ADVERTISEMENT

ವಿಸ್ತರಣೆಗೆ ಕಾದಿರುವ ರಸ್ತೆ ಸಮೂಹ

ನಗರ ಬೆಳೆದಂತೆ ಇಕ್ಕಟ್ಟಾದ ರಸ್ತೆಗಳು; ಪಾದಚಾರಿಗಳಿಗೆ ಇಲ್ಲದ ರಸ್ತೆ, ವಾಹನ ನಿಲುಗಡೆಗೆ ಸ್ಥಳವಿಲ್ಲ

ಕೆ.ನರಸಿಂಹ ಮೂರ್ತಿ
Published 9 ಜನವರಿ 2017, 8:01 IST
Last Updated 9 ಜನವರಿ 2017, 8:01 IST
ಬಳ್ಳಾರಿ: ನಗರದ ಎಚ್‌.ಆರ್‌.ಗವಿಯಪ್ಪ ವೃತ್ತವನ್ನು ಸಿಗ್ನಲ್ ಮುಕ್ತ ವೃತ್ತವನ್ನಾಗಿಸುವ ಕಾರ್ಯ ನಡೆಯು ತ್ತಿರುವ ಹೊತ್ತಿನಲ್ಲೇ, ಈ ವೃತ್ತಕ್ಕೆ ಸಂಪರ್ಕ ಕಲ್ಪಿ ಸುವ 11ನೇ ವಾರ್ಡಿನ ತೇರು ಬೀದಿಯನ್ನು ವಿಸ್ತರಿ ಸಬೇಕು ಎಂಬ ಬೇಡಿಕೆಗೂ ಮತ್ತೆ ಜೀವ ಬಂದಿದೆ. 
 
ಅದರೊಂದಿಗೆ, ಕಾಳಮ್ಮ ಗುಡಿ ರಸ್ತೆ, ಸಣ್ಣ ಮಾರುಕಟ್ಟೆ ಎದುರಿನ ಗಡಿಗಿ ಚೆನ್ನಪ್ಪ ಬೀದಿ ರಸ್ತೆ, ಹೂವಿನ ಬಜಾರು ರಸ್ತೆ, ತೇರು ಬೀದಿ ರಸ್ತೆ, ಕೊಲ್ಮಿ ಚೌಕದ ರಸ್ತೆಗಳು ಈಗಿನ ಪರಿಸ್ಥಿತಿಯಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅನುಕೂಲಕರವಾಗಿಲ್ಲ ಎಂಬ ಗೊಣಗಾಟದ ನಡುವೆಯೇ ಈ ರಸ್ತೆಗಳಲ್ಲಿ ವ್ಯಾಪಾರಿಗಳು, ನಿವಾಸಿಗಳು ದಿನ ದೂಡುತ್ತಿದ್ದಾರೆ.
 
ಈ ರಸ್ತೆಗಳನ್ನು ಬೇರ್ಪಡಿಸುವ ರೀತಿಯಲ್ಲಿ ಬೆಂಗಳೂರು ರಸ್ತೆ ಚಾಚಿಕೊಂಡಿದೆ. ಈ ರಸ್ತೆಯಲ್ಲಿನ ವ್ಯಾಪಾರ ಚಟುವಟಿಕೆಗಳಿಗಿಂತಲೂ ಹೆಚ್ಚು ವಹಿವಾಟು ಚಿಕ್ಕ ರಸ್ತೆಗಳಲ್ಲಿ ನಡೆಯುತ್ತಿದೆ. ವಾಹನಗಳ ನಿಲುಗಡೆಗೆ ಅವಕಾಶ ಇಲ್ಲದಂತಾಗಿದೆ. ಇದು ವಾಹನ ಸವಾರರು ಮತ್ತು ಅಂಗಡಿ ಮಾಲೀಕರ ನಡುವೆ ಜಗಳವನ್ನೂ ತಂದಿಕ್ಕಿದೆ.
 
ಏಕಮುಖ ಸಂಚಾರ: ಬೆಂಗಳೂರು ರಸ್ತೆಯಲ್ಲಿ ಬ್ರೂಸ್‌ಪೇಟೆ ಠಾಣೆಯವರೆಗೂ ಏಕ ಮುಖ ಸಂಚಾರ ನಿಯಮವಿದೆ. ಅದೇ ನಿಯಮ ಕಿರಿದಾದ ರಸ್ತೆಗಳಲ್ಲೂ ಇದೆ. ಆದರೆ ನಿಯಮ ಪಾಲನೆಯ ವಿಚಾರದಲ್ಲಿ ಈ ರಸ್ತೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಈಡಾಗಿವೆ. ಇದು ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಿದೆ.
 
