ADVERTISEMENT

ಗ್ರಾಮಸಭೆಗೆ ಗೈರು: ಅಧಿಕಾರಿಗಳಿಗೆ ದಂಡ

ದಂಡದ ಹಣ ₹ 5 ಸಾವಿರ ಪಂಚಾಯ್ತಿಗಳ ಅಭಿವೃದ್ಧಿಗೆ ಬಳಕೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ

ವೆಂಕಟೇಶ್ ಜಿ.ಎಚ್
Published 8 ಫೆಬ್ರುವರಿ 2017, 9:45 IST
Last Updated 8 ಫೆಬ್ರುವರಿ 2017, 9:45 IST

ಬಾಗಲಕೋಟೆ: ಗ್ರಾಮಸಭೆಗಳಿಗೆ ಹಾಜ ರಾಗದ 14 ಮಂದಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಿರುವ ಇಲ್ಲಿನ ಜಿಲ್ಲಾ ಪಂಚಾಯ್ತಿ ಆಡಳಿತ ತಲಾ ₹ 5000 ದಂಡ ವಿಧಿಸಲು ಮುಂದಾಗಿದೆ.

ಅಧಿಕಾರಿಗಳಿಂದ ಪಡೆದ ದಂಡದ ಹಣವನ್ನು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ಆಯಾ ಗ್ರಾಮ ಪಂಚಾಯ್ತಿಗಳಿಗೆ ಕೊಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ಗಳೊಂದಿಗೆ ವಾರಕ್ಕೊಂದು ಗ್ರಾಮ ಪಂಚಾಯ್ತಿಗೆ ಭೇಟಿ ನೀಡುವ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಗ್ರಾಮಸ್ಥ ರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈಗಾ ಗಲೇ ಜನವರಿ 27ರಂದು ಹುನಗುಂದ ತಾಲ್ಲೂಕು ನಾಗೂರಿನಲ್ಲಿ ಹಾಗೂ ಫೆಬ್ರುವರಿ 2ರಂದು ಬಿಂಜವಾಡಗಿಯಲ್ಲಿ ಗ್ರಾಮ ಸಭೆ ನಡೆಸಲಾಗಿದೆ.

‘ಬಿಂಜವಾಡಗಿಯಲ್ಲಿ ಕಳೆದ ಮೂರು ತಿಂಗಳಿನಿಂದ ಪಡಿತರ ವಿತರಣೆಯಾಗಿಲ್ಲ ಎಂದು ಸಭೆಯ ವೇಳೆ ಗ್ರಾಮಸ್ಥರು ದೂರಿದರು. ಅದೇ ಪಂಚಾಯ್ತಿ ವ್ಯಾಪ್ತಿಯ ಹೇಮವಾಡಗಿ, ಹಗೇದಾಳ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಯಿತು. ಆದರೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ನೋಟಿಸ್‌ ಕಳುಹಿಸಿದ್ದರೂ ಹೆಚ್ಚಿನ ಅಧಿಕಾರಿಗಳು ಗೈರು ಹಾಜರಾಗಿದ್ದರು.

ಇದರಿಂದ ಸ್ಥಳೀಯರ ಅಹವಾಲುಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆಯಾಯಿತು. ಹಾಗಾಗಿ ಗೈರು ಹಾಜರಾದವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ’ ಎಂದು ವೀಣಾ ಹೇಳಿದರು.

ನೋಟಿಸ್‌ ಜಾರಿಗೊಳಿಸಿ ಅಧಿಕಾರಿಗಳಿಂದ ವಿವರಣೆ  ಕೇಳಲಾಗಿದೆ. ಗೈರು ಹಾಜರಿಗೆ ಅವರು ತೃಪ್ತಿದಾಯಕ ಉತ್ತರ ನೀಡಿದಲ್ಲಿ (ಹಾಸಿಗೆಯಿಂದ ಏಳಲಾರ ದಷ್ಟು ತೀವ್ರತರ ಅನಾರೋಗ್ಯ ಇಲ್ಲವೇ ನ್ಯಾಯಾಲಯದ ಕೆಲಸ) ಮಾತ್ರ ದಂಡ ವಿಧಿಸದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಫಲಕ ಕಡ್ಡಾಯ: ‘ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಗ್ರಾಮಸ್ಥರಿಗೆ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಕೆಲವು ಕಡೆ ಅವರನ್ನು ಎರಡು ಗ್ರಾಮ ಪಂಚಾಯ್ತಿಗಳಿಗೆ ನಿಯೋಜನೆ ಮಾಡಲಾಗಿದೆ. ತಲಾ ಮೂರು ದಿನಗಳಂತೆ ಎರಡೂ ಪಂಚಾಯ್ತಿಗಳಲ್ಲೂ ಅವರು ಹಾಜರಿರಬೇಕಿದೆ.

ಆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲು ಪಂಚಾಯ್ತಿಗಳ ಮುಂದೆ ಕಡ್ಡಾಯವಾಗಿ ಫಲಕ ಹಾಕಲು ಆಯಾ ತಾಲ್ಲೂಕು ಪಂಚಾಯ್ತಿ ಕಾರ್ಯ ನಿವರ್ಹಣಾಧಿಕಾರಿಗಳ ಮೂಲಕ ಸುತ್ತೋಲೆ ಹೊರಡಿಸಲಾಗಿದೆ’ ಎಂದು ವೀಣಾ ತಿಳಿಸಿದರು.

ಗ್ರಾಮ ವಾಸ್ತವ್ಯಕ್ಕೆ ನಿರ್ಧಾರ..
ಸ್ವಚ್ಛ ಭಾರತ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಕಟ್ಟಿಸಿಕೊಟ್ಟರೂ ಅವು ಬಳಕೆಯಾಗುತ್ತಿಲ್ಲ. ಕೆಲವು ಕಡೆ ಹಳೆಯ ಸೈಕಲ್, ಸಾಮಗ್ರಿ, ಕುಳ್ಳು, ಕಟ್ಟಿಗೆ ಸಂಗ್ರಹಿಸಿಡಲಾಗುತ್ತಿದೆ. ಹಾಗಾಗಿ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲು ಏಪ್ರಿಲ್‌ ತಿಂಗಳಿನಿಂದ ಗ್ರಾಮ ವಾಸ್ತವ್ಯ ಮಾಡಲು ನಿರ್ಧ ರಿಸಿರುವುದಾಗಿ ವೀಣಾ ಕಾಶಪ್ಪನವರ ತಿಳಿಸಿದರು.

‘ವಾಸ್ತವ್ಯ ಮಾಡಿದ ಗ್ರಾಮಗಳಲ್ಲಿ ಮುಂಜಾನೆ ಎದ್ದಾಗ ಶೌಚಾಲಯಕ್ಕೆ ಎಲ್ಲಿ ವ್ಯವಸ್ಥೆ ಮಾಡಿದ್ದೀರಿ’ ಎಂದು ಗ್ರಾಮಸ್ಥರನ್ನು ಪ್ರಶ್ನಿಸುವೆ. ಆಗ ಮುಜುಗರಕ್ಕೀಡಾಗುವ ಅವರಿಗೆ ಶೌಚಾಲಯದ ಮಹತ್ವದ ಬಗ್ಗೆ ಜಾಗೃತಿ ಮೂಡಲಿದೆ. ಶೌಚಾಲಯ ಕಟ್ಟಿಕೊಟ್ಟರೂ ಬಳಕೆ ಮಾಡದ ಗ್ರಾಮಗಳನ್ನು ಪಿಡಿಓ ಮೂಲಕ ಗುರುತಿಸಿ ಅಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದರು.

ADVERTISEMENT

*
ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಗ್ರಾಮಸ್ಥರಿಗೆ ಸಮರ್ಪಕವಾಗಿ ಮುಟ್ಟುವ ನಿಟ್ಟಿನಲ್ಲಿ ಎಲ್ಲ ಪಂಚಾಯ್ತಿ ಗಳಿಗೆ ಭೇಟಿ ನೀಡಲಾಗುವುದು.
-ವೀಣಾ ಕಾಶಪ್ಪನವರ,
ಅಧ್ಯಕ್ಷೆ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.