ADVERTISEMENT

ಪುರಸಭೆ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:26 IST
Last Updated 28 ಮೇ 2017, 10:26 IST

ಗುಳೇದಗುಡ್ಡ: ಇಲ್ಲಿನ ಕೈಮಗ್ಗ ನೇಕಾರ ಸಹಕಾರಿ ಸಂಘಗಳ ಆಶ್ರಯದಲ್ಲಿ ಪಡೆದ ಆಶ್ರಯ ಯೋಜನೆಯ ನಿವೇಶನಗಳ ಹಕ್ಕುಪತ್ರ ಪಡೆಯಲು ನೇಕಾರ ಫಲಾನುಭವಿಗಳು ಪುರಸಭೆಗೆ ಮುತ್ತಿಗೆ ಹಾಕಿದ ಪ್ರಸಂಗ ಶನಿವಾರ ನಡೆಯಿತು.

ಸ್ಥಳೀಯ ಗಜಾನನ ಕೈಮಗ್ಗ ಹಾಗೂ ಮೋಕೇಶ್ವರಿ ಕೈಮಗ್ಗ ನೇಕಾರ ಸಹಕಾರಿ ಸಂಘದಲ್ಲಿ ಆಯ್ಕೆಯಾದ ನೇಕಾರ ಫಲಾನುಭವಿಗಳು ಕಳೆದ 2–3 ವರ್ಷಗಳಿಂದ ನಿವೇಶನಗಳ ಹಕ್ಕುಪತ್ರ ಪಡೆಯಲು ಪುರಸಭೆಗೆ ಅಲೆದಾಡಿದರೂ ಪುರಸಭೆಯಲ್ಲಿ ಕಾಗದ ಪತ್ರಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಫಲಾನುಭವಿಗಳು ದೂರಿದರು.

ಸರ್ಕಾರ ಆಶ್ರಯ ನಿವೇಶನಗಳನ್ನು ಕಟ್ಟಿಸಿಕೊಳ್ಳಲು  ನೀಡಿದ ಸಾಲ ಈಗ ಮನ್ನಾ ಆಗಿದೆ. ಆದರೂ ಸಂಘದವರು ಹಾಗೂ ಪುರಸಭೆಯವರು ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

ಗಜಾನನ ಕೈಮಗ್ಗ ನೇಕಾರ ಸಹಕಾರಿ ಸಂಘವು 2007–08ರಲ್ಲಿ 66 ನಿವೇಶನಗಳನ್ನು ಹಂಚಿಕೆ ಮಾಡಿದ್ದು. ಮೋಕೇಶ್ವರಿ ಕೈಮಗ್ಗ ನೇಕಾರ ಸಹಕಾರಿ ಸಂಘವು 2005–06ರಲ್ಲಿ ಮಂಜೂರಾದ ನಿವೇಶನಗಳ ಹಕ್ಕುಪತ್ರ ಇನ್ನು ವಿತರಿಸಿಲ್ಲ. ಒಟ್ಟು–79 ಹಕ್ಕುಪತ್ರಗಳಲ್ಲಿ 32 ಹಕ್ಕುಪತ್ರಗಳು ಪುರಸಭೆಯಲ್ಲಿ ಸಿಕ್ಕಿವೆ. ಉಳಿದ 42 ಹಕ್ಕುಪತ್ರಗಳನ್ನು ಹುಡುಕಿಕೊಡುವುದಾಗಿ ಅಧಿಕಾರಿಗಳು ಹೇಳಿದರು. 

ಕೈಮಗ್ಗ ನೇಕಾರ ಸಂಘವು ಹಂಚಿಕೆ ಮಾಡಿರುವ ಹಕ್ಕುಪತ್ರಗಳು ಪುರಸಭೆ ಯಲ್ಲಿವೆ. ಕಟ್ಟಡಕ್ಕಾಗಿ ನೀಡಿದ ಸಾಲ ಮನ್ನಾ ಆಗಿದೆ. ಆದರೂ ಪುರಸಭೆಯವರು ಹಕ್ಕುಪತ್ರ ನೀಡುತ್ತಿಲ್ಲ ಎಂದು ಆಶ್ರಯ ಫಲಾನುಭವಿಗಳು ಆಕ್ರೋಶಗೊಂಡು ಪುರಸಭೆಯಲ್ಲಿ ಬೆಳಿಗ್ಗೆಯಿಂದ ಠಿಕಾಣಿ ಹೂಡಿದರು.

ಹಕ್ಕುಪತ್ರ ನೀಡುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಾಗ, ಪುರಸಭೆ ಅಧ್ಯಕ್ಷ ಶಿವ ಕುಮಾರ ಹಾದಿಮನಿ ಅವರು ಸ್ಥಳಕ್ಕೆ ಬಂದು ಅವರ ಸಮಸ್ಯೆ ಆಲಿಸಿ ಫಲಾನು ಭವಿಗಳ ಆಧಾರ ಕಾರ್ಡ್ ನಕಲಿ ಪ್ರತಿ ಪಡೆದು ಹಕ್ಕುಪತ್ರ ನೀಡಲು ಅಧಿಕಾರಿ ಗಳಿಗೆ ಹೇಳಿದರು.

‘10 ವರ್ಷ ಕಳೆದರೂ ನೇಕಾರ ಸಹಕಾರಿ ಸಂಘದವರು ಮುತುವರ್ಜಿ ವಹಿಸಿ ನೇಕಾರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗೋಜಿಗೆ ಹೋಗಿಲ್ಲ ಎಂದು ಅನೇಕ ನೇಕಾರರು ತಮ್ಮ ಅಳಲು ತೋಡಿಕೊಂಡರು.

ಉಳಿದ ಹಕ್ಕುಪತ್ರಗಳನ್ನು ಶೀಘ್ರದಲ್ಲಿಯೇ ನೀಡದಿದ್ದರೆ ಪುರಸಭೆ ಎದುರು ಧರಣಿ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಬಸವರಾಜ ತಾಂಡೂರ, ಅಬರಪ್ಪ ಭಜಂತ್ರಿ, ಬಸವರಾಜ ಚಾರಖಾನಿ, ಈರಣ್ಣ ಬೆಳಗಲ್ಲ, ಶಾಂತಾ ಅಬ್ಬಿಗೇರಿ, ರೇಣವ್ವ ಬೆಳಗಲ್ಲ, ಶಾಂತವ್ವ ಮುಳಗುಂದ, ವಿಜಯಲಕ್ಷ್ಮಿ ಅಲದಿ, ಸುವರ್ಣಾವ್ವ ಮದಕಟ್ಟಿ, ಶಾಂತವ್ವ ಖಂಡಿ, ಶಕುಂತಲಾ ಕುಮಚಗಿ ಎಚ್ಚರಿಸಿದರು.

ಉಳಿದ ಹಕ್ಕುಪತ್ರಗಳನ್ನು 2–3 ದಿನಗಳೊಳಗಾಗಿ ಫಲಾನುಭವಿಗಳಿಗೆ ನೀಡಲಾಗುವುದು. ನೇಕಾರರು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.