ADVERTISEMENT

ಮಣ್ಣು ಪಾಲಾಗುತ್ತಿರುವ ಗೋವಿನ ಜೋಳ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 8:59 IST
Last Updated 15 ಸೆಪ್ಟೆಂಬರ್ 2014, 8:59 IST

ಬಾಗಲಕೋಟೆ: ನಗರದ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ಗಾಡಿಗಳ ಮೂಲಕ ಗೋವಿನ ಜೋಳವನ್ನು ರಫ್ತು ಮಾಡುವ ಸಂದರ್ಭದಲ್ಲಿ  ಸಾಕಷ್ಟು ಪ್ರಮಾಣದಲ್ಲಿ ಗೋವಿನ ಜೋಳ ಮಣ್ಣುಪಾಲು ಹಾಗೂ ಹಂದಿಗಳಿಗೆ ಆಹಾರವಾಗುತ್ತಿದೆ.

ಜಿಲ್ಲೆಯ ಹಾಗೂ ವಿವಿಧ ಭಾಗದಿಂದ ಬಾಗಲಕೋಟೆಯ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ಗಾಡಿಗಳ ಮೂಲಕ ಬೇರೆ ಊರುಗಳಿಗೆ ಗೋವಿನ ಜೋಳವನ್ನು ಸಾಗಿಸುವಾಗ ಒಮ್ಮೊಮ್ಮೆ ಕ್ವಿಂಟಲ್‌ಗಳಷ್ಟು ಗೋವಿನ ಜೋಳ ಮಣ್ಣಿನಲ್ಲಿ ಸೇರಿಕೊಂಡು ಹೋಗುವುದು ಹಾಗೂ ಹಂದಿಗಳ ಪಾಲಾಗುತ್ತಿರುವುದು ಸಾಮಾನ್ಯವಾಗಿದೆ.

ಲಾರಿಗಳಿಂದ ಗೂಡ್ಸ್‌ ಗಾಡಿಗಳಲ್ಲಿ ಹಾಕುವಾಗ ಹಮಾಲರು ಕೆಳಗಡೆ ಸರಿಯಾಗಿ ಸ್ವಚ್ಛ ಮಾಡದೇ ಹಾಗೂ ತಾಡಪತ್ರಿ ಹಾಕದೇ ಇರುವುದರಿಂದ ಪ್ರತಿದಿನ ಸಾಕಷ್ಟು ಗೋವಿನ ಜೋಳ ಮಣ್ಣು ಸೇರುತ್ತಿದೆ. ಒಮ್ಮೊಮ್ಮೆ ತುಂಬಿದ ಚೀಲಗಳು ಹರಿದು ಚೆಲ್ಲಾಪಿಲ್ಲಿಯಾಗಿದ್ದ ಉದಾಹರಣೆಗಳು ಇವೆ. ಅಷ್ಟೇ ಅಲ್ಲದೇ ಹಮಾಲರು ಹರಿದಿರುವ ಚೀಲಗಳನ್ನು ಗಮನಿಸದಂತಹ ಸ್ಥಿತಿಯಲ್ಲಿರುತ್ತಾರೆ.

ಇನ್ನೂ ಗೂಡ್ಸ್‌ ಗಾಡಿಗಳ ಮೂಲಕ ಬರುವ ಗೋವಿನ ಜೋಳ ಹಾಗೂ ಆಹಾರ ಧಾನ್ಯಗಳನ್ನು ಜಿಲ್ಲೆಯ ವಿವಿಧ ಎಪಿಎಂಸಿಗೆ ಮತ್ತಿತರ ಕಡೆ ಸಾಗಣೆ ಸಂದರ್ಭದಲ್ಲಿ ತುಂಬಿರುವ ಚೀಲಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತದೆ. ಲಾರಿಯಲ್ಲಿ ತುಂಬುವಾಗ ಕೆಲವೊಂದು ಚೀಲಗಳು ಹರಿದಿದ್ದರೂ ಲಾರಿಯಲ್ಲಿ ಹಾಗೆ ತುಂಬುತ್ತಾರೆ, ಲಾರಿ  ರಸ್ತೆಗುಂಟಾ ಹೋಗುವಾಗ ನಿಗದಿತ ಸ್ಥಳ ತಲುಪುವುದರೊಳಗೆ ಒಂದೊಂದು ಚೀಲ ಖಾಲಿಯಾಗಿವೆ. ಎಪಿಎಂಸಿಯಿಂದ ಬೇರೆ ಕಡೆ ತೆಗೆದುಕೊಂಡು ಹೋಗುವಾಗ ಧಾನ್ಯಗಳ ಚೀಲಗಳು ಗಟ್ಟಿಯಾಗಿವೆ ಎಂಬುದನ್ನು ಸಹ ಪರೀಕ್ಷೆ ಮಾಡಬೇಕಾದ ಅಗತ್ಯವಿದೆ.

