ADVERTISEMENT

ಉತ್ಪಾದನೆಗೆ ಸಮುದಾಯ ಸಹಕಾರ ಅಗತ್ಯ

ಜಿಲ್ಲಾ ಜೈವಿಕ ಇಂಧನ ಸಮಿತಿ ಸಭೆ: ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ವಿ.ಯಶವಂತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:51 IST
Last Updated 24 ಮಾರ್ಚ್ 2017, 6:51 IST
ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಜೈವಿಕ ಇಂಧನ ಸಮಿತಿ ಸಭೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವಿ.ಯಶವಂತ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಮುಖ್ಯ ಲೆಕ್ಕಾಧಿಕಾರಿ ಎ.ಚನ್ನಪ್ಪ ಇದ್ದಾರೆ
ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಜೈವಿಕ ಇಂಧನ ಸಮಿತಿ ಸಭೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವಿ.ಯಶವಂತ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಮುಖ್ಯ ಲೆಕ್ಕಾಧಿಕಾರಿ ಎ.ಚನ್ನಪ್ಪ ಇದ್ದಾರೆ   

ಬಳ್ಳಾರಿ:  ‘ಜೈವಿಕ ಇಂಧನದ ಉತ್ಪಾದನೆಗೆ ಅರಣ್ಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಮು ದಾಯದ ಸಹಕಾರ ಪಡೆಯುವುದು ಅಗತ್ಯ’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವಿ.ಯಶವಂತ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಜೈವಿಕ ಇಂಧನ ಸಮಿತಿ ಸಭೆಯಲ್ಲಿ ಮಾತನಾ ಡಿದ ಅವರು, ಸಮುದಾಯದ ಸಹ ಭಾಗಿತ್ವಕ್ಕೆ ಮಂಡಳಿಯು ಹೆಚ್ಚಿನ ಒತ್ತನ್ನು ನೀಡಿದೆ.

ರಾಜ್ಯದಲ್ಲಿ ರೈತ ಸಮುದಾಯ, ಭೂ ರಹಿತ ಕಾರ್ಮಿಕರು, ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು 32 ಜಿಲ್ಲಾ ಜೈವಿಕ ಸ್ವಯಂ ಸೇವಾ ಸಂಸ್ಥೆಗಳನ್ನು ಸಹಕಾರ ಪಡೆಯಲಾಗಿದೆ ಎಂದರು.

ಜೈವಿಕ ಇಂಧನ ಕೃಷಿಯಲ್ಲಿ ಆಸಕ್ತರಾದ ರೈತರು, ಉದ್ಯಮಿಗಳು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ 32 ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳು ರಾಜ್ಯದ 30 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೈವಿಕ ಇಂಧನ ಕುರಿತು ಮಾಹಿತಿ, ತಂತ್ರಜ್ಞಾನ, ಬೀಜ ಸಂಗ್ರಹಣೆ, ಸಂಸ್ಕರಣೆ, ಎಣ್ಣೆ, ಹಿಂಡಿ, ಗ್ಲಿಸರಿನ್ ಉತ್ಪಾದನೆ ಕುರಿತು ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಪ್ರತಿ ಕೇಂದ್ರವೂ ದಿನಕ್ಕೆ 100 ಲೀಟರ್‌ ಉತ್ಪಾದನಾ ಸಾಮರ್ಥ್ಯದ ಜೈವಿಕ ಇಂಧನ ಯಂತ್ರ, ಬೀಜ ಮತ್ತು ಸಿಪ್ಪೆ ಬೇರ್ಪಡಿಸುವ ಯಂತ್ರ, ಪ್ರದರ್ಶನ ಕಿಟ್‌ ಮತ್ತು ಪ್ರಯೋಗಾಲಯ ಹೊಂದಿದೆ. ಜೈವಿಕ ಇಂಧನ ಸಮಗ್ರ ಚಟುವಟಿಕೆಗಾಗಿ ಹಾಸನದ ಮಡೆನೂರು, ಯಾದಗಿರಿ ಜಿಲ್ಲೆಯ ತಿಂಥಣಿ ಮತ್ತು ಧಾರವಾಡದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೈವಿಕ ಇಂಧನ ಉದ್ಯಾನವನ್ನು ನಿರ್ಮಿಸಲಾಗಿದೆ.

ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ₹ 150 ಕೋಟಿ ವೆಚ್ಚದಲ್ಲಿ ಜೈವಿಕ ಇಂಧನ ಕಾಂಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರಿಂದ 3ರಿಂದ 5ಸಾವಿರ ಲೀಟರ್ ಜೈವಿಕ ಇಂಧನ ಉತ್ಪಾದಿಸಬಹುದು ಎಂದರು.

ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಕೊಂಚಿಗೇರಿಯಲ್ಲಿ ನರೇಗಾ ಅಡಿ 300 ಎಕರೆ ಪ್ರದೇಶದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದ್ದು, ಈಗಾಗಲೇ 600 ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.

2017-–18ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಸಂದರ್ಭದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಚೆನ್ನಪ್ಪ, ಮಂಡಳಿಯ ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ಜಿ.ಎನ್‌. ದಯಾನಂದ ಉಪಸ್ಥಿತರಿದ್ದರು.

ಶೇ 10ರಷ್ಟು  ಪ್ರಗತಿ ಇಲ್ಲ
2009ರ ಜೈವಿಕ ಇಂಧನ ನೀತಿ ಅನ್ವಯ 2017ರ ಡಿಸೆಂಬರ್ ಅಂತ್ಯದೊಳಗೆ ಪ್ರಸಕ್ತ ಉಪಯೋಗಿಸುತ್ತಿರುವ ಇಂಧನದಲ್ಲಿ ಶೇ 20ರಷ್ಟು ಜೈವಿಕ ಇಂಧನ ಮಿಶ್ರಣ ಮಾಡಬೇಕು ಎನ್ನುವ ಗುರಿ ಇದೆ. ಆದರೆ ಇದುವರೆಗೆ ಶೇ 10ರಷ್ಟು ಕೂಡ ಪ್ರಗತಿ ಸಾಧಿಸಲಾಗಿಲ್ಲ ಎಂದು ವಿಷಾದಿಸಿದರು.

ಕೆಲ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ 100ರಿಂದ 150 ಎಕರೆ ಪ್ರದೇಶದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲೂ ಈ ಕಾರ್ಯ ನಡೆಯಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.