ತ ಮತ್ತು ಹಾಗೂ ಎಸ್.ಬಿ. ಪಾಟೀಲ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಂಬೇಡ್ಕರ್‌ ವೃತ್ತದ ಬಳಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ಸಿಗರೇಟ್‌ ಹಾಗೂ ತಂಬಾಕು ಸೇವಿಸುವವರಿಗೆ ಹೂವು ವಿತರಿಸಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಕುರಿತು ಅರಿವು ಮೂಡಿಸಿದರು. ತಂಬಾಕು ಉತ್ಪನ್ನಗಳನ್ನು ದಾನದ ಪೆಟ್ಟಿಗೆಯಲ್ಲಿ ಹಾಕುವಂತೆ ಮನವಿ ಮಾಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಜಾಥಾಕ್ಕೆ ಚಾಲನೆ ನೀಡಿದರು.

ಅಲ್ಲಿಂದ ಆರಂಭಗೊಂಡ ಜಾಥಾ ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ವೃತ್ತ, ಶಹಾಗಂಜ್‌ ಕಮಾನ್‌, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ತಂಬಾಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಒಳಗೊಂಡ ಮನವಿಪತ್ರವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಪ್ರಮುಖ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್‌, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಅಕ್ಕ ಪ್ರತಿಮಾ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ. ಬಿ. ಶಿವಶಂಕರ, ಐ.ಎಂ.ಎ. ಅಧ್ಯಕ್ಷ ಡಾ. ಸಿ. ಆನಂದರಾವ್‌, ಡಾ. ಮಾರ್ಥಂಡರಾವ್‌ ಕಾಶೆಂಪುರ, ಡಾ. ರಾಜಶೇಖರ ಪಾಟೀಲ, ಡಾ. ಅನಿಲ ಚಿಂತಾಮಣಿ, ಡಾ. ಇಂದುಮತಿ ಕಾಮಶೆಟ್ಟಿ, ಡಾ. ಸುಭಾಷ ಕರ್ಪೂರ್, ಡಾ. ಜಿ.ಎಸ್. ಬಿರಾದಾರ, ಡಾ. ವಿ.ಎನ್. ನಿಂಬೂರು, ಡಾ. ಸುಭಾಷ ಬಶೆಟ್ಟಿ, ಡಾ. ವಿಜಯಶ್ರೀ ಬಶೆಟ್ಟಿ, ಡಾ. ವಿಜಯ ಕೋಟೆ, ಡಾ. ವಿನೋದ ಸಾವಳಗಿ, ಅಬ್ದುಲ್ ಖದೀರ್, ಶಿವಶಂಕರ ಟೋಕರೆ, ಸುಭಾಷ ಮುಧಾಳೆ, ಅಬ್ದುಲ್ ಸಲೀಂ, ಸುನೀಲ್ ಕಡ್ಡೆ, ದೇವಿದಾಸ್ ಚಿಮಕೋಡ, ನಾಗಶೆಟ್ಟಿ, ರಾಗಾ ಶರಣಪ್ಪ, ಎನ್.ಎನ್. ಬಿರಾದಾರ, ಮಲ್ಲಿಕಾರ್ಜುನ ಸದಾಶಿವ, ಟಿ.ಎಂ. ಮಚ್ಚೆ, ಪ್ರಕಾಶ ವಗ್ಗೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.