ADVERTISEMENT

ಐತಿಹಾಸಿಕ ಸಾರಕಕ್ಕೆ ಧಕ್ಕೆ ಆತಂಕ

ಪರವಾನಗಿ ಇಲ್ಲದೆ ಪಟ್ಟಣ ಪಂಚಾಯ್ತಿಯಿಂದಲೇ ಕಟ್ಟಡ ನಿರ್ಮಾಣ

ಬಸವರಾಜ ಮರಳಿಹಳ್ಳಿ
Published 5 ಡಿಸೆಂಬರ್ 2015, 10:02 IST
Last Updated 5 ಡಿಸೆಂಬರ್ 2015, 10:02 IST

ಹೊಸಪೇಟೆ: ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಪರವಾನಗಿ ಇಲ್ಲದೆ ವಿಜಯನಗರ ಸಾಮ್ರಾಜ್ಯದ ಸ್ಮಾರಕದ ಸಮೀಪವೇ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಕಮಲಾಪುರ ಪಟ್ಟಣ ಪಂಚಾಯ್ತಿಯೇ ಮುಂದಾಗಿರುವ ಘಟನೆ ನಡೆದಿದೆ.

ಕಮಲಾಪುರ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿರುವ ಐತಿಹಾಸಿಕ ಕೋಟೆ ಹಾಗೂ ಕಾವಲು ಗೋಪುರದ ಮುಂಭಾಗದಲ್ಲಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳೀಯ ಆಡಳಿತವು ನಿಯಮಗಳನ್ನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ.

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಕೋಟೆ ಹಾಗೂ ಕಾವಲು ಗೋಪುರ ಅತ್ಯಂತ ಸುಂದರ ಸ್ಮಾರಕಗಳಾಗಿವೆ. ಆದರೆ, ಸ್ಮಾರಕದ ಸುತ್ತಲೂ ಕಟ್ಟಡಗಳು ನಿರ್ಮಾಣವಾಗಿರುವುದರಿಂದ ಇವು­ಗಳು ಹೊರ ಜಗತ್ತಿಗೆ ಕಾಣದಂತಾಗಿವೆ. ಇದರಿಂದ ಸಂಸ್ಕೃತಿ ಅಳಿವಿನ ಅಂಚಿಗೆ ತಲುಪುವ ಆತಂಕ ಎದುರಾಗಿದೆ.

‘ಸಂತೆ ಮಾರುಕಟ್ಟೆಯ ಹಿಂಭಾಗದಲ್ಲಿಯೇ ಐತಿಹಾಸಿಕ ಸ್ಮಾರಕಗಳು ಇರುವುದರಿಂದ ತಾತ್ಕಾಲಿಕ ಶೆಡ್‌ ಅಳವಡಿಸಲು ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ, ಅಧಿಕಾರಿಗಳು ನಮ್ಮ ವಿರೋಧವನ್ನು ಲೆಕ್ಕಿಸದೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದರು. ಆದರೆ, ಈಗ ಪಟ್ಟಣ ಪಂಚಾಯ್ತಿ ಈ ಶೆಡ್‌ಗಳನ್ನು ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿದೆ.

ಇದರಿಂದ ಹಿಂಭಾಗದಲ್ಲಿರುವ ಸ್ಮಾರಕದ ಸೌಂದರ್ಯಕ್ಕೆ ಧಕ್ಕೆ ಒದಗುವ ಆತಂಕ ಎದುರಾಗಿದೆ’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಸಂಚಾಲಕ ಡಾ.ವಿಶ್ವನಾಥ ಮಾಳಗಿ ಕಳವಳ ವ್ಯಕ್ತಪಡಿಸಿದರು.

‘ಹಂಪಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಂಡರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಪರವಾನಗಿ ಪಡೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ.

ಆದರೆ, ಈ ಎರಡು ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಸ್ಮಾರಕದ ಪಕ್ಕದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ನಿಯಮಗಳನ್ನು ಉಲ್ಲಂಘಿಸಿದರೆ ಆಕ್ಷೇಪಿಸುವ ಪ್ರಾಧಿಕಾರವೇ ಈಗ ನಿಯಮ ಉಲ್ಲಂಘಿಸಿದ್ದು, ಪಟ್ಟಣ ಪಂಚಾಯ್ತಿ ವಿರುದ್ಧ ಸಂಬಂಧಪಟ್ಟವರು ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ‘ಈಗಾಗಲೇ ಇರುವ ಶೆಡ್‌ಗಳನ್ನು ತೆರವುಗೊಳಿಸಿ ಮಳಿಗೆ ನಿರ್ಮಾಣ ಮಾಡಲಾಗುತ್ತಿರುವುದರಿಂದ ಪರವಾನಗಿ ಪಡೆದಿಲ್ಲ. ಇದು ಹೊಸ ಕಟ್ಟಡ ಅಲ್ಲದಿರುವುದರಿಂದ ಅದರ ಅಗತ್ಯವಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.