ADVERTISEMENT

ವಿಳಂಬ ನೀತಿಯಿಂದ ರೈತರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 9:41 IST
Last Updated 10 ಜನವರಿ 2018, 9:41 IST
ಶಿವಾನಂದ ಗುರುಮಠ
ಶಿವಾನಂದ ಗುರುಮಠ   

ಹಾವೇರಿ: ‘ಸರ್ಕಾರ ಗೋವಿನಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ ತಡವಾಗಿ ಖರೀದಿಸುವುದರಿಂದ, ದಲ್ಲಾಳಿಗಳಿಗೆ ಹಾಗೂ ಸರ್ಕಾರಕ್ಕೆ ಲಾಭವೇ ಹೊರತು ಬೆಳೆದ ರೈತರಿಗಲ್ಲ’ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಗೋವಿನಜೋಳವೇ ಪ್ರಮುಖ ಬೆಳೆ. ಈಗಾಗಲೇ, ಶೇ 70ರಷ್ಟು ರೈತರು ಗೋವಿನಜೋಳವನ್ನು ದಲ್ಲಾಳಿಗಳಿಗೆ ಮಾರಿದ್ದಾರೆ. ಆದರೆ, ಸರ್ಕಾರ ಇನ್ನು ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ತೆರೆದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದಲ್ಲಾಳಿಗಳು ರೈತರ ಗೋವಿನಜೋಳವನ್ನು ಈಗಾಗಲೇ ₹1,100 ರಿಂದ ₹1,200ರ ಒಳಗೆ ಖರೀದಿಸಿ, ಸಂಗ್ರಹಿಸಿದ್ದಾರೆ. ಸರ್ಕಾರ ಬೆಂಬಲ ಬೆಲೆಯ ಖರೀದಿ ಕೇಂದ್ರವನ್ನು ಆರಂಭಿಸಿದರೆ, ದಲ್ಲಾಳಿಗಳೇ ರೈತರ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ, ರೈತರ ಲಾಭ ಸಂಪೂರ್ಣ ದಲ್ಲಾಳಿಗಳ ಪಾಲಾಗುತ್ತದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಕೂಡಾ ಶಾಮೀಲಾಗಿರುತ್ತಾರೆ’ ಎಂದು ಆರೋಪಿಸಿದರು.

ADVERTISEMENT

ಕರಾರುಗಳು ಲೆಕ್ಕಕ್ಕಿಲ್ಲ: ‘ಸಂಗೂರ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಗುತ್ತಿಗೆ ಒಪ್ಪಂದದಲ್ಲಿ ಹಾಕಿದ ಕರಾರುಗಳನ್ನು ಗಾಳಿಗೆ ತೂರಿ, ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಒಪ್ಪಂದದ ಪ್ರಕಾರ ರೈತರ ಕಬ್ಬಿಗೆ ನೀಡುವ ಮುಂಗಡ ಹಣಕ್ಕೆ ಯಾವುದೇ ಬಡ್ಡಿ ಹಾಕಬಾರದು ಎಂದಿದೆ. ಆದರೆ, ಗುತ್ತಿಗೆದಾರ ಎಂ.ಪಿ.ಸಿದ್ದೇಶ್ವರ ₹7.7 ಕೋಟಿ ಮುಂಗಡ ಹಣಕ್ಕೆ ಶೇ ₹10ರಂತೆ ₹ 1 ಕೋಟಿ ಬಡ್ಡಿಯನ್ನು ಮುರಿದುಕೊಂಡಿದ್ದಾನೆ’ ಎಂದು ದೂರಿದರು.

‘ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಇದ್ದು, ರೈತರಿಗೆ ಮೋಸ ಮಾಡುತ್ತಿದೆ. ಯಾವ ಆಧಾರದ ಮೇಲೆ 2017–18ನೇ ಸಾಲಿನ ರೈತರ ಕಬ್ಬಿಗೆ ₹2,826 ನಿಗದಿ ಮಾಡಿದ್ದಾರೆ ಎಂಬುದನ್ನು ಅವರು ತಿಳಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕೃಷಿ ಬೆಲೆ ಆಯೋಗ ಇದ್ದರೂ ಕೂಡ ಬೆಳೆ ನಿಗದಿ ಮಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ. ಅಂದಮೇಲೆ, ಅದರಿಂದ ರೈತರಿಗೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದ ಅವರು, ‘ಹೀಗಾಗಿ ಅದರನ್ನು ತೆಗೆದುಹಾಕಬೇಕು’ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಿವಯೋಗಿ ಬೆನ್ನೂರ, ಕಾರ್ಯದರ್ಶಿ ರಮೇಶ ಶಂಕ್ರಪ್ಪನವರ ಹಾಗೂ ಜಿಲ್ಲಾ ಕಾರ್ಯದರ್ಶಿ ಭೀಮನಗೌಡ ಕುಲಕರ್ಣಿ ಇದ್ದರು.

* * 

ಕೇಂದ್ರ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹1,450 ನಿಗದಿ ಮಾಡಿದ್ದರೂ ರಾಜ್ಯ ಸರ್ಕಾರ ಲಾಭದ ದೃಷ್ಟಿಯಿಂದ ಖರೀದಿಸಲು ವಿಳಂಬ ಮಾಡುತ್ತಿದೆ
ಶಿವಾನಂದ ಗುರುಮಠ, ಅಧ್ಯಕ್ಷ, ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.