ಈ ರಸ್ತೆಗಳಲ್ಲಿ ದಿನಸಿ, ಹೂವು–ಹಣ್ಣಿನ ವ್ಯಾಪಾರ, ಎಲೆಕ್ಟ್ರಿಕ್‌ ಸಾಮಗ್ರಿ, ಸೋಫಾ ಸೆಟ್‌, ಬೈಸಿಕಲ್‌, ಗಿರವಿ ಅಂಗಡಿ, ಬಟ್ಟೆ ಅಂಗಡಿ ಸೇರಿ ದಂತೆ ಹಲವು ಬಗೆಯ ಅಂಗಡಿ–ವ್ಯಾಪಾರ ದಿನವೂ ಭರ್ಜರಿಯಾಗಿ ನಡೆಯುತ್ತದೆ. 
 
ಪಾದಚಾರಿಗಳು ಅತಂತ್ರ: ಕಿರಿದಾದ ರಸ್ತೆಗಳಲ್ಲಿ ಪಾದಚಾರಿಗಳಿಗೆ ಓಡಾಡಲೂ ಆಗದ ಪರಿಸ್ಥಿತಿ ಇದೆ. ಅಂಗಡಿ ಮಾಲಿಕರು ಸರಕುಗಳನ್ನು ರಸ್ತೆ ಯಲ್ಲೇ ಇಡುವುದರಿಂದ, ಪಾದಚಾರಿಗಳು ರಸ್ತೆ ಮಧ್ಯಕ್ಕೆ ಬಂದು ನಡೆಯಬೇಕಾಗುತ್ತದೆ. ಅದರಿಂದ ಕೆಲವ ಬಾರಿ ಅಪಘಾತಗಳೂ ನಡೆಯುತ್ತವೆ.
 
ಅರ್ಧಕ್ಕೆ ನಿಂತ ವಿಸ್ತರಣೆ: ಇದೇ ಸನ್ನಿವೇಶದಲ್ಲಿ, ತೇರು ಬೀದಿ ರಸ್ತೆ ವಿಸ್ತರಣೆ ಕಾರ್ಯವೂ ಮೊಟುಕು ಗೊಂಡಿದೆ. ಗವಿಯಪ್ಪ ವೃತ್ತದಿಂದ ಬ್ರೂಸ್‌ಪೇಟೆ ಠಾಣೆಯವರೆಗೂ ಈ ರಸ್ತೆಯನ್ನು ವಿಸ್ತರಿಸಲಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ, ತೇರು ನಿಲ್ಲುವ ಕೊನೆಯ ಹಂತದವರೆಗೆ ರಸ್ತೆ ವಿಸ್ತರಣೆ ಆಗಿಲ್ಲ.
 
ಮರಿಸ್ವಾಮಿ ಮಠದ ರಸ್ತೆ, ಪ್ರಭಾತ್‌ ಟಾಕೀಸ್‌ ಎದುರಿನ ಗಣೇಶ ಗುಡಿ ರಸ್ತೆ, ಚೆಲುವಾದಿ ಬೀದಿ ರಸ್ತೆ, ಬ್ರಾಹ್ಮಣರ ಬೀದಿ ರಸ್ತೆಗಳು ಕೂಡ ವಿಸ್ತರಣೆಗೆ ಕಾದಿವೆ.
 
***
ವಿಸ್ತರಣೆಯಾದರೆ ಮಾತ್ರ ತೇರುಬೀದಿಯ ಪರಿಸ್ಥಿತಿ ಸುಧಾರಣೆಗೊಳ್ಳುತ್ತದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಪಾಲಿಕೆಗೆ ಮನವಿ ಸಲ್ಲಿಸಿದ್ದೇವೆ
-ಸೊಂತ ಗಿರಿಧರ್‌, ಗುರುಬಸಯ್ಯ, ಯಾಳ್ಪಿ ತಿಪ್ಪಣ್ಣ
ಸ್ಥಳೀಯ ನಿವಾಸಿಗಳು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.