ADVERTISEMENT

ಸಸಾಲಟ್ಟಿ ಯೋಜನೆ ಜಾರಿಗೆ ಆಗ್ರಹ

ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 21ರಂದು ಬೃಹತ್‌ ಪ್ರತಿಭಟನೆ: ಶಾಸಕ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:06 IST
Last Updated 18 ಫೆಬ್ರುವರಿ 2017, 11:06 IST
ಮುಧೋಳ: ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮುಧೋಳದಲ್ಲಿ ಫೆ. 21ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷಾತೀತ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.
 
ಗುರುವಾರ ಸಂಜೆ ಗೃಹ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸತತ ಬರಗಾಲ ಅನುಭವಿಸುತ್ತಿದ್ದೇವೆ. ಘಟಪ್ರಭಾ ಜಲಾಶಯ ತುಂಬುತ್ತಿಲ್ಲ. ಇದರಿಂದ ರೈತರಿಗೆ ಬೆಳೆ ಬೆಳೆಯಲು ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆಗೆ 3 ವರ್ಷಗಳಿಂದ 8 ತಿಂಗಳ ಕಾಲ ಬಿಡುತ್ತಿದ್ದ ನೀರನ್ನು ನೀಡುತ್ತಿಲ್ಲ. ಒಂದಡೆ ಬರ, ಇನ್ನೊಂದಡೆ ಕಾಲುವೆಗೂ ನೀರಿಲ್ಲದೆ ಕಂಗಾಲಾಗಿದ್ದಾರೆ.
 
ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದರೆ ಮುಧೋಳ, ಜಮಖಂಡಿ, ಬೀಳಗಿ ತಾಲ್ಲೂಕಿನ 36 ಸಾವಿರ ಹೇಕ್ಟರ್ ಪ್ರದೇಶಕ್ಕೆ ನೀರು ಸಿಗುತ್ತದೆ. ಈ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಚ್ಚಿ ಇಟ್ಟು ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರೂ, ಸರ್ಕಾರದಿಂದ ಸಮರ್ಪಕ ಹಾಗೂ ಖಚಿತ ಭರವಸೆ ಬರದ ಹಿನ್ನಲೆಯಲ್ಲಿ ಪಕ್ಷಾತೀತವಾದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
 
2012ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಅಂದಾಜು ಪತ್ರಿಕೆ, ತಾಂತ್ರಿಕ ವರದಿಗಳನ್ನು ಸಿದ್ಧಪಡಿಸಿಕೊಳ್ಳಲಾಯಿತು. ₹ 250 ಕೋಟಿ ಯೋಜನೆ ಸಿದ್ಧವಾಗಿತ್ತು. ಆದರೆ, ಆಗ ಕೃಷ್ಣಾ ನದಿ ನ್ಯಾಯಾಧೀಕರಣದಿಂದ ನೀರು ಹಂಚಿಕೆಯಾಗಿರಲಿಲ್ಲ. ಈಗ ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ ನೀರು ಹಂಚಿಕೆ ಮಾಡಿದ್ದಾರೆ. ಹಂಚಿಕೆಯ ನೀರಿನಲ್ಲಿ ಕೇವಲ 8.47 ಟಿಎಂಸಿ ನೀರು ನೀಡಿ ಈ ಯೋಜನೆ ಅನುಷ್ಠಾನಗೊಳಿಸಿದರೆ 3 ತಾಲ್ಲೂಕು ಜನರ ನೀರಿನ ಬವಣೆ ನೀಗುತ್ತದೆ. ಜೂನ್, ಜುಲೈ ತಿಂಗಳಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತದೆ.
 
ಆ ನೀರು ಉಪಯೋಗಿಸದೆ ಸಮುದ್ರದ ಪಾಲಗುತ್ತದೆ. ಆ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಹರಿಸಿದರೆ, ಕಾಲುವೆಯ 62+40 ಕಿ.ಮೀ.ನಿಂದ ಅಚ್ಚುಕಟ್ಟು ಪ್ರದೇಶದ ಮೂರು ತಾಲ್ಲೂಕಿನ 36 ಸಾವಿರ ಹೇಕ್ಟರ್ ಪ್ರದೇಶ ನೀರಿನ ಬವಣೆಯಿಂದ ಹೊರಬರುತ್ತದೆ ಎಂದು ಕಾರಜೋಳ ವಿವರಿಸಿದರು.
ಈ ಯೋಜನೆಗೆ ಆಗ್ರಹಿಸಿ ಮಹಾಲಿಂಗಾಪುರದಲ್ಲಿ ಒಂದು ತಿಂಗಳಿಂದ ಧರಣಿ ನಡೆಸಲಾಗುತ್ತಿದೆ. ನಾನು ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್.ಪಂಚಗಾಂವಿ ಮುಂತಾದವರು ಧರಣಿ ಸ್ಥಳಕ್ಕೆ ಹೋಗಿ  ಬೆಂಬಲ ಸೂಚಿಸಿದ್ದೇವೆ ಎಂದರು. 
 
ಹೋರಾಟಕ್ಕೆ ಹೆಚ್ಚಿನ ಬಲ ತುಂಬಲು ಫೆ. 21ರಂದು ಬೆಳಿಗ್ಗೆ 10 ಗಂಟೆಗೆ ನಗರದ  ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ವಿಶಾಲವಾದ ಬಯಲು ಪ್ರದೇಶದಲ್ಲಿ ಈ ಹೋರಾಟ ನಡೆಯಲಿದೆ. ಹೋರಾಟದಲ್ಲಿ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ,  ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಚ್.ಆರ್.ನಿರಾಣಿ, ಅರುಣ ಶಾಹಾಪೂರ, ಜಿಲ್ಲೆ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಈ ಯೋಜನೆ ಅನುಷ್ಠಾನಗೊಳ್ಳಬೇಕಿದೆ. ಇದಕ್ಕಾಗಿ ಪಕ್ಷಾತೀತವಾಗಿ ರೂಪಗೊಂಡ ಹೋರಾಟದಲ್ಲಿ ಮೂರು ತಾಲ್ಲೂಕಿನ ರೈತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಲು ಕಾರಜೋಳ ವಿನಂತಿಸಿದರು. 
 
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಎಚ್.ಪಂಚಗಾಂವಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಉಪಾಧ್ಯಕ್ಷ ಪುಂಡಲೀಕ ಬೂಯಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಚಿತ್ತರಗಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.