ADVERTISEMENT

ಅತ್ಯಾಚಾರ ಪ್ರಕರಣ:ಮೂರನೇ ಆರೋಪಿಗೂ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 10:15 IST
Last Updated 23 ಮೇ 2017, 10:15 IST

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ  ನೇಪಾಳದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ರಾಜ (24) ಎಂಬಾತನಿಗೆ 55ನೇ ಸಿಟಿ ಸಿವಿಲ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2012ರ ಅ. 13ರಂದು ನಡೆದಿದ್ದ ಕೃತ್ಯ ಸಂಬಂಧ ಆರು ಅಪರಾಧಿಗಳಿಗೆ ಒಂಬತ್ತನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು 2013ರ ಸೆ. 6ರಂದು  ಜೀವಾವಧಿ ಶಿಕ್ಷೆ ವಿಧಿಸಿತ್ತು. ಒಬ್ಬ ಆರೋಪಿಯು ಬಾಲಕನಾಗಿದ್ದು, ಬಾಲ ಅಪರಾಧಿ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆಯುತ್ತಿದೆ.

ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ರಾಜನನ್ನು 2013ರ ಸೆಪ್ಟೆಂಬರ್‌ 12ರಂದು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಎನ್‌. ಹಿರೇಮನಿ ವಾದ ಮಂಡಿಸಿದ್ದರು.

ADVERTISEMENT

‘ರಾಮನಗರದ ತಾಲ್ಲೂಕಿನ ಮೇತಾರೆದೊಡ್ಡಿ ಗ್ರಾಮದ ರಾಜ ಕೆಲಸ ಅರಸಿ ನಗರಕ್ಕೆ ಬಂದಿದ್ದ. ಯುವಕರ ಗುಂಪು ಕಟ್ಟಿಕೊಂಡು ಕಳ್ಳತನ ಹಾಗೂ ದರೋಡೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಜ್ಞಾನಭಾರತಿ ಆವರಣಕ್ಕೆ ಬರುತ್ತಿದ್ದ ರಾಜ ಹಾಗೂ ಸಹಚರರು, ಶ್ರೀಗಂಧ ಮರ ಕಳ್ಳಸಾಗಣೆ ಮಾಡುತ್ತಿದ್ದರು. ಜತೆಗೆ ಆವರಣದಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಸಹ ಮಾಡುತ್ತಿದ್ದರು’.

‘2012ರ ರಾತ್ರಿ 8.30 ಗಂಟೆಯ ಸುಮಾರಿಗೆ ಮರ ಸಾಗಣೆ ಮಾಡಲೆಂದು ಆರೋಪಿಗಳು ಆವರಣಕ್ಕೆ ಬಂದಿದ್ದರು. ಅದೇ ವೇಳೆ ಯುವತಿ ಹಾಗೂ ಆಕೆಯ ಸ್ನೇಹಿತ ಸುತ್ತಾಡುತ್ತಿರುವುದನ್ನು ಗಮನಿಸಿದ್ದರು. ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು’.

‘ಆರೋಪಿಗಳ ಕುರಿತು ಸಂತ್ರಸ್ತೆ ನೀಡಿದ್ದ ಮಾಹಿತಿಯಂತೆ  ಬಾಲಕ ಸೇರಿ  ಏಳು ಆರೋಪಿಗಳನ್ನು ಬಂಧಿಸಿದ್ದೆವು. ಒಂದೇ ತಿಂಗಳಿನಲ್ಲಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದೆವು. ರಾಜ ತಲೆಮರೆಸಿಕೊಂಡಿದ್ದ. ಆತನನ್ನು ಮರುವರ್ಷ ಬಂಧಿಸಿದ್ದೆವು’ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.