ADVERTISEMENT

ಬರದಲ್ಲೂ ಬಂಪರ್‌ ಬೆಳೆ ತೆಗೆದ ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:31 IST
Last Updated 28 ಮೇ 2017, 10:31 IST

ಐತಿಹಾಸಿಕ ಪಟ್ಟಣ ಬಾದಾಮಿ ಪರಿಸರದಲ್ಲಿ ರೈತರು 1980ಕ್ಕಿಂತ ಮೊದಲು ನೆಲಗಡಲೆ (ಶೇಂಗಾ)ಬೆಳೆಯುತ್ತಿದ್ದರು. ಬಳ್ಳಿಯ ನೆಲಗಡಲೆ ಬೆಳೆಗೆ  ಕೀಟದ ಬಾಧೆ ಹೆಚ್ಚಾದಂತೆ ರೈತರು ಬಿತ್ತನೆ ನಿಲ್ಲಿಸಿದರು. 1985ರಲ್ಲಿ ಕೊಳವೆ ಬಾವಿ ಬಂದ ಮೇಲೆ ರೈತರು ವಿವಿಧ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದರು.

ಮಕ್ತುಂಹುಸೇನ್‌ ತಾಂಬೋಳಿ ಮತ್ತು ಸಂಗಮೇಶ ದೇಸಾಯಿ ಬಾಲ್ಯ ಸ್ನೇಹಿತರು. ಸಂಗಮೇಶ ದೇಸಾಯಿ ಬಿಇ ಸಿವಿಲ್‌ ಓದಿದ್ದಾರೆ. ಮಕ್ತುಂಹುಸೇನ್‌ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಸಂಗಮೇಶಗೆ ಹಿರಿಯರ ಆಸ್ತಿ ಇದೆ. ಆದರೆ ಮಕ್ತುಂಹುಸೇನ್‌ ಅವರಿಗೆ ಸ್ವಂತ ಒಂದು ಗುಂಟೆ ಜಮೀನು ಇಲ್ಲ. 

ಮಕ್ತುಂಹುಸೇನ್‌ ಪುರಸಭೆ ಸದಸ್ಯರಾಗಿ ರಾಜಕೀಯ ಜೀವನದಲ್ಲಿ ಸಮಾಜ ಸೇವೆ ಕೈಗೊಂಡಿದ್ದರು. ನಂತರ ನಾನೇಕೆ ರೈತನಾಗಬಾರದು ಎಂಬ ಛಲವನ್ನು ಹೊಂದಿ ಸ್ನೇಹಿತ ಸಂಗಮೇಶ ಅವರ ಸಹಕಾರದಿಂದ ಬೇರೆಯವರ ಹೊಲ ವನ್ನು ವಾರ್ಷಿಕ ಲಾವಣಿ ಪಡೆದರು. ಮೊದಲಿಗೆ ಕಬ್ಬನ್ನು ಬೆಳೆದು ಉತ್ತಮ ಇಳುವರಿ ಪಡೆದರು.

ADVERTISEMENT

88 ಎಕರೆ ಜಮೀನನ್ನು ಲಾವಣಿ ಪಡೆದು ಎಲ್ಲವನ್ನೂ ಹನಿನೀರಾವರಿ ಪದ್ಧತಿಗೆ ಅಳವಡಿಸಿದ್ದಾರೆ. ಈಗ 34 ಎಕರೆ ಹೊಲದಲ್ಲಿ ದಾಳಿಂಬೆ, 20 ಎಕರೆ ಪಪ್ಪಾಯಿ ಮತ್ತು 10 ಎಕರೆ ಟೊಮೆಟೊ ಬೆಳೆಯನ್ನು ಬೆಳೆಯುತ್ತಿದ್ದಾರೆ. ಪಪ್ಪಾಯಿ ಮತ್ತು ದಾಳಿಂಬೆ ಯಲ್ಲಿ ಅಂತರ ಬೆಳೆಯನ್ನಾಗಿ ಮಾಡಿ ಅಧಿಕ ಆದಾಯವನ್ನು ಪಡೆದಿದ್ದಾರೆ.

