ADVERTISEMENT

ತುಂಗಭದ್ರಾ ಕಾಲುವೆ ಸ್ವಚ್ಛತೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 9:23 IST
Last Updated 4 ಆಗಸ್ಟ್ 2015, 9:23 IST

ಕುರುಗೋಡು: ಬಳ್ಳಾರಿ ರಸ್ತೆಯಿಂದ ಇಂದಿರಾನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಜನವಸತಿ ಪ್ರದೇಶದಲ್ಲಿ ಇರುವ ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ಜನರು ಚರಂಡಿ ನೀರು ಹರಿಸುತ್ತಿರುವುದರಿಂದ ಕೊಳಚೆ ನೀರಿನಲ್ಲಿ ನೂರಾರು ಹಂದಿಗಳು ವಾಸಿಸುತ್ತಿವೆ.

ಇದರಿಂದ ವಾತಾವರಣ ಕಲುಷಿತ­ಗೊಂಡಿದ್ದು ಈ ಭಾಗದಲ್ಲಿ ಜನರು ಮೂಗು ಮುಚ್ಚಿಕೊಂಡು ತಿರುಗಾಡ­ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲುವೆಯ ಸುತ್ತಮುತ್ತವಾಸಿಸುವ ಜನರು ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಹಾವಳಿಯಿಂದ ನಲುಗಿದ್ದಾರೆ. ಇಲ್ಲಿ ಸೊಳ್ಳೆಗಳ ಹಾವಳಿಯಿಂದ ಹಗಲಲ್ಲೇ ಸೊಳ್ಳೆ ಪರದೆ ಕಟ್ಟಿ­ಕೊಳ್ಳ­ಬೇಕು. ಸೊಳ್ಳೆ ಕಡಿತದಿಂದ ಬರಬಹು­ದಾದ ಡೆಂಗೆ, ಮಲೇರಿಯಾ ಮತ್ತು ಚಿಕುನ್ ಗುನ್ಯ ರೋಗದಿಂದ ಹತ್ತಾರು ಜನರು ನರಳುತ್ತಿದ್ದಾರೆ.

ಇಲ್ಲಿ ವಾಸಿಸುವವರು ರೋಗ ಭೀತಿ­ಯಲ್ಲಿ ಕಾಲ ಕಳೆಯು­ವಂತಾಗಿದೆ. ಚರಂಡಿ ನೀರು, ಹಂದಿ ಮತ್ತು ಸೊಳ್ಳೆ ನಿಯಂತ­್ರಣದ ಬಗ್ಗೆ ಗ್ರಾಮ ಪಂಚಾಯ್ತಿಗೆ ವರ್ಷದಲ್ಲಿ ಮೂರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನರು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವುದು ಅರ್ಥ ವಾ­ಗುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ನಿವಾಸಿ ದುರುಗಣ್ಣ.

ಸೊಳ್ಳೆ ಕಡಿತದಿಂದ ಬರುವ ರೋಗ­ದಿಂದ ಬಳಲುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಗ್ರಾಮ ಪಂಚಾಯ್ತಿಗೆ ಸಲಹೆ ಸೂಚನೆ ನೀಡಬೇಕಾದ ಆರೋಗ್ಯ ಇಲಾಖೆ ಮೌನವಾಗಿದೆ ಎಂದು ನಿವಾಸಿಗಳಾದ ಟಿ.ಎಂ. ಚಂದ್ರಣ್ಣ ಮತ್ತು ಎ. ಪಂಪಾಪತಿ ಆರೋಪಿಸಿದ್ದಾರೆ.

ಚರಂಡಿ ಸ್ವಚ್ಛತೆ, ಹಂದಿ ಹಾವಳಿ ಮತ್ತು ಸೊಳ್ಳೆ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕಾದ ಗ್ರಾಮ ಪಂಚಾಯ್ತಿ ನಿಷ್ಕ್ರಿಯತೆಯ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ರೋಗ ಹೆಚ್ಚಾಗುವ ಮೊದಲು ಗ್ರಾಮ ಪಂಚಾಯ್ತಿ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗ­ದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.