ADVERTISEMENT

ಮೀನುಗಾರರಿಂದ ಕಠಿಣ ಹರಕೆ ಸಮರ್ಪಣೆ

ಕಾರು, ಗುಂಡು, ಆಟೊ ಎಳೆದು ಕಾಳಮ್ಮದೇವಿ ಸೇವೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 7:13 IST
Last Updated 25 ಏಪ್ರಿಲ್ 2018, 7:13 IST

ಕಂಪ್ಲಿ:ಇಲ್ಲಿಯ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.

ಹರಕೆ ಹೊತ್ತ ಕೆಲ ಮೀನುಗಾರರು ಕಾರು, ಹಂತಿ ಗುಂಡು, ಆಟೊ, ಸಣ್ಣ ತೇರನ್ನು ಎಳೆಯುವ ಮುನ್ನ ತಮ್ಮ ಬೆನ್ನುಗಳ ಹಿಂದೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಅದಕ್ಕೆ ಪ್ಲಾಸ್ಟಿಕ್‌ ಹಗ್ಗ ಕಟ್ಟಿಕೊಂಡು ತುಂಗಭದ್ರಾ ನದಿಯಿಂದ ಸುಂಕ್ಲಮ್ಮ ದೇವಸ್ಥಾನದ ತನಕ ಎಳೆದರು.

ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ಜೋಡಿಸಿದ್ದ ಬಲೀಸ್‌ಗೆ(ಕಟ್ಟಿಗೆ) ಭಕ್ತರಿಬ್ಬರು ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಸಿಕ್ಕಿಸಿಕೊಂಡು ನೈಲಾನ್‌ ಹಗ್ಗದೊಂದಿಗೆ ನೇತಾಡುತ್ತಾ ಹರಕೆ ತೀರಿಸಿದ ಪರಿ ನೆರೆದಿದ್ದ ಭಕ್ತರಲ್ಲಿ ಬೆರಗು ಮೂಡಿಸಿತು.

ADVERTISEMENT

ಹರಕೆ ತೀರಿಸಿದ ಎಲ್ಲರೂ 9, 11 ಮತ್ತು 16 ಅಡಿ ಉದ್ದದ ಒಂದೊಂದು ಅಸ್ತ್ರ(ಮುರುಗಾಸ್ತ್ರ, ತ್ರಿಶೂಲಾಸ್ತ್ರ) ಕೆನ್ನೆಗಳಿಗೆ ಹಾಕಿಕೊಂಡಿದ್ದು ವಿಶೇಷವಾಗಿತ್ತು. ಹರಕೆ ಹೊತ್ತ ಭಕ್ತರಿಗೆ ಸಂಬಂಧಿಕರು ದಾರಿ ಮಧ್ಯೆ ನೀರು ಕುಡಿಸುವುದು ಮತ್ತು ಬೀಸಣಿಗೆಯಿಂದ ಗಾಳಿ ಸೇವೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಸುಮಾರು 41 ಡಿಗ್ರಿ ಸೆಲ್ಸಿಯಸ್‌ ಉರಿ ಬಿಸಿಲು ಇದ್ದರೂ, ಅದನ್ನು ಲೆಕ್ಕಿಸದೆ ಹರಕೆ ತೀರಿಸುವ ಮೀನುಗಾರರನ್ನು ನೋಡಲು ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು.

ಕಾಳಮ್ಮದೇವಿ ಪೂಜಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ, ಗಂಗಾಸ್ಥಳ, ಕುಂಭ ಉತ್ಸವ, ವಿವಿಧ ಧಾರ್ಮಿಕ ಆಚರಣೆಗಳು ಶ್ರದ್ಧೆ ಹಾಗೂ ಭಕ್ತಿಯಿಂದ ಜರುಗಿದವು.

ಕೋಟೆ ಪ್ರದೇಶದ ಮೀನುಗಾರರ ಸಂಘದ ಪದಾಧಿಕಾರಿಗಳು, ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ಜರುಗಿತು.

ನೋವು ಆಗಲ್ಲ..

‘ನಮ್ಮ ಇಷ್ಟಾರ್ಥ ಈಡೇರಿಸುವ ದೇವಿಗೆ ಭಕ್ತಿ ಸಮರ್ಪಣೆ ಮಾಡಲು ಆಯ್ದುಕೊಂಡ ಕಠಿಣ ಸೇವೆ ಇದು. ಇದರಲ್ಲಿ ಯಾವುದೇ ನೋವು ಕಾಣುವುದಿಲ್ಲ ಎನ್ನುತ್ತಾರೆ ಹರಕೆ ತೀರಿಸಿದ ಮೀನುಗಾರ ಸಮುದಾಯದ ಭಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.