ADVERTISEMENT

ಗ್ರಾ.ಪಂ. ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

ಸರ್ಕಾರ ಹಾಗೂ ಭೂ ಮಾಲೀಕರ ನಡುವೆ ಪರಿಹಾರ ವಿತರಣೆಯ ಜಗಳ, ನಿವಾಸಿಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:45 IST
Last Updated 23 ಮಾರ್ಚ್ 2017, 9:45 IST

ಹೂವಿನಹಡಗಲಿ: ಸರ್ಕಾರ ಅಧಿಕೃತ ಹಕ್ಕುಪತ್ರ ನೀಡಿರುವ ಜಾಗೆಯಲ್ಲಿ ವಾಸಿ­ಸಲು ಬಿಡದೇ ಭೂ ಮಾಲೀಕರು ದಿನನಿತ್ಯ ಕಿರಿಕಿರಿ ಮಾಡುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ, ನೆಮ್ಮದಿ­ಯಿಂದ ಬದುಕಲು ಅವಕಾಶ ಮಾಡಿ­ಕೊಡಬೇಕು ಎಂದು ಆಗ್ರಹಿಸಿ ಗುಜ­ನೂರು ಗ್ರಾಮಸ್ಥರು ದೇವ­ಗೊಂಡನ­ಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಇಡೀ ದಿನ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಮಹಿಳೆಯರು, ಮಕ್ಕ­ಳೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮ­ಸ್ಥರು ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ತಮಗೆ ನ್ಯಾಯ ಸಿಗು­ವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

‘ಸರ್ಕಾರ ಮಂಜೂರು ಮಾಡಿದ ಆಶ್ರಯ ಮನೆ ಕಟ್ಟಿಕೊಳ್ಳಲು ಬಿಡದೇ ಅಡ್ಡಿಪಡಿಸುತ್ತಿದ್ದಾರೆ. ಮನೆ ಕಟ್ಟಿದರೆ ಜೆಸಿಬಿಯಿಂದ ಧ್ವಂಸಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ. ಆಶ್ರಯ ಮನೆ ನೆಚ್ಚಿ­ಕೊಂಡು ಗುಡಿಸಲು ಕಿತ್ತು ಹಾಕಿದ್ದೇವೆ. ಇತ್ತ ಮನೆಯೂ ಇಲ್ಲ, ಗುಡಿಸಲು ಇಲ್ಲದೇ ಬೀದಿಪಾಲಾಗಿದ್ದೇವೆ’ ಎಂದು ಹುಲಿಗೆಮ್ಮ ಅಳಲು ತೋಡಿಕೊಂಡರು.

‘1992 ರಲ್ಲಿ ಸರ್ಕಾರ ಹಕ್ಕುಪತ್ರ ನೀಡಿರುವ ಜಾಗೆಯಲ್ಲೇ ಗ್ರಾಮದ 70ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಇದೀಗ ತಮಗೆ ಪರಿಹಾರ ಸಿಕ್ಕಿಲ್ಲ ಎಂದು ತಗಾದೆ ತೆಗೆದಿರುವ ಭೂ ಮಾಲೀಕರಾದ ಮಿರಾಕೊರನಹಳ್ಳಿಯ ಅಯ್ಯನಹಳ್ಳಿ ನಾಗಮ್ಮ ಮತ್ತು ಅವರ ಅಳಿಯ ನಾಗರಾಜ ದೌರ್ಜನ್ಯ ಮಾಡುತ್ತಿದ್ದಾರೆ’ ಎಂದು ಅಂಜಿನಪ್ಪ ದೂರಿದರು.

ಈ ಕುರಿತು ಗ್ರಾಮಸ್ಥರೆಲ್ಲರೂ ಸೇರಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವ­ರನ್ನು ಸಾಕಷ್ಟು ಬಾರಿ ಮನವಿ ಮಾಡಿ­ದರೂ ಪ್ರಯೋಜನವಾಗಿಲ್ಲ. ಮುಖ್ಯ­ಮಂತ್ರಿ, ವಸತಿ ಸಚಿವರು, ಜಿಲ್ಲಾಡ­ಳಿತಕ್ಕೆ ಪತ್ರ ಬರೆ­ದಿದ್ದರೂ ಸಮಸ್ಯೆ ಬಗೆ­ಹರಿ­ಸಲು ಯಾರೂ ಮುಂದಾಗಿಲ್ಲ  ಎಂದರು.

