ADVERTISEMENT

ವಿಧಾನಸೌಧದ ಗೇಟಿನೊಳಗೆ ಬಿಟ್ಟಿರಲಿಲ್ಲ

ವೆಂಕಟೇಶ್ ಜಿ.ಎಚ್
Published 20 ಫೆಬ್ರುವರಿ 2018, 8:42 IST
Last Updated 20 ಫೆಬ್ರುವರಿ 2018, 8:42 IST
ಅರಣ್ಯ ಸಚಿವರಾಗಿ ಎಚ್.ವೈ.ಮೇಟಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ. ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ಖುರ್ಷಿದ್ ಆಲಂಖಾನ್ ಚಿತ್ರದಲ್ಲಿದ್ದಾರೆ
ಅರಣ್ಯ ಸಚಿವರಾಗಿ ಎಚ್.ವೈ.ಮೇಟಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ. ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ಖುರ್ಷಿದ್ ಆಲಂಖಾನ್ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: ‘ಅದು 80ರ ದಶಕದ ಮಧ್ಯ ಭಾಗ. ನನ್ನ ರಾಜಕೀಯ ಗುರು ಜಿ.ವಿ.ಮಂಟೂರ ಶಾಸಕರಾಗಿದ್ದರು. ನಾನೂ ಆಗಾಗ ಅವರೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದೆ. ಅಲ್ಲಿ ಮೋತಿಮಹಲ್ ಇಲ್ಲವೇ ಶಾಸಕರ ಭವನದ ಮಂಟೂರರ ಕೊಠಡಿ ಸಂಖ್ಯೆ 11ರಲ್ಲಿ ಉಳಿಯುತ್ತಿದ್ದೆ. ದಿನವಿಡೀ ಮಂಟೂರರ ಜತೆ ಇರುತ್ತಿದ್ದೆ. ಆದರೆ ಅವರು ವಿಧಾನಸೌಧದೊಳಗೆ ಹೋದಾಗ ಮಾತ್ರ ಒಬ್ಬಂಟಿ. ನಮ್ಮನ್ನು ಶಕ್ತಿಸೌಧದ ಗೇಟಿನೊಳಗೆ ಬಿಡುತ್ತಿರಲಿಲ್ಲ. ಆಗೆಲ್ಲಾ ಬೇಸರಗೊಂಡು ಬಂದರೆ ಇಲ್ಲಿಗೆ ಎಂಎಲ್‌ಎ ಆಗಿಯೇ ಬರಬೇಕು ಅಂದುಕೊಳ್ಳುತ್ತಿದ್ದೆ. ಅದೊಮ್ಮೆ ಸಂಕಲ್ಪ ಮಾಡಿಯೇ ಊರಿಗೆ ಮರಳಿದೆ. ಅದೇ 1989ರ ಚುನಾವಣೆಯಲ್ಲಿ ಗುಳೇದಗುಡ್ಡದಿಂದ ನಿಂತು ಗೆಲ್ಲಲು ಪ್ರೇರಣೆಯಾಯಿತು’ ಎಂದು ಶಾಸಕ ಎಚ್.ವೈ. ಮೇಟಿ ಸ್ಮರಿಸಿದರು.

ಬಿಲ್‌ಕೆರೂರು ಗ್ರೂಪ್‌ ಪಂಚಾಯ್ತಿ ಸದಸ್ಯರಾಗಿ ಜನರ ಮಧ್ಯದಿಂದ ನಡೆದು ಬಂದ ತಿಮ್ಮಾಪುರದ ಯಮನಪ್ಪ–ಹೊಳೆಯವ್ವ ದಂಪತಿ ಪುತ್ರ ಹುಲ್ಲಪ್ಪ ಮೇಟಿ, ಆರಂಭದಲ್ಲಿ ಗುಳೇದಗುಡ್ಡವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡವರು. ಕ್ಷೇತ್ರ ಪುನರ್ವಿಂಗಡಣೆಯ ನಂತರ ಬಾಗಲಕೋಟೆಯತ್ತ ಮುಖ ಮಾಡಿ ಕಹಿ, ಸಿಹಿ ಎರಡೂ ಉಂಡವರು. ಸಂಸದ, ಸಚಿವರಾಗಿ ಕೆಲಸ ಮಾಡಿ ಹಾಲಿ ಶಾಸಕರಾಗಿ ತಮ್ಮ ರಾಜಕೀಯ ನಡೆ ಅಬಾಧಿತವಾಗಿ ಮುಂದುವರೆಸಿದ್ದಾರೆ.

