ADVERTISEMENT

ಕುಮಾರ ಶ್ರೀಗಳ 150ನೇ ಜಯಂತಿ ಉತ್ಸವ

ಎಸ್.ಎಂ.ಹಿರೇಮಠ
Published 5 ಸೆಪ್ಟೆಂಬರ್ 2017, 6:24 IST
Last Updated 5 ಸೆಪ್ಟೆಂಬರ್ 2017, 6:24 IST
ಹಾನಗಲ್‌ ಶ್ರೀಗಳ 150ನೇ ಜಯಂತಿ ಉತ್ಸವ ಅಂಗವಾಗಿ ಬಾದಾಮಿ ಸಮೀಪದ ಶಿವಯೋಗಮಂದಿರದ ನಡೆದ ಸಮಾವೇಶದ ಮುಖ್ಯ ವೇದಿಕೆಯಲ್ಲಿ ನೆರೆದಿದ್ದ ಗುರು–ವಿರಕ್ತರ ಸಮೂಹ
ಹಾನಗಲ್‌ ಶ್ರೀಗಳ 150ನೇ ಜಯಂತಿ ಉತ್ಸವ ಅಂಗವಾಗಿ ಬಾದಾಮಿ ಸಮೀಪದ ಶಿವಯೋಗಮಂದಿರದ ನಡೆದ ಸಮಾವೇಶದ ಮುಖ್ಯ ವೇದಿಕೆಯಲ್ಲಿ ನೆರೆದಿದ್ದ ಗುರು–ವಿರಕ್ತರ ಸಮೂಹ   

ಶಿವಯೋಗಮಂದಿರ (ಬಾದಾಮಿ): ಗುರುವಿರಕ್ತ ಮಠಾಧೀಶರ ಮತ್ತು ವೀರಶೈವ ಲಿಂಗಾಯತರ ಸದ್ಭಾವನಾ ಸಮಾವೇಶಕ್ಕೆ ಶಿವಯೋಗಮಂದಿರಕ್ಕೆ ಜನಸಾಗರವೇ ಹರಿದು ಬಂದಿತು. ಸಮಾವೇಶಕ್ಕೆ  ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದಾಖಲೆ ನಿರ್ಮಿಸಿದರು.

ಕುಮಾರೇಶ್ವರ ಶ್ರೀಗಳ 150 ಜಯಂತಿ ಅಂಗವಾಗಿ ಪಂಚಪೀಠಾಧೀಶರು, ಗುರು ವಿರಕ್ತ ಮಠಾಧೀಶರು ಮೊದಲು  ಹಾನಗಲ್‌ ಕುಮಾರ ಶ್ರೀಗಳ ಕರ್ತೃ ಗದ್ದುಗೆಯ  ದರ್ಶನ  ಪಡೆದು ವೇದಿಕೆಗೆ ಬಂದರು.

ಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಪುರವಂತರು ಮತ್ತು ನಂದಿಕೇಶ್ವರ, ನೆಲವಗಿ, ಮಂಗಳೂರ, ಗೋನಾಳ ಹಾಗೂ ಶಿರಬಡಗಿಯ ಭಕ್ತರು ಭಜನೆಯ ಮೂಲಕ ಎಲ್ಲ ಹರಗುರುಚರ ಮೂರ್ತಿಗಳನ್ನು ವೇದಿಕೆಗೆ ಸ್ವಾಗತಿಸಿದರು.

ADVERTISEMENT

ಲಿಂ. ಕುಮಾರ ಶ್ರೀಗಳು 19ನೇ ಶತಮಾನದ ಕೊನೆಗೆ ಮತ್ತು 20 ನೇ ಶತಮಾನದ ಆರಂಭದಲ್ಲಿ ಬೇರೆ ಬೇರೆ ಹತ್ತು ಸ್ಥಳಗಳಲ್ಲಿ ಅಖಲ ಭಾರತ ಮದ್ವೀರಶೈವ ಮಹಾ ಸಮ್ಮೇಳನ ನಡೆಸಿದ ನಂತರ ಇಂದು ಜರುಗಿದ ಗುರು ವಿರಕ್ತರ ಮಠಾಧೀಶರ ನೇತೃತ್ವದಲ್ಲಿ ವೀರಶೈವ ಲಿಂಗಾಯತರ ಸದ್ಭಾವನಾ ಸಮ್ಮೇಳನ ಐತಿಹಾಸಿಕ ದಾಖಲೆಯಾಗಿದೆ ಎಂದು ಸಭೆಯಲ್ಲಿ ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾವೇಶ ಆರಂಭವಾಗಿದ್ದು ಮಧ್ಯಾಹ್ನ 12 ಗಂಟೆಯ ಸುಡು ಬಿಸಿಲಿನಲ್ಲಿ. ಬಿಸಿಲನ್ನು ಲೆಕ್ಕಿಸದೇ ಭಕ್ತರು ಮಠಾಧೀಶರ ಸಂದೇಶವನ್ನು ಆಲಿಸಿ ದರು. ಕೆಲವರು ಮರದ ನೆರಳಿನ ಆಶ್ರಯ ಪಡೆದಿದ್ದರು. ಕೆಲವೊಂದು ಬಾರಿ ಸೂರ್ಯನ ಪ್ರಖರವಾದ ಬಿಸಿಲು ಕೆಲ ವೊಂದು ಬಾರಿ ಬಾನಿನಲ್ಲಿ ಮೋಡ ಗಳಿಂದ ನೆರಳಿನ ಚೆಲ್ಲಾಟ ನಡೆದಿತ್ತು.
ಶಿವಯೋಗಮಂದಿರದಲ್ಲಿ ಶಿಕ್ಷಣ ಪಡೆದ ಸಾವಿರಾರು ಗುರುವಿರಕ್ತ ಮಠಾಧೀಶರು ವೇದಿಕೆಯಲ್ಲಿ ಇದ್ದರು.