ಹನಿ ನೀರಾವರಿ ಮಾಡಿದರೆ ಜೀವ ಜಲವನ್ನು ಉಳಿಸಿದಂತಾಗುತ್ತದೆ ಮತ್ತು ವಿದ್ಯುತ್‌ ಕೂಡ ಉಳಿತಾಯ ಆಗುತ್ತದೆ. ಅಧಿಕಶ್ರಮ ಮತ್ತು ಕೂಲಿಕಾರ ಸಂಖ್ಯೆ ಯನ್ನು ಉಳಿತಾಯ ಮಾಡಬಹುದು ಎನ್ನುತ್ತಾರೆ ಮಕ್ತುಂಹುಸೇನ್‌.

‘ಹನಿ ನೀರಾವರಿಯಿಂದ ಮೂರು ಗಂಟೆಯಲ್ಲಿ 4 ಎಕರೆ  ಬೆಳೆಗೆ ನೀರನ್ನು ತೋಯಿಸಬಹುದು. ಆದರೆ  ಅದೇ ನೀರನ್ನು ಒಂದು ಎಕರೆ ಬೆಳೆಗೆ ಹಾಯಿಸಲು ಮೂರು ದಿನ ಬೇಕು. ವಾಣಿಜ್ಯ ಬೆಳೆಗೆ ಹನಿ ನೀರಾವರಿ ಮಾಡಿದರೆ ನೀರು, ವಿದ್ಯುತ್‌  ಮತ್ತು ಶ್ರಮವನ್ನು  ಉಳಿಸಬಹುದು’ ಎಂದು ಹೇಳಿದರು.

ಹನಿ ನೀರಾವರಿಯಲ್ಲಿ ಅಂತರ ಬೆಳೆಯನ್ನು ಬೆಳೆಯಬಹುದು. ದಾಳಿಂಬೆ ಮತ್ತು ಪಪ್ಪಾಯಿ ಬೆಳೆಯ ಮಧ್ಯದಲ್ಲಿ ಇವರು ಮೆಣಸಿನಕಾಯಿ ಮತ್ತು ಟೊಮೆಟೊ ಬೆಳೆ ಬೆಳೆದು ಆದಾಯ ಪಡೆದಿದ್ದಾರೆ. ಟೊಮೆಟೊ 1 ಎಕರೆಗೆ  ಎಲ್ಲ ಖರ್ಚು ತೆಗೆದು ₹ 3 ಲಕ್ಷ, ಮೆಣಸಿನಕಾಯಿ ಬೆಳೆಯಲ್ಲಿ ₹ 1 ಲಕ್ಷ ಆದಾಯ ಬಂದಿದೆ.  ದಾಳಿಂಬೆ ಬೆಳೆಯಲ್ಲಿ ಎಕರೆಗೆ ಅಂದಾಜು ₹ 1.50 ಲಕ್ಷ  ಆದಾಯ ಬರುತ್ತದೆ ಎಂದರು.

ನನ್ನ ಆತ್ಮೀಯ ಸ್ನೇಹಿತ ಸಂಗಮೇಶ ಮತ್ತು ನಾನು ಸೇರಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲವನ್ನು ಹೊಂದಿದ್ದೇವೆ. ಆಧುನಿಕ ತಂತ್ರಜ್ಞಾನವನ್ನು ಪಡೆದು ಯಾವ ಬೆಳೆಯನ್ನು ಹೇಗೆ ಬೆಳೆಯಬೇಕು ಎಂದು ಆಲೋಚಿಸುತ್ತೇವೆ.  ನಿಜವಾಗಿ ದುಡಿಯುವ ರೈತನಿಗೆ ಆತ್ಮಹತ್ಯೆ  ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಮತ್ತೊಬ್ಬರಿಗೆ ಕೈ ಚಾಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಕ್ತುಂಹುಸೇನ್‌ ದಿಟ್ಟತನ ದಿಂದ  ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.