ಆಗೊಮ್ಮೆ ಮಾದರಿ ರೈತ: ಐವರು ಅಕ್ಕಂದಿರ ನಂತರ ಹುಟ್ಟಿದ ಅಪ್ಪ–ಅವ್ವನ ಮುದ್ದಿನ ಕೂಸು ಹುಲ್ಲಪ್ಪ. ‘ಓದುವುದರಲ್ಲಿ ಅಷ್ಟೊಂದು ಜಾಣನಿರಲಿಲ್ಲ. ಹಾಗೆಂದು ದಡ್ಡನೂ ಅಲ್ಲ. ಆಗ ಮುಲ್ಕಿ ಪರೀಕ್ಷೆಯಲ್ಲಿ ಶೇ 52 ಅಂಕ ಪಡೆದಿದ್ದೆ. ಎಂಟನೇ ತರಗತಿಗೆ ಆಲಮಟ್ಟಿಗೆ ಕಳುಹಿಸಿದರು. ಅಲ್ಲಿ ಊಟಕ್ಕೆ ತೊಂದರೆ. ಕೈಗೆ ಹಾವು ಕಚ್ಚಿ ಬೆರಳು ಬಾಧೆಗೊಳಗಾಗಿ ಬರೆಯಲು ಕಷ್ಟವಾಗುತ್ತಿತ್ತು. ನನ್ನ ತಾಪತ್ರಯ ಕಂಡು ಕರಗಿದ ನನ್ನವ್ವ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ಸಾಲಿ ಬಿಡಿಸಿ ಮನೆಗೆ ಕರೆತಂದಳು’ ಎಂದು ಮೇಟಿ ಬಾಲ್ಯದ ದಿನಗಳ ನೆನಪಿಗೆ ಜಾರುತ್ತಾರೆ.

ADVERTISEMENT

‘ಊರಿಗೆ ಬಂದು ಒಕ್ಕಲುತನ ಶುರು ಮಾಡಿದೆ. ಮುಂಗಾರಿ ಜೋಳ, ಹತ್ತಿ, ಸೂರ್ಯಪಾನ ಬೆಳೆಯುತ್ತಿದ್ದೆ. ಬಿತ್ತನೆ, ಸ್ಪರ್ಧೆಗೆ ಬಿದ್ದು ಜೋಳ ಕೊಯ್ದು, ಗೂಡು ಹಾಕಿ ಬಣವೆ ಹೊಟ್ಟುತ್ತಿದ್ದೆ. ಅದೊಮ್ಮೆ ಹತ್ತಿ ಬಂಪರ್ ಬೆಳೆ ಬಂದಿತ್ತು. ನೋಡಲು ಬಂದಿದ್ದ ಸ್ನೇಹಿತ ನೀಲಪ್ಪಣ್ಣ ಕಳ್ಳಿಗುಡ್ಡ ನೀನು ನಮ್ಮೂರು ಗುಳೇದಗುಡ್ಡಕ್ಕೆ ಬರುತ್ತೀಯ ಎಂದು ಭವಿಷ್ಯ ನುಡಿದಿದ್ದ’ ಎಂದು ಹುಲ್ಲಪ್ಪ ಹೇಳುತ್ತಾರೆ.

