ADVERTISEMENT

ಕಾಲೇಜು ಮುಚ್ಚುವ ಭೀತಿ

ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಆದೇಶ

​ಪ್ರಜಾವಾಣಿ ವಾರ್ತೆ
Published 25 ಮೇ 2017, 10:04 IST
Last Updated 25 ಮೇ 2017, 10:04 IST

ಹೂವಿನಹಡಗಲಿ: ದಾಖಲಾತಿ ಕಡಿಮೆ ಇರುವ ತಾಲ್ಲೂಕಿನ ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಸ್ಥಳಾಂತರ ಭೀತಿ ಎದುರಾಗಿದೆ.

2016–17ನೇ ಸಾಲಿನ ಪ್ರಥಮ ಪಿಯುಸಿಯಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 14 ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ತಾಲ್ಲೂಕಿನ ಉತ್ತಂಗಿ, ಸೋಗಿ ಮತ್ತು ಹಿರೇಹಡಗಲಿ ಪ.ಪೂ. ಕಾಲೇಜು ಮುಚ್ಚುವ ಕಾಲೇಜುಗಳ ಪಟ್ಟಿಯಲ್ಲಿವೆ.

ಕಳೆದ ಸಾಲಿನಲ್ಲಿ ಉತ್ತಂಗಿ ಮತ್ತು ಸೋಗಿ ಪ.ಪೂ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇತ್ತು. ಆದರೆ, ಹಿರೇಹಡಗಲಿ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ 15, ದ್ವಿತೀಯ ಪಿಯುಸಿಯಲ್ಲಿ 25 ವಿದ್ಯಾರ್ಥಿಗಳಿದ್ದರೂ ಕಾಲೇಜು ಮುಚ್ಚಲು ಆದೇಶಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಗಳಲ್ಲಿ ಕಾಯಂ ಉಪನ್ಯಾಸಕ ಸಿಬ್ಬಂದಿ ಇಲ್ಲ. ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಮೂಲ ಸೌಕರ್ಯ ಇಲ್ಲ. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ವಿಷಯ ಸಂಯೋಜನೆಗಳ ಆಯ್ಕೆಗೂ ಅವಕಾಶಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸ್ಥಳೀಯವಾಗಿ ಕಾಲೇಜು ಇದ್ದರೂ ಬೇರೆಡೆ ಪ್ರವೇಶ ಪಡೆಯುತ್ತಿದ್ದಾರೆ.

ಉತ್ತಂಗಿಯ ಕಾಲೇಜನ್ನು ಶಿಡ್ಲಘಟ್ಟಕ್ಕೆ, ಸೋಗಿಯ ಕಾಲೇಜನ್ನು ಮಧುಗಿರಿಗೆ ಮತ್ತು ಹಿರೇಹಡಗಲಿ ಕಾಲೇಜನ್ನು ಮಧುಗಿರಿ ತಾಲ್ಲೂಕಿನ ಕಡಗತ್ತೂರು ಗ್ರಾಮಕ್ಕೆ ಸ್ಥಳಾಂತರಿಸಿ ಆದೇಶಿಸಿದೆ.

ತಾಲ್ಲೂಕಿನ ಮೂರು ಗ್ರಾಮೀಣ ಸರ್ಕಾರಿ ಪದವಿ ಪೂರ್ವ ಕಾಲೇಜು ಗಳನ್ನು ಮುಚ್ಚುವ ಸರ್ಕಾರದ ಆದೇಶಕ್ಕೆ ಇಲ್ಲಿನ ಶಿಕ್ಷಣ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಹಿಂದುಳಿದ ಹೈದರಾಬಾದ್‌–ಕರ್ನಾಟಕ ಭಾಗದಲ್ಲಿ ಸರ್ಕಾರಿ ಕಾಲೇಜು ಗಳ ಸಂಖ್ಯೆ ತೀರಾ ಕಡಿಮೆ ಇದೆ. ಇರುವ ಕಾಲೇಜುಗಳಿಗೆ ಸರ್ಕಾರ ಅಗತ್ಯ ಮೂಲ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸು ವುದನ್ನು ಬಿಟ್ಟು, ಬೇರೆಡೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ.
ಆದೇಶ ಹಿಂಪಡೆಯದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಐಟಿ ಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವ ರಾಜ ಎಚ್ಚರಿಸಿದ್ದಾರೆ.

‘ಉತ್ತಂಗಿ ಗ್ರಾಮದಲ್ಲಿ ಕೋಟ್ಯಂತರ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಿಸಿ ಇದೀಗ ಏಕಾಏಕಿ ಮುಚ್ಚಲು ಆದೇಶಿಸಿ ರುವುದು ಸರಿಯಲ್ಲ. ನುರಿತ ಉಪ ನ್ಯಾಸಕ ಸಿಬ್ಬಂದಿ, ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದಲ್ಲಿ ಸರ್ಕಾರಿ ಕಾಲೇಜು ಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಉತ್ತಂಗಿ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿ ಸಲು ಗ್ರಾಮಸ್ಥರು, ಸಂಘ ಸಂಸ್ಥೆಗಳು ಕೂಡ ಮುಂದೆ ಬಂದಿವೆ.

ಎಲ್ಲ ವಿದ್ಯಾರ್ಥಿಗಳ ಶುಲ್ಕವನ್ನು ವಿಎಸ್‌ಎಸ್‌ ಎನ್‌ ಪಾವತಿಸುವ ಭರವಸೆ ನೀಡಿದೆ. ಹೀಗಾಗಿ ಕಾಲೇಜನ್ನು ಯಾವುದೇ ಕಾರಣಕ್ಕೂ ಬೇರೆಡೆ ಸ್ಥಳಾಂತರಿಸ ಬಾರದು. ಒಂದು ವೇಳೆ ತಾಲ್ಲೂಕಿನ ಕಾಲೇಜುಗಳನ್ನು ಮುಚ್ಚಿದರೆ ಅದಕ್ಕೆ ಶಾಸಕರು ಹೊಣೆಯಾಗುತ್ತಾರೆ’ ಎಂದು ಉತ್ತಂಗಿ ಮಾದಿಹಳ್ಳಿ ಸಿದ್ದೇಶ ಹೇಳಿದರು.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ಕಾಲೇಜುಗಳನ್ನು ತಾಲ್ಲೂಕಿನ ಲ್ಲಿಯೇ ಉಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಮೂರೂ ಕಾಲೇಜುಗಳ ಪ್ರಾಚಾರ್ಯರಿಗೆ ಸೂಚಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.
–ಸೋಮಶೇಖರ್‌

ಸ್ಥಳಾಂತರಿಸಲು ಬಿಡಲ್ಲ
‘ಹೂವಿನಹಡಗಲಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ’ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. ಆದೇಶ ಹೊರಬಿದ್ದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ.

ಅವರು ಪೂರಕವಾಗಿ ಸ್ಪಂದಿಸಿ, ಕಾಲೇಜುಗಳನ್ನು ಇಲ್ಲಿಯೇ ಮುಂದುವರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ತನ್ವೀರ್‌ ಶೇಠ್ ಅವರು ಬಂದ ನಂತರ ಮೇ 29ಕ್ಕೆ ಕಾಲೇಜು ಸ್ಥಳಾಂತರ ಆದೇಶ ರದ್ದುಪಡಿಸ ಲಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.