ಬಾದಾಮಿ, ಕೆಂದೂರ ಮತ್ತು ಮಂಗಳೂರು ರಸ್ತೆಯ ಪಕ್ಕದಲ್ಲಿ ನೂರಾರು ವಾಹನಗಳು ನಿಲುಗಡೆ ಯಾಗಿದ್ದವು. ರಾಜ್ಯ ವಿವಿಧ ಜಿಲ್ಲೆಗಳಿಂದ ವೀರಶೈವ ಲಿಂಗಾಯತರು ಸಮಾವೇಶಕ್ಕೆ ಬಂದಿದ್ದರು.  

ಶ್ರೀಗಳನ್ನು ಸ್ಮರಿಸಲಿಲ್ಲ: ಹಾನಗಲ್‌ ಕುಮಾರ ಶ್ರೀಗಳ ನಂತರ ಸದಾಶಿವ ಶ್ರೀಗಳು ಶಿವಯೋಗ ಮಂದಿರದಲ್ಲಿ ವಟು ಸಾಧಕರಿಗೆ ವಿದ್ಯೆಯನ್ನು ಮುಂದು ವರೆಸಿದರು. ಗುರು ವಿರಕ್ತ ಪೀಠಗಳಿಗೆ ಸಾವಿರಾರು ಮಠಾ ಧೀಶರನ್ನಾಗಿ ಸಮಾಜಕ್ಕೆ ಕೊಟ್ಟಿದ್ದಾರೆ. ಆದರೆ ಸೋಮವಾರ ಜರುಗಿದ ಗುರುವಿರಕ್ತ ಮಠಾ ಧೀಶರ ಮತ್ತು ವೀರಶೈವ ಲಿಂಗಾಯತ ಸದ್ಭಾವನಾ ಸಮಾವೇಶದಲ್ಲಿ ವೇದಿಕೆ ಯಲ್ಲಿ ಸಂದೇಶ ನೀಡಿದ ಗುರುವಿರಕ್ತ ಶ್ರೀಗಳು ಒಬ್ಬರೂ ಸದಾಶಿವ ಶ್ರೀಗಳನ್ನು ಸ್ಮರಿಸಲಿಲ್ಲ ಎಂದು ಕೆಲವು ಭಕ್ತರು ನಿರಾಸೆ ವ್ಯಕ್ತಪಡಿಸಿದರು.

ವೇದಿಕೆ ಯಲ್ಲಿದ್ದ ಶ್ರೀಮದ್ವೀರಶೈವ ಶಿವಯೋಗ ಮಂದಿರ ಅಧ್ಯಕ್ಷ ಡಾ. ಸಂಗನಬಸವ ಶ್ರೀಗಳು, ಹುಬ್ಬಳ್ಳಿಯ ಗುರುಸಿದ್ಧ ರಾಜಯೋಗೀಂದ್ರ  ಶ್ರೀಗಳು ಮತ್ತು ಮುಂಡರಗಿಯ ಶ್ರೀಗಳು ಸ್ಮರಿಸಲಿಲ್ಲ.

ವೇದಿಕೆಯಲ್ಲಿ ಅಂದಾಜು ಎರಡು ಸಾವಿರ ಗುರುವಿರಕ್ತಪೀಠದ ಮಠಾ ಧೀಶರು ಆಗಮಿಸಿದ್ದರು. ಸಮಾವೇಶಕ್ಕೆ ಆಗಮಿಸಿದ ಶೇ 80 ಗುರುವಿರಕ್ತ ಮಠಾಧೀಶರು ಅಧ್ಯಯನ ಮಾಡಿದ್ದು ಸದಾಶಿವ ಶ್ರೀಗಳು ಶಿವಯೋಗ ಮಂದಿರಲ್ಲಿ ಇದ್ದಾಗ ಎಂದು ಭಕ್ತರಾದ ಡಾ. ಆರ್‌.ಸಿ. ಭಂಡಾರಿ ಹೇಳಿದರು. ಎಂ.ಬಿ. ಹಂಗರಗಿ, ಕುಮಾರಗೌಡ ಜನಾಲಿ, ಸಿದ್ದನಗೌಡ ಪಾಟೀಲ ಮೊದಲಾದ ಗಣ್ಯರು ಇದ್ದರು. 

