ADVERTISEMENT

ಆಹಾರ ಅಕ್ರಮ ದಾಸ್ತಾನು: ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:19 IST
Last Updated 24 ಏಪ್ರಿಲ್ 2017, 6:19 IST

ಬೀಳಗಿ: ‘ತಾಲ್ಲೂಕು ಪಂಚಾಯ್ತಿ ಗೋದಾಮಿನಲ್ಲಿ ಸಂಗ್ರಹಿಸಿ ಇಡಬೇಕಾದ ಆಹಾರ ದಿನಸಿಗಳನ್ನು ಮುತ್ತಲದಿನ್ನಿ ಪುನರ್ವಸತಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ. ರಜೆ ದಿನಗಳಲ್ಲಿ ಅನಧಿಕೃತವಾಗಿ ಸಾಗಾಣಿಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದ ಗ್ರಾಮಸ್ಥರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ನೌಕರರೊಬ್ಬರು ದಿನಸಿಗಳನ್ನು ಒಯ್ಯಲು ವಾಹನದೊಂದಿಗೆ ಶನಿವಾರ ಬಂದಾಗ ಗ್ರಾಮಸ್ಥರು ವಾಹನವನ್ನು ತಡೆದು, ಆಹಾರ ದಿನಸಿಗಳ ಮಾಹಿತಿ ಕೇಳಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅಂಗನವಾಡಿ ಮಕ್ಕಳಿಗೆ ಕೊಡುವ ಆಹಾರ ದಿನಸಿಗಳನ್ನು ಇಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ. ರಜಾ ದಿನಗಳಂದು ಹಾಗೂ ರಾತ್ರಿ ಹೊತ್ತಿನಲ್ಲಿ ಇಲ್ಲಿಂದ ಸಾಗಾಣಿಕೆ ಮಾಡಿ ಕಾಳಸಂತೆಗೆ ಸಾಗಿಸುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಒಂದು ಬೀಗದ ಕೈ ಇಲಾಖೆಯವರ ಹತ್ತಿರವಿದೆ. ಆಹಾರ ದಿನಸಿಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಇದರ ಹೊರತಾಗಿ ನಮಗೇನೂ ಗೊತ್ತಿಲ್ಲ’ ಎಂಬುದು ಅಂಗನವಾಡಿ ಕಾರ್ಯಕರ್ತೆ ಅನಿಲಾ ಕುಂದರಗಿ ಉತ್ತರ.ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಗೋದಾಮು ಸುವ್ಯವಸ್ಥಿತ ಸ್ಥಿತಿಯಲ್ಲಿದೆ. ಅಲ್ಲಿ ಯಾವ ಕಾರಣಕ್ಕೆ ಸಂಗ್ರಹಿಸುತ್ತಿದ್ದಾರೆಯೋ ಗೊತ್ತಿಲ್ಲವೆಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ತಪ್ಪಿತಸ್ಥರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಮಂಜುಳಾ ಮೇರಾಕಾರ, ಪ್ರೇಮಾ ಪಾಟೀಲ, ವೀರಭದ್ರ ಬಡಿಗೇರ, ರಾಮಣ್ಣ ತೋಳಮಟ್ಟಿ, ಗುರುಸಂಗಪ್ಪ ಮಾದರ, ಈರಯ್ಯ ಹಿರೇಮಠ, ಹನುಮಂತ ಹಡಪದ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಬಂದ ತಹಶೀಲ್ದಾರ್‌ ಉದಯ ಕುಂಬಾರ ಅಕ್ರಮವಾಗಿ ಸಂಗ್ರಹಿಸಲಾದ ಆಹಾರ ದಿನಸಿಗಳ ಮಾಹಿತಿ ಪಡೆದುಕೊಂಡು ವಶಕ್ಕೆ ಪಡೆದರು.

ಸಿಡಿಪಿಓ ಸಂಬಂಧಿಕರೆಂದು ಹೇಳಲಾಗುತ್ತಿರುವ ಉಪನಿರ್ದೇಶಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಶಾಸಕ ಜೆಟಿ ಪಾಟೀಲ ದೂರವಾಣಿಯಲ್ಲಿ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಅವರೊಂದಿಗೆ ಮಾತನಾಡಿದರು.ತಲಾ 25 ಕೆ.ಜಿ. ತೂಕದ 19 ಅಕ್ಕಿ ಚೀಲ, 16 ಹೆಸರು ಚೀಲ, 1 ಶೇಂಗಾ ಚೀಲ, ತಲಾ 10 ಕೆ.ಜಿ.ತೂಕದ 39 ಪೆಂಟಿ ಬೆಲ್ಲ, 2 ಸಕ್ಕರೆ ಚೀಲ, 13 ಗೋಧಿಹಿಟ್ಟು ಪಾಕೆಟ್‌, 3 ಪಾಕೆಟ್ ತೊಗರಿ ಬೇಳೆ, 1 ಪಾಕೆಟ್ ಮೆಣಸಿನಕಾಯಿ, 8 ಕೆ.ಜಿ.ಸಾಸಿವೆಯನ್ನು ತಹಶೀಲ್ದಾರ್‌ ಉದಯ ಕುಂಬಾರ ಅವರು  ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.