ADVERTISEMENT

ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 10:15 IST
Last Updated 30 ಆಗಸ್ಟ್ 2017, 10:15 IST

ಬಾಗಲಕೋಟೆ: ‘ಟಿಕೆಟ್ ನೀಡುವಂತೆ ಕೋರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ಅವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಶೀಘ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಒತ್ತಾಯಿಸುವೆ’ ಎಂದು ಸೀಮಿಕೇರಿ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲಿ. ಇಲ್ಲದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವೆ’ ಎಂದು  ಆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.

‘ಈ ಬಾರಿ ಬಿಜೆಪಿಯಿಂದ 180ಕ್ಕೂ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ. ಅದರಲ್ಲಿ 60ಕ್ಕೂ ಹೆಚ್ಚು ಸಾಧು–ಸಂತರು, ಸ್ವಾಮೀಜಿಗಳು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ನಾನು ಆ ಪಕ್ಷದ ಟಿಕೆಟ್‌ನ ಆಕಾಂಕ್ಷಿಯಾಗಿದ್ದೇನೆ. ಮಠದ ಭಕ್ತರ ಒತ್ತಾಸೆಯೂ ಅದೇ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಅನ್ನ ಹಾಗೂ ಜ್ಞಾನ ದಾಸೋಹಕ್ಕೆ ರಾಮಾರೂಢ ಮಠ ಹೆಸರಾಗಿದೆ. ಇಲ್ಲಿ ಅದ್ವೈತ ಪಂಥದ ಆಶಯಗಳನ್ನು ಬೋಧಿಸಲಾಗುತ್ತಿದೆ. ಬೀಳಗಿ ಕ್ಷೇತ್ರದಲ್ಲಿ ಎಲ್ಲಾ ಜಾತಿ,ಮತ ಹಾಗೂ ಪಂಥದವರನ್ನೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಠ ಭಕ್ತರನ್ನಾಗಿ ಹೊಂದಿದೆ. ಹಾಗಾಗಿ ಅಲ್ಲಿ ನನಗೆ ಗೆಲ್ಲುವ ಅವಕಾಶ ಹೆಚ್ಚಿದೆ’ ಎಂದು ಹೇಳಿದರು.

‘ಬಿಜೆಪಿಯಿಂದ ‘ಬಿ ಫಾರಂ’ ಸಿಗುವವರೆಗೂ ಹೋರಾಟ ಮಾಡುತ್ತೇನೆ. ಅಕಸ್ಮಾತ್ ಸಿಗದಿದ್ದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವೆ ಹೊರತು ಯಾವುದೇ ಪಕ್ಷದ ಅಭ್ಯರ್ಥಿಯಾಗುವುದಿಲ್ಲ. ಈಗಾಗಲೇ ಎರಡು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಸುತ್ತಾಡಿ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇನೆ.

ಭಕ್ತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕನಾಗಿ ಆಯ್ಕೆಯಾದರೆ ದೇಶದ ಜನತೆ ಬೀಳಗಿ ಕ್ಷೇತ್ರದ ಕಡೆ ತಿರುಗಿ ನೋಡುವಂತೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಶ್ರೀಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.