ಗೋಧಿ ಹುಗ್ಗಿಯ ಸವಿ
ಶಿವಯೋಗ ಮಂದಿರ (ಬಾಗಲಕೋಟೆ):   ವೀರಶೈವ ಲಿಂಗಾಯತ ಗುರು ವಿರಕ್ತರ ಬೃಹತ್ ಸಮಾವೇಶಕ್ಕೆ ನಾಡಿನಾದ್ಯಂತ ಜನಸಾಗರವೇ ಹರಿದು ಬಂದಿತ್ತು. 
ಶಿವಯೋಗಮಂದಿರವೇ ಸ್ವಾಮೀಜಿಗಳಿಂದ ತುಂಬಿ ತುಳುಕುತ್ತಿತ್ತು. ಸುಮಾರು ಹದಿನೈದು ನೂರು ಸ್ವಾಮೀಜಿಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿವಯೋಗ ಮಂದಿರದ ಅಧ್ಯಕ್ಷರಾದ ಸಂಗನಬಸವಶ್ರೀಗಳ ಅಧ್ಯಕ್ಷತೆಯಲ್ಲಿ ಎಲ್ಲವೂ ಪ್ರತಿಯೊಂದು ಅಚ್ಚುಕಟ್ಟಾಗಿ ನಡೆಯಿತು.

ದೂರದ ಗ್ರಾಮ ಪಟ್ಟಣಗಳಿಂದ ಬಂದ ಸಾವಿರಾರು ಭಕ್ತರಿಗೆ ಊಟ. ಉಪಹಾರ, ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಲಿನ ತಾಪ ಅಧಿಕ ಇತ್ತಾದರೂ ನೆರೆದ ಭಕ್ತರು ಸ್ವಲ್ಪವೂ ಕದಲಿಲ್ಲ. ಬಿಸಿಲಿನಲ್ಲಿಯೇ ಕುಳಿತು ಸ್ವಾಮೀಜಿ ಅವರ ಮಾತುಗಳನ್ನು ಆಲಿಸಿದರು.

ಬೆಳಿಗ್ಗೆ ಬಂದ ಭಕ್ತರಿಗೆ ಮಹಾಮಂದಿರದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 30 ಕ್ವಿಂಟಲ್ ಉಪ್ಪಿಟ್ಟು ತಯಾರಿಸಿ ಬಡಿಸಿದರು. ಮಧ್ಯಾಹ್ನ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಒದಗಿಸಲಾಗಿತ್ತು. 70 ಕ್ವಿಂಟಲ್ ತುಪ್ಪದ ಗೋಧಿ ಹುಗ್ಗಿ, 60 ಕ್ವಿಂಟಲ್ ಅನ್ನ, 20 ಕ್ವಿಂಟಲ್ ಬದನೆಕಾಯಿ ಪಲ್ಯ, ಸಾಂಬಾರು ಸಿದ್ಧವಾಗಿತ್ತು. ಸಮಾವೇಶಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಸ್ವಯಂ ಸೇವಕರು ಶಿಸ್ತಿನಿಂದ ಊಟ ಬಡಿಸಿದರು.

ಬಾದಾಮಿ ವೀರಪುಲಿಕೇಶಿ ಪದವಿ ಮಹಾವಿದ್ಯಾಲಯ ಮತ್ತು ಹಾಳಕೇರಿ ಅನ್ನದಾನೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು, ನಂದಿಕೇಶ್ವರ, ಗಂಜೀಹಾಳ, ಬೇಲೂರು, ಬಾದಾಮಿಯ ಭಕ್ತರು ಊಟದ ವ್ಯವಸ್ಥೆಯನ್ನು ಮಾಡುವುದರಲ್ಲಿ ನಿರತರಾಗಿದ್ದರು. ಸಿದ್ಧಲಿಂಗಯ್ಯ ಹಂಗರಗಿ ಮಾತನಾಡಿ ಸಮಾವೇಶಕ್ಕೆ ಬರುವ ಭಕ್ತರಿಗೆ ಊಟದ ಸಿದ್ಧತೆಗಾಗಿ ಒಂದು ವಾರದಿಂದ ಶ್ರಮಿಸುತ್ತಿದ್ದೇವೆ. ಇಂದು ಎಲ್ಲರೂ ಊಟ ಪೂರೈಸಿ ಸಂತಸದಿಂದ ಮರಳುತ್ತಿರುವುದು ಸಾರ್ಥಕವಾಗಿದೆ ಎಂದರು.

* * 

ಕೇವಲ ಜಂಗಮರಿಗೆ ಮಾತ್ರ ವಟು ದೀಕ್ಷೆ ನೀಡಲಾಗುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಕುಮಾರೇಶ್ವರರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಅದು ಸಲ್ಲ.
ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ
ಮೂರುಸಾವಿರ ಮಠ, ಹುಬ್ಬಳ್ಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.