ADVERTISEMENT

ಗೌರಿ ಹಬ್ಬದ ಸಡಗರದಲ್ಲಿ ಮಿಂದ ಬಂಜಾರ ಸಮುದಾಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 6:14 IST
Last Updated 4 ಸೆಪ್ಟೆಂಬರ್ 2017, 6:14 IST

ಬಾಗಲಕೋಟೆ: ಬಂಜಾರ (ಲಂಬಾಣಿ) ಸಮುದಾಯದಲ್ಲಿ ಗೌರಿ ಹಬ್ಬ (ಸಸಿ) ಆಚರಣೆ ಸಂಭ್ರಮ ಭಾನುವಾರ ಮನೆ ಮಾಡಿತ್ತು. ಮೂರು ವರ್ಷಗಳಿಗೊಮ್ಮೆ ಆಚರಿಸುವ ಸಸಿಗಳ ಹಬ್ಬ, ಬಂಜಾರ ಸಮುದಾಯದವರ ವಿಶೇಷ ಹಬ್ಬವಾಗಿದೆ. ಸಮೀಪದ ಮಚಖಂಡಿ ತಾಂಡಾದಲ್ಲಿ ಭಾನುವಾರ ಸಸಿಗಳ ಅಪರೂಪದ ಹಬ್ಬ ಮನೆಮಾಡಿದೆ. ಒಂಬತ್ತು ದಿನಗಳ ಕಾಲ ಸಸಿಗಳನ್ನು ಬೆಳೆಸಿ, ಅದಕ್ಕೆ ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಹಬ್ಬದ ಕೊನೆ ದಿನ  ಸಸಿ ವಿಸರ್ಜಿಸುವುದು ವಾಡಿಕೆ.

ಹಬ್ಬ ಆರಂಭಕ್ಕೂ ಮುನ್ನ ಗ್ರಾಮದ ಪ್ರತೀ ಮನೆಯ ಮಹಿಳೆಯರು ಒಂದು ಬಿದಿರಿನ ಬುಟ್ಟಿಯಲ್ಲಿ ಹುತ್ತದ ಮಣ್ಣನ್ನು ತಂದು ಅದರಲ್ಲಿ ಗೋಧಿ ಸಸಿ ಬೆಳೆಸುತ್ತಾರೆ. ಹಬ್ಬದ ಕೊನೆ ದಿನ ತಾವು ಹಾಕಿದ ಸಸಿ ಬುಟ್ಟಿಗಳನ್ನು ತಲೆ ಮೇಲೆ ಹೊತ್ತುಕೊಂಡು ಸಾಮೂಹಿಕ ನೃತ್ಯದೊಂದಿಗೆ ಹಾಡು ಹಾಡುತ್ತಾ ಗ್ರಾಮದ ಗೌಡರಾದ ಕಾರಬಾರಿ ಅವರ ಮನೆ ಎದರೂ ಸೇರುತ್ತಾರೆ. ನಂತರ ಜನಾಂಗದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸಸಿ ಅರ್ಪಿಸಲಾಗುತ್ತದೆ. ನಂತರ ಐದು ಜನ ಮುತೈದೆಯರಿಂದ ಎಲ್ಲ ಮಹಿಳೆಯರ ಬುಟ್ಟಿಯಲ್ಲಿನ ಸಸಿಗಳನ್ನು ಕಿತ್ತು ಪರಸ್ಪರ ವಿನಿಮಯ ಮಾಡಿಕೊಂಡು ಪರಸ್ಪರ ಆಲಂಗಿಸಿಕೊಂಡು ಸುಖ–ದುಃಖವನ್ನು ಹಂಚಿಕೊಳ್ಳುತ್ತಾರೆ.

ನಂತರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಗೌರಿಯನ್ನು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಗ್ರಾಮದ ಜನರಿಗೆ, ಮಕ್ಕಳಿಗೆ ಹಾಗೂ ಜಾನುವಾರುಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲಿ. ನಾಡಿಗೆ ಸಮೃದ್ಧವಾಗಿ ಮಳೆ–ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸುವುದು ಈ ಹಬ್ಬದ ಉದ್ದೇಶವಾಗಿದೆ ಎಂದು ಗ್ರಾಮದ ಸೀತಾಬಾಯಿ ಪಮ್ಮಾರ ಹೇಳಿದರು.

ADVERTISEMENT

ಇದು ಕೇವಲ ಹೆಣ್ಣುಮಕ್ಕಳ ಹಬ್ಬವಾಗಿದೆ. ಒಂಬತ್ತು ದಿನಗಳ ಕಾಲ ಸಸಿಗಳಿಗೆ ನೀರು ಹಾಕಲಾಗುತ್ತದೆ. ಪ್ರತೀ ದಿನವೂ ಅದಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಸಸಿಗಳ ಬೆಳವಣಿಗೆಗೆ ಅನುಗುಣವಾಗಿ ಅವರ ಮನೆಯೂ ಕೂಡಾ ಸಮೃದ್ಧವಾಗಿರುತ್ತದೆ ಎಂಬುದು ನಮ್ಮ ನಂಬಿಕೆ. ಪೂರ್ವಿಕರಿಂದ ಬಂದ ಈ ಆಚರಣೆಯನ್ನು ನಾವು ಮುಂದುವರೆಸಿಕೊಂಡು ಬಂದ್ದಿದ್ದೇವೆ ಎನ್ನುತ್ತಾರೆ ಗ್ರಾಮದ ಗಿರಿಬಾಯಿ ಚವ್ಹಾಣ.

ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ತರವಾದ ಕೆಲಸಗಳನ್ನು ನಮ್ಮ ಧಾರ್ಮಿಕ ಆಚರಣೆಗಳು ಮಾಡುತ್ತವೆ. ವಿಶೇಷವಾಗಿ ಈ ಹಬ್ಬಕ್ಕೆ ಬಂದ ಸಂಬಂಧಿಕರಿಗೂ ಸಸಿಗಳನ್ನು ನೀಡುವ ಪರಂಪರೆ ಇದೆ. ಯುವಕರು, ಯುವತಿಯರು ಎನ್ನದೇ ಎಲ್ಲರೂ ಸೇರಿ ಸಡಗರದಿಂದ ಲಂಬಾಣಿ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರಾದ ಶಂಕರ ನಾಯಕ್, ಬಸವರಾಜ ಲಮಾಣಿ ಹಾಗೂ ಶಂಕರ ಜಲಗೇರಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.