ಷರತ್ತು ಹಾಕಿದ್ದರು: ‘ಸಿದ್ದರಾಮಯ್ಯ ನನಗೆ ರಾಜಕೀಯ ಗಾಡ್‌ಫಾದರ್‌. ರಾಮಕೃಷ್ಣ ಹೆಗಡೆ ನನ್ನ ಬಗ್ಗೆ ವಿಶೇಷ ಅಕ್ಕರೆ ಇಟ್ಟುಕೊಂಡಿದ್ದರು. ಹುಲ್ಲಪ್ಪ ಪಾರ್ಲಿಮೆಂಟಿಗೆ ನಾನೇ ಹೋಗಲಿಲ್ಲ. ಜನರ ನಾಯಕ ನೀನು ಹೋಗಿಬಿಟ್ಟೆ ಎಂದು ಹೆಗಡೆ ತಮಾಷೆ ಮಾಡುತ್ತಿದ್ದರು. ಅವರಿಬ್ಬರ ಒತ್ತಾಸೆಯಿಂದ ನನಗೆ ಗುಳೇದಗುಡ್ಡಕ್ಕೆ ಜನತಾಪಕ್ಷದ ಟಿಕೆಟ್ ಸಿಕ್ಕಿತು. ಹೊರಗಿನವನು ಎಂಬ ಕಾರಣಕ್ಕೆ ಆರಂಭದಲ್ಲಿ ಮುಖಂಡರು ವಿರೋಧ ಮಾಡಿದ್ದರು. ಆಗ ಕವಡೆ ಅಜ್ಜನವರು ಮಧ್ಯಸ್ಥಿಕೆ ವಹಿಸಿದ್ದರು. ಅಲ್ಲಿಯೇ ವಾಸ ಇರಬೇಕು ಎಂಬ ಷರತ್ತಿನೊಂದಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು’ ಎಂದು ಸ್ಮರಿಸುತ್ತಾರೆ.

ಜಾವಾ ಬೈಕ್‌ನಲ್ಲಿ ಸುತ್ತಿದ್ದೆ: ‘ನನ್ನ ಬಳಿ ಕಾರ್ ಇರಲಿಲ್ಲ. ಮೊದಲ ಚುನಾವಣೆಯಲ್ಲಿ ಜಾವಾ ಬೈಕ್‌ನಲ್ಲಿಯೇ ಕ್ಷೇತ್ರ ಸುತ್ತಿದೆ. ಜನ ಕೈ ಹಿಡಿದರು. ಶಾಸಕನಾಗಿ ಮೊದಲು ನಾಲ್ಕು ವರ್ಷ ಬೈಕ್‌ನಲ್ಲೇ ಸುತ್ತಾಡಿದೆ. ಮೊದಲ ಬಾರಿ ಕಾರು ಕೊಂಡಾಗ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಡೌನ್‌ಪೇಮೆಂಟ್‌ ಕಟ್ಟಲು ₹10 ಸಾವಿರ ಸಾಲ ಕೊಟ್ಟಿದ್ದರು. ಮುಂಗಡ ಬುಕ್ಕಿಂಗ್‌ಗೆ ಬಾದಾಮಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಶಿಫಾರಸು ಮಾಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ರೊಟ್ಟಿ ಕಟ್ಟಿಕೊಂಡು ಹೋಗುತ್ತಿದ್ದೆ: ‘ಎಂಪಿ ಎಲೆಕ್ಷನ್‌ಗೆ ನಿಲ್ಲುವಂತೆ ದೇವೇಗೌಡರು ಹೇಳಿದಾಗ ನಾನು ಸುತಾರಾಂ ಒಪ್ಪಿರಲಿಲ್ಲ. ನನಗೆ ಇಂಗ್ಲಿಷ್, ಹಿಂದೆ ಬರೊಲ್ಲ ಅಲ್ಲಿಗೆ ಹೋಗಿ ಏನು ಮಾಡಲಿ ಎಂದು ಕೇಳಿದ್ದೆ. ಬೇಕಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಯೇ ಇರುವೆ. ಪಾರ್ಲಿಮೆಂಟಿಗೆ ಹೋಗಲ್ಲ ಎಂದಿದ್ದೆ. ಆಗ ‘ನಿನಗಿಂತ ಅತಾತ ಇರೊರು ಅಲ್ಲಿಗೆ ಬರ್ತಾರೊ ಹುಲ್ಲಪ್ಪ’ ಎಂದು ಹೇಳಿದ್ದ ಎಸ್‌.ಆರ್‌.ಬೊಮ್ಮಾಯಿ ಒಪ್ಪಿಸಿದ್ದರು. ಹೂಂ ಅನ್ನೋಕೆ ಆಗೊಲ್ವಾ ಅಂದಿದ್ದರು ಇಬ್ರಾಹಿಂ. ಕೊನೆಗೆ ಗೆದ್ದೆ. ಅಲ್ಲಿಯದ್ದೇ ಬೇರೆ ಅನುಭವ. ದಿಲ್ಲಿಯ ಊಟ ಒಗ್ಗುತ್ತಿರಲಿಲ್ಲ. ಊರಿಂದ ರೊಟ್ಟಿ ಕಟ್ಟಿಕೊಂಡು ವಿಮಾನದಲ್ಲಿ ಹೋಗುತ್ತಿದ್ದೆ’ ಎಂದು ಮೇಟಿ ಹಳೆಯ ದಿನಗಳಿಗೆ ಜಾರುತ್ತಾರೆ.

