ADVERTISEMENT

ಮಾದಕ ವಸ್ತು: ದೂರವಿರಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:15 IST
Last Updated 21 ಜನವರಿ 2017, 8:15 IST
ಮಾದಕ ವಸ್ತು: ದೂರವಿರಲು ಸಲಹೆ
ಮಾದಕ ವಸ್ತು: ದೂರವಿರಲು ಸಲಹೆ   

ಜಮಖಂಡಿ: ತಂಬಾಕು ಉತ್ಪನ್ನ ಸೇರಿ­ದಂತೆ ಯಾವುದೇ ಮಾದಕ ವಸ್ತುಗಳನ್ನು ಶಾಲಾ–ಕಾಲೇಜುಗಳ 100 ಮೀ ವ್ಯಾಪ್ತಿ ಪ್ರದೇಶದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಜಿ.ಎಂ. ಶೀನಪ್ಪ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್‌ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾದಕ ವಸ್ತುಗಳ ನಿಷೇಧ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಜಿತೇಂದ್ರನಾಥ ಸಿ.ಎಸ್‌. ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಾಢ್ಯ ರಾಷ್ಟ್ರಗಳು ತಮ್ಮ ವೈರಿ ದೇಶಗಳಿಗೆ ಮಾದಕ ವಸ್ತುಗಳನ್ನು ಕಳ್ಳತನದಿಂದ ಪೂರೈಸಲು ಬಡರಾಷ್ಟ್ರಗಳನ್ನು ಬಳಸಿಕೊಳ್ಳುತ್ತವೆ. ಆ ಮೂಲಕ ತಮ್ಮ ವೈರಿ ದೇಶಗಳನ್ನು ಹಾಳು ಮಾಡುತ್ತವೆ ಎಂದರು.

ಆದ್ದರಿಂದ ಒಂದು ಸದೃಢ ಸಮಾಜ ಮತ್ತು ಸದೃಢ ದೇಶವನ್ನು ಕಟ್ಟಲು ದೇಶವಾಸಿಗಳು ಮಾದಕ ವಸ್ತುಗಳಿಂದ ದೂರ ಉಳಿಯಬೇಕು ಎಂದರು.
ಹೃದಯರೋಗ ತಜ್ಞ ಡಾ.ಎಚ್‌.ಜಿ. ದಡ್ಡಿ ಮಾತನಾಡಿ, ದುಃಖ, ನೋವು ನಿವಾರಣೆಗಾಗಿ ಮಾದಕ ವಸ್ತುಗಳನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ. ಆದರೆ, ಮಾದಕ ವಸ್ತುಗಳ ಬಳಕೆ ಮಿತಿ ಮೀರಿದರೆ ಹೃದಯ, ಕಿಡ್ನಿ, ಯಕೃತ್ತು, ಶ್ವಾಸಕೋಶಗಳ ಮೇಲೆ ದುಷ್ಪರಿಣಾಮ ಉಂಟಾಗಿ ಇಡೀ ನರಮಂಡಲ ವ್ಯವಸ್ಥೆ ಕ್ಷೀಣಿಸುವಂತೆ ಮಾಡುತ್ತದೆ ಎಂದರು.

ವಕೀಲ ಎಸ್‌.ಕೆ. ಹಾಲಳ್ಳಿ ಮಾತನಾಡಿ, ಭಾರತ ದೇಶದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು 1985ರಲ್ಲಿ ಜಾರಿಗೊಳಿಸಲಾದ ಕಾನೂನು ಮೂಲಕ ನಿಷೇಧಿಸಲಾಗಿದೆ. ಮಾದಕ ವಸ್ತು ಮಾರಾಟ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ಹಾಗೂ ₹10 ರಿಂದ ₹ 20 ಲಕ್ಷ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಮೊಹ್ಮದ ಅನ್ವರ್‌ ಹುಸೇನ್‌ ಮೊಗ­ಲಾನಿ, ಪ್ರಾಚಾರ್ಯ ಡಾ.ಎಸ್‌.ಸಿ.­ಹಿರೇಮಠ ಮಾತನಾ­ಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ. ಪಾಟೀಲ, ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ, ಎಪಿಪಿ ಎಚ್‌.ಜಿ. ಮುಲ್ಲಾ, ವಕೀಲ ಎಂ.ಎಸ್‌. ರಾವಳೋಜಿ ಇದ್ದರು. ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಎ.ಸಿ. ವಾರದ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.