ADVERTISEMENT

ಕೇಂದ್ರ ಸ್ಥಾನ ಬಿಡಲು ಅನುಮತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:05 IST
Last Updated 13 ಮೇ 2017, 10:05 IST

ಬಾಗಲಕೋಟೆ: ‘ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು. ಅನಿವಾರ್ಯ ಕಾರಣದಿಂದ ಹೊರಗೆ ತೆರಳಬೇಕಾದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಬೀಳಗಿ ತಾಲ್ಲೂಕು ಗಿರಿಸಾಗರ ಬಳಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ, ನಂತರ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಂಡು ಜನರ ಸಂಕಷ್ಟ ಪರಿಹರಿಸಲು ಸೂಚಿಸಿದರು.

ಬರಪರಿಹಾರ ಕಾಮಗಾರಿ ಕೈಗೊಳ್ಳಲು ಹಣದ ಕೊರತೆ ಇಲ್ಲ. ಅದಕ್ಕಾಗಿ ₹16.80 ಕೋಟಿ ಬಿಡುಗಡೆ ಮಾಡಲಾಗಿದೆ. ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿನ ಅನುದಾನವನ್ನು ಕೊಳವೆ ಬಾವಿ, ಕುಡಿಯುವ ನೀರು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಬಳಸಲಾಗುತ್ತಿದೆ. ಜಿಲ್ಲಾಧಿಕಾರಿ ಪರಿಹಾರ ನಿಧಿಯಡಿ ಲಭ್ಯವಿರುವ ₹ 9 ಕೋಟಿ ಅನುದಾನದ ಬಳಕೆಯ ಜೊತೆಗೆ ಜಾನುವಾರುಗಳಿಗೆ ಮೇವು ಖರೀದಿಗೆ ಕ್ರಮ ವಹಿಸಲು ತಿಳಿಸಿದರು.

ADVERTISEMENT

ಬೆಳೆ ಹಾನಿಯ ಕಾರಣ ಜಿಲ್ಲೆಯ 86 ಸಾವಿರ ರೈತರ ಖಾತೆಗೆ ಈಗಾಗಲೇ ₹ 49 ಕೋಟಿ ಹಣವನ್ನು ನೇರವಾಗಿ ಜಮೆ ಮಾಡಲಾಗಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗದ 16 ಸಾವಿರ ರೈತರು ಬಾಕಿ ಇದ್ದಾರೆ. ಮೇ ಈಗಾಗಲೇ ಜಾಗೃತಿ ಹಮ್ಮಿಕೊಳ್ಳಲಾಗಿದೆ. ರೈತರ ಬೆಳೆ ಪರಿಹಾರ ಮೊತ್ತವನ್ನು ಸಾಲ ಬಾಬ್ತಿಗೆ ಜಮಾ ಮಾಡಿಕೊಳ್ಳದಂತೆ ಬ್ಯಾಂಕ್‌ ಆಡಳಿತಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಸಭೆಗೆ ತಿಳಿಸಿದರು.

