ADVERTISEMENT

ರೈತರಿಗೆ ಕಳಪೆ ಬೀಜ ಕೊಟ್ಟರೆ ಹುಷಾರ್‌

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:58 IST
Last Updated 13 ಮೇ 2017, 9:58 IST

ಹೊಸಪೇಟೆ: ‘ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬೀಜಗಳನ್ನು ವಿತರಿಸಬೇಕು. ಕಳಪೆ ಬೀಜ ಕೊಟ್ಟು ರೈತರಿಗೆ ತೊಂದರೆ ಕೊಡುವುದು ಬೇಡ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ್‌ ಸೂಚನೆ ನೀಡಿದರು.

2017–18ನೇ ಸಾಲಿನ ಮೊದಲ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ರೈತರಿಗೆ ಕಳಪೆ ಬೀಜಗಳನ್ನು ಪೂರೈಸಲಾಗುತ್ತಿದೆ ಎಂಬ ದೂರು ಬಂದಿವೆ. ಯಾವುದೇ ಕಂಪೆನಿಯ ಬೀಜ ಬೇಕಾದರೂ ಖರೀದಿಸಿ. ಆದರೆ, ಅವುಗಳು ಗುಣಮಟ್ಟದಿಂದ ಕೂಡಿರಬೇಕು. ರೈತರಿ­ಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಅರ್ಚನಾ ಅವರಿಗೆ ನಿರ್ದೇಶನ ನೀಡಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಬಿ.ಎಸ್‌. ರಾಜಪ್ಪ, ‘ಮೇ 25ರಿಂದ ಎಲ್ಲೆಡೆ ಬಿತ್ತನೆ ಆರಂಭವಾಗುತ್ತದೆ. ಸಮರ್ಪಕವಾಗಿ ಬೀಜ ದಾಸ್ತಾನು ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಇಲ್ಲಿಯವರೆಗೆ ತಾಲ್ಲೂಕಿನ ಯಾವ ರೈತರಿಗೂ ಪರಿಹಾರ ಸಿಕ್ಕಿಲ್ಲ. ಕೇವಲ ಕೃಷಿ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಪರಿಹಾರ ವಿತರಣೆಯಾಗಿದೆ. ಸರ್ಕಾರ ಕೊಡುವ ಪರಿಹಾರ ರೈತರಿಗೆ ಮುಟ್ಟಿಸುವ ಕೆಲಸ ಸರಿಯಾಗಿ ಆಗುತ್ತಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚನಾ, ‘ಬರ ಪರಿಹಾರಕ್ಕೆ ಸಂಬಂಧಿಸಿ ಮುಂಗಾರು ಹಂಗಾಮಿನಲ್ಲಿ 8,373 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿತ್ತು. 8,984 ರೈತ ಫಲಾನುಭವಿಗಳಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ ಕಂದಾಯ ಇಲಾಖೆಯ ಸಿಬ್ಬಂದಿ ಆನ್‌ಲೈನ್‌ನಲ್ಲಿ ಎಲ್ಲ ರೈತರ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಈಗಾಗಲೇ 7,384 ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆಯಾಗಿದೆ’ ಎಂದು ಮಾಹಿತಿ ನೀಡಿದರು.

ಶೌಚಾಲಯ ಮಂಜೂರು:
‘ತಾಲ್ಲೂಕಿನ 90 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಮಂಜೂರಾ­ಗಿವೆ. ಪ್ರತಿ ಕೇಂದ್ರಕ್ಕೆ ₹ 15 ಸಾವಿರ ನಿಗದಿಪಡಿಸಲಾಗಿದೆ. ಇದರಿಂದ ಗುಣ­ಮಟ್ಟದ ಶೌಚಾಲಯಗಳನ್ನು ನಿರ್ಮಿಸಲು ಆಗುವುದಿಲ್ಲ. ಹಾಗಾಗಿ ಪ್ರತಿ ಕೇಂದ್ರಕ್ಕೆ ಇನ್ನೂ ಹೆಚ್ಚುವರಿಯಾಗಿ ₹ 5 ಸಾವಿರ ಕೊಡಲು ಕೋರಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿ.ಡಿ.ಪಿ.ಒ) ಪ್ರಭಾಕರ್‌ ಕವಿತಾಳ ಸಭೆಗೆ ತಿಳಿಸಿದರು.

‘ಇದಲ್ಲದೇ ತಾಲ್ಲೂಕಿನ 36 ಅಂಗನವಾಡಿ ಕೇಂದ್ರಗಳನ್ನು ತುರ್ತಾಗಿ ದುರಸ್ತಿಗೊಳಿಸಲು ₹ 15 ಲಕ್ಷ ಮಂಜೂರಾಗಿದೆ. ಸಭೆ ಒಪ್ಪಿಗೆ ಕೊಟ್ಟರೆ ಶೀಘ್ರ ಕೆಲಸ ಆರಂಭಿಸಲಾಗುವುದು. ಅಲ್ಲದೇ ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಲು ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮನೆ ಬಾಗಿಲಿಗೆ ಮೇವು:
‘ಬರ ಇರುವುದರಿಂದ ರೈತರ ಮನೆ ಬಾಗಿಲಿಗೆ ಮೇವು ತಲುಪಿಸಲಾಗುತ್ತಿದೆ. ಯಾರಿಗೆ ಮೇವು ಬೇಕೋ ಅಂತಹವರು ಕೋರಿಕೆ ಸಲ್ಲಿಸಿದರೆ ಮೇವು ಪೂರೈಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಬಸವರಾಜ ಬೆಣ್ಣಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ. ಮಹಾದೇವ, ‘ಈ ಬಗ್ಗೆ ಎಲ್ಲಿಯೂ ಕಾರ್ಯಕ್ರಮ ಮಾಡಿಲ್ಲ. ಜನರಿಗೆ ತಿಳಿಸಿಲ್ಲ. ಅದು ರೈತರಿಗೆ ಹೇಗೆ ಗೊತ್ತಾಗಬೇಕು’ ಎಂದು ಪ್ರಶ್ನಿಸಿದರು.

‘ಹಲವು ದಿನಗಳಿಂದ ಈ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಈಗಾಗಲೇ ಅನೇಕ ಜನ ಇದರ ಪ್ರಯೋಜನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನಡೆಸಿ ಹೆಚ್ಚಿನ ಜನರಿಗೆ ಮಾಹಿತಿ ನೀಡಲಾಗುವುದು’ ಎಂದು ಬೆಣ್ಣಿ ಹೇಳಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.