‘ಆಶ್ರಯ ನಿವೇಶನಕ್ಕೆ ಜಮೀನು ಬಿಟ್ಟು­­ಕೊಡಲು ಈ ಹಿಂದೆ ಭೂ ಮಾಲೀಕರು ಒಪ್ಪಿಗೆ ಸೂಚಿಸಿದ್ದರಿಂದಲೇ ಸರ್ಕಾರ ಜಮೀನನ್ನು ವಶಕ್ಕೆ ಪಡೆದು ನಿವೇಶನಗಳನ್ನಾಗಿ ಹಂಚಿಕೆ ಮಾಡಿದೆ. ನಿಯಮಾನುಸಾರ ಭೂಸ್ವಾಧೀನಪಡಿಸಿ­ಕೊಂಡು ಭೂ ಪರಿಹಾರ ನೀಡದೇ ಇರುವ ಕಾರಣ ಸಮಸ್ಯೆ ಉದ್ಭವಿಸಿದೆ.

ಸರ್ಕಾರ ಮತ್ತು ಜಮೀನಿನ ಮಾಲೀಕರ ಪರಿಹಾರದ ಜಗಳದಲ್ಲಿ ಗ್ರಾಮಸ್ಥರೆಲ್ಲ ಅತಂತ್ರವಾಗಿದ್ದೇವೆ’ ಎಂದು ಎಚ್.­ಸಿದ್ದಪ್ಪ, ಎಂ.ಕರಿಯಪ್ಪ ಸಮಸ್ಯೆ ವಿವರಿಸಿದರು.

ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾದ ಮನೆ, ಶೌಚಾಲಯ ಕಟ್ಟಿಕೊಳ್ಳಲು ಮತ್ತು ಕುಡಿವ ನೀರಿನ ಪೈಪ್‌ಲೈನ್ ಹಾಕಿಕೊಳ್ಳಲು ಭೂ ಮಾಲೀ­ಕರು ಅಡ್ಡಿಪಡಿಸುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಭೂ ಮಾಲೀಕರ ಕಿರಿಕಿರಿ ತಪ್ಪಿಸಿ, ಸಮಸ್ಯೆ ಇತ್ಯರ್ಥಪಡಿಸುವವರೆಗೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಮರಿಯಪ್ಪ, ಮಹಾಬಲೇಶ್ವರಪ್ಪ, ಬಿ.ಹನುಮಂತಪ್ಪ, ಕರಿಗಾರ ಹನು­ಮಂತ, ಬಿ. ಚನ್ನಪ್ಪ, ಪುತ್ರಪ್ಪ, ಬಿ.ದುರು­ಗಪ್ಪ, ಎಂ.ಅಡಿವೆಪ್ಪ, ಬಸಮ್ಮ, ದೇವಕ್ಕ, ಈರಮ್ಮ, ಗಂಗಮ್ಮ ಇತರರು ಇದ್ದರು.

ಸರ್ವೇ ನಂಬರ್ ಅದಲು–ಬದಲು
ಗುಜನೂರು ಆಶ್ರಯ ನಿವೇಶನಕ್ಕೆ ವಶಪಡಿಸಿಕೊಂಡ ಜಮೀನು ಸರ್ವೇ ನಂಬರ್‌ 193/ಇ. ಇದ್ದು, ಹಕ್ಕುಪತ್ರ ಇತರೆ ದಾಖಲೆಗಳಲ್ಲಿ 103/ಇ. ಎಂದು ದಾಖಲಿಸಿರುವುದು ಸಮಸ್ಯೆ ಜಟಿಲವಾಗಲು ಕಾರಣ ಎನ್ನಲಾಗುತ್ತಿದೆ. ಇದರಿಂದ ಭೂ ಪರಿಹಾರಕ್ಕೆ ತಾಂತ್ರಿಕ ಅಡಚಣೆಗಳು ಎದುರಾಗಿ ಗ್ರಾಮಸ್ಥರು, ಭೂ ಮಾಲೀಕರ ನಡುವೆ ಘರ್ಷಣೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT