ADVERTISEMENT

ಫಿಟ್‌ನೆಸ್‌ಗಾಗಿ ಸಿಇಓ ಸೈಕಲ್ ಪ್ರೀತಿ..!

ವೆಂಕಟೇಶ ಜಿ.ಎಚ್.
Published 29 ಮೇ 2017, 11:47 IST
Last Updated 29 ಮೇ 2017, 11:47 IST

ಬಾಗಲಕೋಟೆ: ‘ಆರೋಗ್ಯಯುತ ಬದುಕಿಗೆ ಸೈಕ್ಲಿಂಗ್ ರೂಢಿಸಿಕೊಳ್ಳಿ’ ಎಂಬ ಸಂದೇಶವನ್ನು ಯುವಜನತೆಗೆ ನೀಡಲು ಮುಂದಾಗಿರುವ ಇಲ್ಲಿನ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾ­ಅಧಿಕಾರಿ ವಿಕಾಸ್ ಸುರಳಕರ್, ಅದಕ್ಕೆ ಪೂರಕವಾಗಿ ನಿತ್ಯ ಮುಂಜಾನೆ ಹಾಗೂ ಸಂಜೆ 20 ಕಿ.ಮೀ.ಗೂ ಹೆಚ್ಚು ದೂರ ಸೈಕಲ್ ಪೆಡಲ್ ತುಳಿಯುತ್ತಿದ್ದಾರೆ.

ಜಿಲ್ಲೆಗೆ ಬಂದ ಹೊಸತರಲ್ಲಿ ಮನೆ­ಯಲ್ಲಿಯೇ ಟ್ರೆಡ್‌ಮಿಲ್‌ ಮೇಲೆ ಓಡುವ ಮೂಲಕ ಬೆವರು ಹರಿಸುತ್ತಿದ್ದ ವಿಕಾಸ್‌, ಈಗ ನಿತ್ಯ ಷಟಲ್‌ ಬ್ಯಾಡ್ಮಿಂಟನ್‌ ಹಾಗೂ ಸೈಕ್ಲಿಂಗ್ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತಿದ್ದಾರೆ. ಸೈಕ್ಲಿಂಗ್‌ನ ಮಹತ್ವದ ಬಗ್ಗೆ ಯುವಜನತೆಗೆ ತಿಳಿಸಲು ಸೈಕ್ಲಿಂಗ್ ಕ್ಲಬ್ ಹುಟ್ಟು ಹಾಕಲು ನಿರ್ಧ­ರಿಸಿದ್ದಾರೆ.  ಇದಕ್ಕೆ ಜಿಲ್ಲಾ ಪಂಚಾಯ್ತಿ ಹಿರಿಯ ಅಧಿಕಾರಿಗಳು ಹಾಗೂ ಹೊರ­ಗಿನ ಕೆಲವು ಆಸಕ್ತರು ಕೈ ಜೋಡಿಸಿದ್ದಾರೆ.

ಶಾಲಾ ದಿನಗಳಿಂದಲೂ ಸೈಕಲ್ ಪ್ರೀತಿ: ಮಹಾರಾಷ್ಟ್ರದವರಾದ ವಿಕಾಸ್‌ ಸುರಳಕರ್‌, ಮೆಕ್ಯಾನಿಕಲ್‌ ಎಂಜಿನಿಯ­ರಿಂಗ್ ಪೂರ್ಣಗೊಳಿಸಿದ್ದಾರೆ. ‘ನಮ್ಮದು ಕೆಳಮಧ್ಯಮ ವರ್ಗದ ಕುಟುಂಬ. ಬೈಕ್‌ ಕೊಳ್ಳುವ ಸಾಮರ್ಥ್ಯವಿರಲಿಲ್ಲ. ಹಾಗಾಗಿ ಶಾಲೆಯ ದಿನಗಳಿಂದ ಮೊದಲು­ಗೊಂಡು ನಾಗಪುರ ಬಳಿಯ ಅಮರಾ­ ವತಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸು ವವರೆಗೂ ನನ್ನ ಓಡಾಟಕ್ಕೆ ಸೈಕಲ್ ಸಂಗಾತಿಯಾಗಿತ್ತು’ ಎಂದು ವಿಕಾಸ್ ಸ್ಮರಿಸಿಕೊಳ್ಳುತ್ತಾರೆ.

ADVERTISEMENT

‘ಐಎಎಸ್‌ ತರಬೇತಿ ವೇಳೆ ಮಸ್ಸೂರಿಯಲ್ಲಿ ಸೈಕ್ಲಿಂಗ್ ಮಾಡು­ತ್ತಿದ್ದೆನು. ಕರ್ನಾಟಕಕ್ಕೆ ಅಧಿಕಾರಿಯಾಗಿ ಬಂದ ಮೇಲೆ ಮೈಸೂರಿನಲ್ಲಿ 40 ದಿನಗಳ ಕಾಲ ನಡೆದ ತರಬೇತಿ ವೇಳೆ ಕುದುರೆ ಸವಾರಿ ಹಾಗೂ ಸೈಕ್ಲಿಂಗ್‌ಗೆ ಅವಕಾಶವಿತ್ತು. ಆಗ ಕೆಲವು ಗೆಳೆಯ­ರೊಂದಿಗೆ ಸೇರಿ ಇಡೀ ಮೈಸೂರು ನಗರವನ್ನು ಸೈಕಲ್‌ ಮೇಲೆ ಸುತ್ತಿದ್ದೆನು. ಬಾಗಲಕೋಟೆಗೆ ಬಂದ ಮೇಲೆ ಅದನ್ನು ಮುಂದುವರೆಸಿರುವೆ’ ಎಂದು ವಿಕಾಸ್ ಹೇಳುತ್ತಾರೆ.

100 ಸದಸ್ಯರ ಕ್ಲಬ್: ಸೈಕ್ಲಿಂಗ್‌ ಬಗ್ಗೆ ಯುವಜನತೆಯಲ್ಲಿ ಆಸಕ್ತಿ ಹುಟ್ಟು ಹಾಕುವ ಜೊತೆಗೆ ಕ್ಲಬ್‌ ಮೂಲಕ ಸಮಾಜಮುಖಿ ಕಾರ್ಯಗಳಿಗೂ ಕೈ ಜೋಡಿಸಲಾಗುವುದು. ಇತ್ತೀಚೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸ ಲಾಗಿದ್ದ ‘ದಿಶಾ’ ಕಾರ್ಯಕ್ರಮದಲ್ಲಿ ಶಿಕ್ಷಣ ಮುಂದುವರೆಸಲು ಹಣಕಾಸಿನ ಅಡಚಣೆ ಇರುವ ಹಲವು ಪ್ರತಿಭಾವಂತ ಮಕ್ಕಳ ಪರಿಚಯ ಆಗಿದೆ. ಕ್ಲಬ್‌ ಮೂಲಕ ಅವರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ. ಸೈಕಲ್ ಮೇಲೆ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸುತ್ತುವ ಜೊತೆಗೆ ಅದನ್ನು ಪ್ರವಾಸಿ ಸ್ನೇಹಿಯಾಗಿಸುವ ಉದ್ದೇಶ ಕ್ಲಬ್ ಹೊಂದಲಿದೆ ಎನ್ನುತ್ತಾರೆ.

ಐಐಟಿ ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್, ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಗಳು ಕೂಡ ತಮ್ಮ ಆವರಣದಲ್ಲಿ ಸೈಕಲ್‌ ಮೇಲೆ ಓಡಾಟವನ್ನು ಕಡ್ಡಾಯಗೊಳಿಸಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಆರೋಗ್ಯ ಕಾಪಾಡಿಕೊಳ್ಳಲು ನೆರವಾ ಗಿವೆ. ದೀರ್ಘ ಕಾಲ ಆರೋಗ್ಯ ರಕ್ಷಣೆಗೆ ಯುವ ಸಮೂಹ ಕನಿಷ್ಠ ಪದವಿ ಮುಗಿಸುವವರೆಗಾದರೂ ಓಡಾಟಕ್ಕೆ ಸೈಕಲ್ ಅವಲಂಬಿಸುವುದು ಸೂಕ್ತ ಎಂದು ವಿಕಾಸ್ ಅಭಿಪ್ರಾಯಪಡುತ್ತಾರೆ.

ಸಿಇಒ ಅವರ ಸೈಕ್ಲಿಂಗ್‌ ಕೈಂಕರ್ಯಕ್ಕೆ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಎನ್‌ಐಸಿ ಅಧಿಕಾರಿ ಗಿರಿಯಾಚಾರ್‌, ರಾಜು ಜವಳಿ ಕೂಡ ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.