ADVERTISEMENT

ಹಂಪಿ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:02 IST
Last Updated 20 ಏಪ್ರಿಲ್ 2017, 10:02 IST

ಹೊಸಪೇಟೆ: ಗುಲ್ಬರ್ಗ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಬುಧವಾರ ವಿ.ವಿ ಕ್ರಿಯಾಶಕ್ತಿ ಭವನದ ಎದುರು ಪ್ರತಿಭಟನೆ ನಡೆಸಿತು.ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌.ಎಫ್‌.ಐ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ವಿ.ವಿ ಗ್ರಂಥಾಲಯದ ಬಳಿ ಸೇರಿದ ಪ್ರತಿಭಟನಾಕಾರರು ಕ್ರಿಯಾಶಕ್ತಿ ಭವನದ ವರೆಗೆ  ರ್‍ಯಾಲಿ ನಡೆಸಿದರು. ಬಳಿಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಬರೆದ ಮನವಿ ಪತ್ರವನ್ನು ವಿ.ವಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರಿಗೆ ಸಲ್ಲಿಸಲಾಯಿತು.

ಗುಲ್ಬರ್ಗ ವಿ.ವಿ ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಅವರ ಆತ್ಮಹತ್ಯೆಯಿಂದ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ.  ಮಾರ್ಗದರ್ಶಕರು ನೀಡಿರುವ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿದ್ಯಾರ್ಥಿನಿ ಡೆತ್‌ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಸಾವಿಗೆ ಮಾರ್ಗದರ್ಶಕರೇ ಕಾರಣ ಎಂದು ಆರೋಪಿಸಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

 ಆಂತರಿಕ ಅಂಕಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವುದು, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಮನೆ ಆಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಇದರಿಂದ  ಮನೋಸ್ಥೈರ್ಯ ಕುಸಿಯುತ್ತಿದೆ ಎಂದರು. ಪಿ.ಎಚ್‌.ಡಿ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿನಿಯರನ್ನು ಅನುಮಾನದಿಂದ ನೋಡುವ ವಾತಾವರಣ ಸೃಷ್ಟಿಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು.  ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪ್ರಕರಣದ ತನಿಖೆಗೆ ಸಮಿತಿ ರಚನೆ ಮಾಡಬೇಕು. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಿ, ಅದಕ್ಕೆ ವಿದ್ಯಾರ್ಥಿನಿಯರನ್ನು ಸದಸ್ಯರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ADVERTISEMENT

ಒಕ್ಕೂಟದ ಪದಾಧಿಕಾರಿಗಳಾದ ಎಚ್‌. ಕೃಷ್ಣಮೂರ್ತಿ, ತಾಯಶ್ರೀ, ಲತಾ, ರಮೇಶ, ಬೋರಯ್ಯ, ಎಸ್‌.ಎಫ್‌.ಐ. ರಾಜ್ಯ ಸಮಿತಿ ಸದಸ್ಯ ಭೀಮನಗೌಡ, ಜಿಲ್ಲಾ ಅಧ್ಯಕ್ಷ ದೊಡ್ಡ ಬಸವರಾಜ, ಜಿಲ್ಲಾ ಕಾರ್ಯದರ್ಶಿ ವಸಂತ ಕಲಾಲ, ವಿ.ವಿ ವಿಭಾಗದ ಕೇಂದ್ರ ಸಮಿತಿ ಸದಸ್ಯ ಎಂ. ಮುನಿರಾಜು, ಪ್ರದೀಪ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.