ADVERTISEMENT

ಆಸ್ಪತ್ರೆ ಶೌಚಾಲಯ ದುರಸ್ತಿಗೆ ಸಿಂಗಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 6:34 IST
Last Updated 15 ಜನವರಿ 2018, 6:34 IST
ಬಾದಾಮಿ ಸರ್ಕಾರಿ ಆಸ್ಪತ್ರೆಗೆ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾರಿ ಭೇಟಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಂತ ದೇಸಾಯಿ, ಆಸ್ಪತ್ರೆಯ ವೈದ್ಯ ಡಾ. ರೇವಣಸಿದ್ದಪ್ಪ ಇದ್ದರು.
ಬಾದಾಮಿ ಸರ್ಕಾರಿ ಆಸ್ಪತ್ರೆಗೆ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾರಿ ಭೇಟಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಂತ ದೇಸಾಯಿ, ಆಸ್ಪತ್ರೆಯ ವೈದ್ಯ ಡಾ. ರೇವಣಸಿದ್ದಪ್ಪ ಇದ್ದರು.   

ಬಾದಾಮಿ: ಸರ್ಕಾರಿ ಆಸ್ಪತ್ರೆಗೆ ಬರುವವರು ಬಡರೋಗಿಗಳು. ಅವರಿಗೆ ಸೂಕ್ತ ಚಿಕಿತ್ಸೆ, ಸೌಲಭ್ಯ ಸಿಗಬೇಕು. 15 ದಿನದ ಒಳಗೆ ಆಸ್ಪತ್ರೆ ಎಲ್ಲ ಮೂತ್ರಾಲಯ ಮತ್ತು ಶೌಚಾಲಯ ದುರಸ್ತಿ ಮಾಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾರಿ ಆಸ್ಪತ್ರೆ ಮುಖ್ಯ ವೈದ್ಯರಿಗೆ ಸೂಚನೆ ನೀಡಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಹಲಕುರ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಆಸ್ಪತ್ರೆ ಸಿಬ್ಬಂದಿ ಹಾಜರಾತಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಕರ್ಯ ಮತ್ತು ಸ್ವಚ್ಛತೆ ಕುರಿತು ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆ ಎಲ್ಲ ವಾರ್ಡ್‌ಗಳಿಗೆ ತೆರಳಿ ವೈದ್ಯರ ಚಿಕಿತ್ಸೆ ಮತ್ತು ರೋಗಿ ಆರೋಗ್ಯ ಕುರಿತು ವಿಚಾರಿಸಿದರು.  ಆಸ್ಪತ್ರೆಯ ಎಲ್ಲ ಶೌಚಾಲಯಗಳನ್ನು ಶೀಘ್ರದಲ್ಲಿ ದುರಸ್ತಿಗೊಳಿಸಿ ಎಂದು ತಾಕೀತು ಮಾಡಿದರು.

ADVERTISEMENT

2010ರಿಂದ 2018 ರವರೆಗೆ ಸರ್ಕಾರದಿಂದ ಯಾವ ಅನುದಾನ ಬಂದಿದೆ. ಸಿವಿಲ್‌ ಕಾಮಗಾರಿ ಏನು ನಡೆದಿವೆ. ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆಗೆ ಏನೇನು ಬೇಕು ಎಂಬುದನ್ನು ಜ.16 ಒಳಗೆ ಜಿಲ್ಲಾ ಆರೋಗ್ಯ ಸ್ಥಾಯಿ ಸಮಿತಿಗೆ ಮಾಹಿತಿ ಕಳಿಸಿ ಎಂದು ಸಮಿತಿ ಅಧ್ಯಕ್ಷೆ ಮುಖ್ಯ ವೈದ್ಯರಿಗೆ ಹೇಳಿದರು.

ಆಸ್ಪತ್ರೆಯ ಮುಖ್ಯ ವೈದ್ಯ ಡಾ. ರೇವಣಸಿದ್ದಪ್ಪ, ‘ನೂತನವಾಗಿ ಪ್ರತ್ಯೇಕ ಐಸಿಯು ಕೊಠಡಿ, ಡಯಾಲಿಸಿಸ್‌ ಆರಂಭವಾಗಿದೆ. ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕ್ಯಾಂಟೀನ್‌ ಆರಂಭಿಸಲಾಗುವುದು. ಆಸ್ಪತ್ರೆಯಲ್ಲಿ ಯಾವುದೇ ಮಾತ್ರೆಯ ಕೊರತೆ ಇಲ್ಲ’ ಎಂದರು.

ತಾಲ್ಲೂಕಿನ ಹಲಕುರ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಯಾವುದೇ ಸಿಬ್ಬಂದಿ ಇರಲಿಲ್ಲ. ಹಾಗಾಗಿ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಒಂದು ದಿನದ ಸಂಬಳ ಕಡಿತ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಂತ ದೇಸಾಯಿ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.