‘ಪಕ್ಷ, ಪಂಗಡ ಬಿಟ್ಟು ಜನರ ಸೇವೆ ಮಾಡಿ ಬೂತ್‌ಗೆ 200ರಿಂದ 300 ಮತದಾರರ ಒಲುಮೆ ಗಳಿಸು ಎಂದು ಮಂಟೂರು ಗುರುಗಳು ಕಿವಿಮಾತು ಹೇಳಿದ್ದರು. ಅದನ್ನು ಪಾಲಿಸಿಕೊಂಡು ಬಂದಿರುವೆ’ ಎನ್ನುವ ಮೇಟಿ, ಈ ಬಾರಿ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.

ರಾಜಕೀಯ ಬದುಕಿನ ಸಾಧನೆ...

ಗುಳೇದಗುಡ್ಡಕ್ಕೆ ಅಸಂಗಿ ಬ್ಯಾರೇಜ್‌ನಿಂದ ಶಾಶ್ವತ ಕುಡಿಯುವ ನೀರು, ಅರಣ್ಯ ಸಚಿವರಾಗಿದ್ದಾಗ ನವನಗರದ 63 ಸೆಕ್ಟರ್‌ಗಳ ಹಸಿರೀಕರಣ, ಪ್ಲಾಸ್ಟಿಕ್ ಕವರ್ ಬದಲಿಗೆ ಪಾಲಿಥೀನ್ ಚೀಲದಲ್ಲಿ ಗಿಡಗಳನ್ನು ಬೆಳೆಸುವ ಜೊತೆಗೆ ರೈತರಿಗೆ ಪ್ರೋತ್ಸಾಹಧನ ಕೊಡುವ ಪದ್ಧತಿ ಆರಂಭ. ಹೆರಕಲ್ ಬ್ಯಾರೇಜ್‌ನಿಂದ ನವನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಒಂದೇ ದಿನ 41 ಬೋರ್‌ವೆಲ್ ಕೊರೆಸಿ ದಾಖಲೆ ಮಾಡಿರುವೆ. ನಗರಸಭೆ ವ್ಯಾಪ್ತಿಯಲ್ಲಿ 24x7 ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವೆ ಎಂದು ಮೇಟಿ ಹೇಳುತ್ತಾರೆ.

* * 

ಅಧಿಕಾರ, ಸ್ಥಾನಮಾನ ನನಗೆ ಹೆಚ್ಚುಗಾರಿಕೆಯಲ್ಲ. ಅದು ಇಲ್ಲದಿದ್ದರೆ ಕಾರ್ಯಕರ್ತರು, ಕ್ಷೇತ್ರದ ಜನರೊಂದಿಗೆ ಇರಬೇಕು. ಹಾಗಾಗಿ ಸಾಧ್ಯವಾದಷ್ಟು ಜನರ ಮಧ್ಯೆ ಇರುತ್ತೇನೆ
ಎಚ್.ವೈ.ಮೇಟಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.