ರೈಲ್ವೆ ನಿಲ್ದಾಣದಲ್ಲಿ ಮಳೆಯಾದರಂತೂ ಚೀಲ ಹರಿದು ಆಹಾರ ಧಾನ್ಯಗಳು ಬಿದ್ದರೆ ಒಂದು ಕಾಳನ್ನೂ ಸ್ವಚ್ಛ ಮಾಡಿಕೊಂಡು ತೆಗೆದುಕೊಳ್ಳದಂತಹ ಸ್ಥಿತಿ ಇದೆ. ಎಲ್ಲ ಲಾರಿಗಳನ್ನು ಖಾಲಿ ಮಾಡಿದ ನಂತರ ಕೆಳಗಡೆ ಬಿದ್ದ ಗೋವಿನ ಜೋಳವನ್ನು ಕೆಲವೊಂದು ಹಮಾಲರು ತುಂಬಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೇ ಸೀಜನ್ ಸಮಯದಲ್ಲಿ ಸಕ್ಕರೆಯನ್ನು ಸಹ ಗೂಡ್ಸ್ ಗಾಡಿಗಳ ಮೂಲಕ ರಫ್ತು ಮಾಡಲಾಗುತ್ತದೆ ಆಗ ಅದು ಸಹ ಕೆಳಗಡೆ ಸಾಕಷ್ಟು ಬಿದ್ದ ಉದಾಹರಣೆ ಇದೆ.

ಗಾಡಿಗಳನ್ನು ಖಾಲಿ ಮಾಡುವುದು ಹಾಗೂ ತುಂಬುವುದರ ಗದ್ದಲದಲ್ಲಿರುತ್ತೇವೆ. ಎಷ್ಟು ಗಾಡಿಗಳನ್ನು ಖಾಲಿ ಮಾಡುತ್ತೇವೆ ಅಷ್ಟು ಪಗಾರ ಚೆನ್ನಾಗಿ ಕೈಗೆ ಬರುತ್ತದೆ. ಒಮ್ಮೊಮ್ಮೆ ಜಾಸ್ತಿ ಕಾಳುಗಳು ಚೆಲ್ಲತಾವ್ ಏನ್ ಮಾಡಾಕ ಆಗುದಿಲ್ರೀ, ಎಲ್ಲ ಗಾಡಿಗಳ ಬುಡಕ ತಾಡಪತ್ರಿ ಹಾಕಬೇಕು ಅಂದರ  ನಮ್ಮ ಕೈಯಿಂದ ಆಗುವುದಿಲ್ಲ,  ಚೆಲ್ಲಿದ್ದನ್ನು ಆಮೇಲೆ ಕಸ ಗೂಡಿಸುತ್ತೇವೆ. ಅಲ್ಲಲ್ಲಿ ಬಿದ್ದದ್ದನ್ನು ಬಿಟ್ಟು ಹೋಗುತ್ತವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಮಾಲರೊಬ್ಬರು.

ಪ್ರತಿದಿನ ಬೇರೆ ಬೇರೆ ಆಹಾರ ಧಾನ್ಯವಾಗಲಿ ಅಥವಾ ಸಕ್ಕರೆ  ತುಂಬಿದ ಚೀಲಗಳನ್ನು ಲಾರಿಯಿಂದ ಗೂಡ್ಸ್ ಗಾಡಿಗೆ ಹಾಗೂ ಗೂಡ್ಸ್ ಗಾಡಿಯಿಂದ ಲಾರಿಗೆ ಸಾಗಿಸುವಾಗ ಹಮಾಲರು ಎಚ್ಚರಿಕೆಯಿಂದ ಕೆಲಸ ಮಾಡಿದರೆ ಮಣ್ಣಲ್ಲಿ ಪೋಲಾಗುವ ಧಾನ್ಯಗಳನ್ನು ರಕ್ಷಿಸಲು ಸಾಧ್ಯವಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.