ADVERTISEMENT

ಕೊಠಡಿಗೆ ಬೀಗ: ಶಾಲಾ ಆವರಣದಲ್ಲಿ ಪಾಠ...!

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 8:47 IST
Last Updated 25 ಜುಲೈ 2014, 8:47 IST

ಕೆರೂರ: ಇಲ್ಲಿಗೆ ಮಂಜೂರಾಗಿರುವ ಸರ್ಕಾರಿ ಪದವಿ ಕಾಲೇಜು ರಾಜಕೀಯ ಮೇಲಾಟದಲ್ಲಿ ಸಿಲುಕಿದ್ದು ಗಂಡ– ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಬಿಜೆಪಿ ಸರ್ಕಾರ 2012ರಲ್ಲಿ ಕೆರೂರಿಗೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ಇದಕ್ಕೆ ಸಂಬಂಧಿಸಿದ ಸರ್ಕಾರಿ ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಿ ಅದನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಿಸುವ ಹುನ್ನಾರದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಗುಳೇದಗುಡ್ಡಕ್ಕೆ ಸ್ಥಳಾಂತರಿಸುವ ಕುರಿತಂತೆ ಸ್ಪಷ್ಟತೆ ಇಲ್ಲ.

ಈ ಮಧ್ಯೆ ಪದವಿ ಕಾಲೇಜಿನ ಆರಂಭದ ಕುರಿತಂತೆ ಸರ್ಕಾರದ ಸುತ್ತೋಲೆಗೆ ತಿದ್ದುಪಡಿ ಮಾಡಿರುವ ಕುರಿತಂತೆ ಧಾರವಾಡ ಹೈಕೋರ್ಟ್‌ ಪೀಠದಲ್ಲಿ ಈ ಕುರಿತಂತೆ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ತಿದ್ದುಪಡಿಗೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಚ್‌. ಸಿಂಗೆ ಗುರುವಾರದಿಂದ ತರಗತಿಗಳನ್ನು ಆರಂಭಿಸಿದ್ದು ಇಷ್ಟರಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 56 ವಿದ್ಯಾರ್ಥಿಗಳು ಬಿ.ಎ., ಬಿ.ಕಾಂ. ತರಗತಿಗೆ ಪ್ರವೇಶ ಪಡೆದಿದ್ದು ಸದ್ಯ ಸ್ವಂತ ಕಟ್ಟಡ ಇಲ್ಲದ ಕಾರಣ ತರಗತಿಗಳನ್ನು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ ಸ್ಥಳೀಯ ರಾಜಕೀಯ ಒತ್ತಡಕ್ಕೆ ಒಳಗಾಗಿ ಗುರುವಾರ ಬೆಳಿಗ್ಗೆ ಶಾಲೆಯ ಕೊಠಡಿಗಳ ಬಾಗಿಲು ತೆರೆಯದೇ ಬೀಗ ಹಾಕಿದ್ದ ಕಾರಣ ಶಾಲೆಯ ಕಟ್ಟೆಯ ಮೇಲೆ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪ್ರಾಚಾರ್ಯರು ಪಾಠ ಮಾಡಿದರು.

ಪ್ರಾಚಾರ್ಯರು ಮಾತನಾಡಿ ಸರ್ಕಾರಿ ಆದೇಶದ ಪ್ರಕಾರ ಇಲ್ಲಿ ಕಾಲೇಜು ಆರಂಭಿಸಲಾಗಿದ್ದು ಇದನ್ನು ಸ್ಥಳಾಂತರಿಸುವ ಪ್ರಶ್ನೆ ಇಲ್ಲ ಎಂದು ತಿಳಿಸಿದರಲ್ಲದೇ ವಿದ್ಯಾರ್ಥಿಗಳು ನಿಯಮಿತವಾಗಿ ಕಾಲೇಜಿಗೆ ಹಾಜರಾಗಿ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶೋಕ ಜಿಗಳೂರ ಮಾತನಾಡಿ, ಕಾಲೇಜು ಇಲ್ಲೇ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿದಿದೆ. ಯಾವುದೇ ಕಾರಣಕ್ಕೂ ಕಾಲೇಜು ರದ್ದಾಗಲು ಬಿಡುವುದಿಲ್ಲ. ಈಗಾಗಲೇ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯಲಾಗಿದೆ. ವಿದ್ಯಾರ್ಥಿಗಳು ಧೈರ್ಯದಿಂದ ಕಾಲೇಜಿಗೆ ಹಾಜರಾಗುವಂತೆ ಕಿವಿಮಾತು ಹೇಳಿದರು.

ರಾಮಣ್ಣ ಕಟ್ಟಿಮನಿ, ರಂಗನಾಥ ದೇಸಾಯಿ ಹಾಗೂ ಅರುಣ ಕಟ್ಟಿಮನಿ, ಈರಣ್ಣ ಕುಂಬಾರ, ಹನಮಂತ ಚೂರಿ, ರವಿ ಮತ್ತಿಕಟ್ಟಿ, ತಿಮ್ಮಣ್ಣ ದಾಸರ, ಲಿಂಬಣ್ಣ ಗೌಡರ, ಮಂಜು ಚಿಟಗುಬ್ಬಿ, ಮಲ್ಲೇಶ ಮೇಡಿ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವಿವಾದದ ಬಗ್ಗೆ ಸ್ಥಳೀಯ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ದೂರವಾಣಿಗೆ ದೊರಕಿಲ್ಲ. ಅಲ್ಲದೇ ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.