ADVERTISEMENT

‘ತಾಲ್ಲೂಕು ಘೋಷಣೆ: ಕಾಂಗ್ರೆಸ್‌ ಕೊಡುಗೆ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:58 IST
Last Updated 23 ಮಾರ್ಚ್ 2017, 9:58 IST

ಗುಳೇದಗುಡ್ಡ: ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರು ಜಿಲ್ಲೆಗಳನ್ನು ರಚನೆ ಮಾಡಿ ಹೆಸರು ಉಳಿಸಿದಂತೆ, ಇವತ್ತು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ವರ್ಷದ ಬೇಡಿಕೆಯಾಗಿದ್ದ ಗುಳೇದಗುಡ್ಡವನ್ನು ತಾಲ್ಲೂಕನ್ನಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿ, ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಸಂತಸ ವ್ಯಕ್ತಪಡಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. 6 ತಿಂಗಳ ಹಿಂದಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗುಳೇದಗುಡ್ಡ ಪಟ್ಟಣವನ್ನು ತಾಲ್ಲೂಕನ್ನಾಗಿ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಿದ್ದಾಗ ಶ್ರೀಕಂಠಯ್ಯ ಅವರು ಕಂದಾಯ ಸಚಿವರಾಗಿದ್ದರು.

ಆಗ ಗುಳೇದಗುಡ್ಡಕ್ಕೆ ವಿಶೇಷ ತಹಶೀಲ್ದಾರ್‌ ನೇಮಕ ಮಾಡಿ ತಾಲ್ಲೂಕನ್ನಾಗಿ ಕಾರ್ಯರೂಪಕ್ಕೆ ತಂದಿರುವುದೇ ಕಾಂಗ್ರೆಸ್ ಸರ್ಕಾರ. ತಾಲ್ಲೂಕು ರಚನೆ ಕುರಿತು ಸರ್ಕಾರ ನೇಮಕ ಮಾಡಿರುವ 4 ಸಮಿತಿಗಳು ಗುಳೇದಗುಡ್ಡವನ್ನು ತಾಲ್ಲೂಕು ಮಾಡಲು ಶಿಫಾರಸು ಮಾಡಿದ್ದು ಈಗ ಸಂತಸ ತಂದಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿ ಮಾಡಿದ ಸಾಲದಲ್ಲಿ ಕೇವಲ ಸಹಕಾರಿ ಸಂಘಗಳಲ್ಲಿನ ಸಾಲವನ್ನಾದರೂ ಮುಖ್ಯಮಂತ್ರಿಗಳು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.