ಖಾಸಗಿಯವರಿಂದ ಬಾಡಿಗೆ ಪಡೆದ ಕೊಳವೆ ಬಾವಿಗಳ ಮಾಲೀಕರು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವವರಿಗೆ ಬಿಲ್‌ ಬಾಕಿ ಉಳಿಸಿಕೊಳ್ಳುವಂತಿಲ್ಲ. 15 ದಿನಗಳಿಗೊಮ್ಮೆ ಹಣ ಪಾವತಿಸುವಂತೆ ತಹಶೀಲ್ದಾರ್‌ಗಳಿಗೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು 30 ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬಾದಾಮಿ ತಾಲ್ಲೂಕಿನಲ್ಲಿ ಎರಡು, ಜಮಖಂಡಿ 12, ಮುಧೋಳ 6, ಬೀಳಗಿ 4 ಹಾಗೂ ಹುನಗುಂದ ತಾಲ್ಲೂಕಿನ ಒಂದು ಗ್ರಾಮ ಸೇರಿದಂತೆ ಒಟ್ಟು 10 ಗ್ರಾಮ ಹಾಗೂ 15 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಳೆದ ನವೆಂಬರ 16ರಂದು ಘಟಪ್ರಭಾ ನದಿಗೆ  0.80 ಟಿಎಂಸಿ ಅಡಿ, ಫೆಬ್ರವರಿ 18 ರಂದು 1.99 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ಘಟಪ್ರಭಾ ಎಡದಂಡೆ ಕಾಲುವೆಗೆ ಪ್ರತಿದಿನ 2,400 ಕ್ಯುಸೆಕ್ ನೀರು ಬಿಡುಗಡೆಗೊಳಿಸಲಾಗಿದೆ. ಮಲಪ್ರಭಾ ನದಿಗೆ ಒಟ್ಟು 2.45 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಬೆಳೆನಷ್ಟ ಪರಿಹಾರ ಕೊಡಿಸಿ: ಕಾಲುವೆಗೆ ನೀರು ಹರಿಸದ ಕಾರಣ ಕಾವೇರಿ, ಹೇಮಾವತಿ, ಹಾರಂಗಿ, ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿದ ರೀತಿಯಲ್ಲಿಯೇ ಸರ್ಕಾರ ಘಟಪ್ರಭಾ, ಮಲಪ್ರಭಾ ಹಾಗೂ ಕಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೂ ಪರಿಹಾರ ನೀಡಲು ವಿಶೇಷ ಪ್ಯಾಕೇಜ್ ರೂಪಿಸುವಂತೆ ಶಾಸಕ ಗೋವಿಂದ ಕಾರಜೋಳ ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದರು.

ರೈತರ ₹1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವಂತೆ ಕೋರಿದ ಅವರು, ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಯಾಗಿ ಪರಿವರ್ತಿಸಿ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಿ ಕುಡಿಯುವ ನೀರಿಗೆ ವಿಶೇಷ ಅನುದಾನ ಕೊಡಿಸುವಂತೆ ಕೋರಿದರು.

ಮುಧೋಳ ನಗರಕ್ಕೆ ಈಗ 20 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನಗರದ ಜನಸಂಖ್ಯೆ ಹಾಗೂ ಲಭ್ಯವಿರುವ ನೀರಿನ ಪ್ರಮಾಣ ಗಮನಿಸಿದರೆ ಮೂರು ದಿನಗಳಿಗೊಮ್ಮೆ ನೀರು ಕೊಡಬಹುದು. ಆದರೆ ಅಧಿಕಾರಿಗಳ ಕಾರ್ಯವೈಖರಿ ಈ ಸಂಕಷ್ಟ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ  ಆರೋಗ್ಯ ತಪಾಸಣೆಗೆ ಸೂಚನೆ
ಬಾಗಲಕೋಟೆ: ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಬೀಳಗಿ ತಾಲ್ಲೂಕು ಗಿರಿಸಾಗರದಲ್ಲಿ ₹ 89.30 ಲಕ್ಷ ವೆಚ್ಚದಲ್ಲಿ 6 ಎಕರೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕೆರೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಮಕ್ಕಳು, ಅವರ ಕುಟುಂಬದವರೂ ಬೀಡು ಬಿಟ್ಟಿರುವುದು ಕೆಲವು ಕಡೆ ಕಂಡುಬಂದಿದೆ. ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಲ್ಲಿ ಅವರೆಲ್ಲರಿಗೂ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಗಿರಿಸಾಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್ ಸೇವೆ ಕಲ್ಪಿಸುವಂತೆ ಗ್ರಾಮಸ್ಥರು ಇದೇ ವೇಳೆ ಸಚಿವರಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಶಾಸಕ ಜೆ.ಟಿ.ಪಾಟೀಲ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಸಿಇಒ ವಿಕಾಸ್ ಸುರಳಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.