ADVERTISEMENT

ಶಿಬಿರಾರ್ಥಿಗಳು ಚಳಿಯನ್ನು ಲೆಕ್ಕಿಸದೆ ಶಿಬಿರದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:17 IST
Last Updated 6 ಫೆಬ್ರುವರಿ 2018, 9:17 IST

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಉಚಿತ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದ ಎರಡನೇ ದಿನದ ಕಾರ್ಯಕ್ರಮವನ್ನು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಉದ್ಘಾಟಿಸಿದರು.

ಯೋಗ ಗುರು ಬಾಬಾ ರಾಮದೇವ್ ಅವರು ಬೆಳಿಗ್ಗೆ ಸುಮಾರು 5ಗಂಟೆಯಿಂದ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ನಿತ್ಯ ಯೋಗ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ, ಖಿನ್ನತೆ, ತಲೆನೋವು, ಥೈರಾಯಿಡ್, ಹೃದಯ, ಕಿಡ್ನಿ, ಜೀರ್ಣಾಂಗ ಅಂಗಗಳು, ಮೆದುಳು ಜ್ವರ, ಮೊಣಕಾಲು, ಕೀಲುಗಳ ಶಸ್ತ್ರ ಚಿಕಿತ್ಸೆ ತಡೆಗಟ್ಟಬಹುದು. ಇದೇ ವೇಳೆಯಲ್ಲಿ ಆಯುರ್ವೇದ ಮತ್ತು ಮನೆ ಔಷಧಿಗಳಿಂದ ಉಂಟಾಗುವ ಲಾಭದ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು.

ಬಳಿಕ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಅದರಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ವಿವರಿಸಿದರು. ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಯೋಗ ಪ್ರದರ್ಶಿಸಿ ಶಿಬಿರಾರ್ಥಿಗಳನ್ನು ನಗೆಗಡಲಲ್ಲಿ ತೇಲಾಡಿಸಿದರು. ನೃತ್ಯದ ಮೂಲಕ ಚಪ್ಪಾಳೆ ತಟ್ಟುತ್ತಾ ಯೋಗಮಯದಲ್ಲಿ ಮುಳುಗಿಸಿದರು.

ADVERTISEMENT

ಶಿಬಿರದ ಬಳಿಕ ಕ್ರೀಡಾಂಗಣದಲ್ಲಿ ಪ್ರತ್ಯೇಕವಾಗಿ ಯೋಗ ಚಿಕಿತ್ಸಾ ಕೇಂದ್ರಗಳಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೋಗ್ಯ ತಪಾಸಣೆ ನೀಡಿ ಉಚಿತ ಔಷಧಿ ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹರಿದ್ವಾರಕ್ಕೆ ಬರುವಂತೆ ಸೂಚಿಸಲಾಯಿತು. ಚಿಕಿತ್ಸೆಯೊಂದಿಗೆ ಯೋಗದ ಕುರಿತು ವೈದ್ಯರ ತಂಡ ಮಾಹಿತಿ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ, ಕಾರ್ಯದರ್ಶಿ ಟಿ.ಕೋಟ್ರಪ್ಪ ಇದ್ದರು.

ಮಹಿಳೆಯರು, ಮಕ್ಕಳಿಗೆ ವಿಶೇಷ ಶಿಬಿರ: ಸಂಜೆಯ ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಮದೇವ್ ಅವರು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಇದೇ ವೇಳೆಯಲ್ಲಿ ಮಹಿಳೆಯರಿಗೆ ಉಪ್ಪಿಟ್ಟು ರವೆ ಪಾಕೆಟ್‌ಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಜಾಕಲೇಟ್‌ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.