ADVERTISEMENT

‘ದೇಶ ಕಟ್ಟಲು ಯುವಶಕ್ತಿ ಬಳಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:17 IST
Last Updated 16 ಮೇ 2017, 7:17 IST

ಜಮಖಂಡಿ: ಯುವಶಕ್ತಿ ಹಾಳಾಗಬಾರದು. ದೇಶ ಕಟ್ಟುವಲ್ಲಿ ಯುವಶಕ್ತಿ ಬಳಕೆ ಆಗಬೇಕು. ಆ ನಿಟ್ಟಿನಲ್ಲಿ ಯುವಕರಿಗೆ ಕೌಶಲ ತರಬೇತಿ ದೊರೆಯಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ’ಯನ್ನು ಕರ್ನಾಟಕ ಸರ್ಕಾರ ಹೊಸದಾಗಿ ರಚಿಸಿದೆ ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಆಶ್ರಯದಲ್ಲಿ ಕರ್ನಾಟಕ ಕೌಶಲ ಮಿಷನ್ ಅಡಿಯಲ್ಲಿ ಇಲ್ಲಿನ ಬಸವ ಭವನ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿ ಸಿದ್ದ ನಿರುದ್ಯೋಗಿ ಯುವಜನ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗಿ ಯುವಕ–ಯುವತಿಯರು ಇಚ್ಛೆ ಪಡುವ ಉದ್ಯೋಗ ಕುರಿತು ಪರಿಣತರಿಂದ 3 ತಿಂಗಳ ಅವಧಿಯ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗುವುದು. ತರಬೇತಿ ಪಡೆದ ಯುವಕರು ಸರ್ಕಾರಿ ಇಲಾಖೆಗಳಲ್ಲಿ ಅಥವಾ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಇಲ್ಲವೆ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನೋಪಾಯ ಕಂಡುಕೊಂಡು ಸ್ವಾವಲಂಬಿಗಳಾಗಬಹುದು ಎಂದರು.

ADVERTISEMENT

ಟಿಪಿಇಒ ಎನ್‌.ವೈ. ಬಸರಿಗಿಡದ ಮಾತನಾಡಿ, ‘ನೂತನವಾಗಿ ರಚಿಸ ಲಾಗಿರುವ ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗೆ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ₹ 500 ಕೋಟಿ ಹಣ ತೆಗೆದಿರಿಸಿದೆ. ಕನಿಷ್ಠ 8ನೇ ತರಗತಿ ಓದಿದ 16ರಿಂದ 35 ವರ್ಷದ ಯುವಕ–ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಧಾರ ಕಾರ್ಡ್‌ ಕಡ್ಡಾಯ ಇರುತ್ತದೆ. ಮೇ 25ರವರೆಗೆ ನೋಂದಣಿ ಕಾರ್ಯ ಮುಂದುವರಿಯಲಿದೆ’ ಎಂದರು.

ತಾ.ಪಂ. ಅಧ್ಯಕ್ಷೆ ಸುನಂದಾ ಮುಗಳಖೋಡ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸಾಂಯವ್ವ ದಳವಾಯಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಂದು ನರಸಗೊಂಡ, ಸಂಜೀವ ಆಲಬಾಳ, ಬಸಪ್ಪ ತೇಲಿ, ಗ್ರೇಡ್‌–2 ತಹಶೀಲ್ದಾರ್‌ ಎಸ್‌.ಆರ್‌. ಸೂಳೇಭಾವಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಇದ್ದರು.ಕೆ.ಜಿ. ತೆಲಬಕ್ಕನವರ ನಿರೂಪಿಸಿ ದರು. ಬಿಇಒ ಎನ್‌.ವೈ. ಕುಂದರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.