ADVERTISEMENT

‘ಅನುದಾನದಲ್ಲಿ ಕೇಂದ್ರದ ತಾರತಮ್ಯ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:06 IST
Last Updated 6 ನವೆಂಬರ್ 2017, 5:06 IST

ಆನೇಕಲ್‌: ರಾಜ್ಯಗಳಿಗೆ ಅನುದಾನ ನೀಡಿಕೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಭಂಗ ತರುತ್ತಿದೆ ಎಂದು ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಆರೋಪಿಸಿದರು.

ತಾಲ್ಲೂಕಿನ ಬೆಸ್ತಮಾನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದರು.

ಕೇಂದ್ರ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಸೇರಿದಂತೆ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೇವಲ ಪ್ರಚಾರದಲ್ಲಿ ಮಾತ್ರ ಮುಂದಿರುವ ಕೇಂದ್ರ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು.

ADVERTISEMENT

ಶಾಸಕ ಬಿ.ಶಿವಣ್ಣ ಮಾತನಾಡಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಹಾಗೂ ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನು ಕಂಡು ವಿವಿಧ ಪಕ್ಷಗಳ ಮುಖಂಡರು ಆನೇಕಲ್‌ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಬರುವ ಎಲ್ಲರನ್ನೂ ಸ್ವಾಗತಿಸಲಾಗುವುದು ಎಂದರು.

ಆನೇಕಲ್ ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಶಕೆ ಪ್ರಾರಂಭವಾಗಿದೆ. ₹ 1200 ಕೋಟಿಗೂ ಹೆಚ್ಚು ಅನುದಾನ ಕ್ಷೇತ್ರಕ್ಕೆ ಬಳಕೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕಾರ್ಯಕರ್ತರು ಅಭಿವೃದ್ಧಿ ಕೆಲಸಗಳನ್ನು ಮನೆಮನೆಗೂ ಪ್ರಚಾರ ಮಾಡುವ ಮೂಲಕ ಮುಂದಿನ ಚುನಾವಣೆಗೆ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಮಾತನಾಡಿ, ‘ಆನೇಕಲ್‌ನ ಅಭಿವೃದ್ಧಿಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಅವಕಾಶ ನೀಡುವ ಮೂಲಕ ಮಾಡಿದ ಕೆಲಸಕ್ಕೆ ಕೂಲಿ ನೀಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಜಿ.ಯಲ್ಲಪ್ಪ, ಯಾದವರ ಸಂಘದ ತಾಲ್ಲೂಕು ಅಧ್ಯಕ್ಷ ರವಿ, ಶಿವಕುಮಾರ್‌, ಚೌಡಪ್ಪ, ಆನಂದ್, ನಾರಾಯಣ್‌ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಂ, ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ನಾಗರಾಜು, ಬಮೂಲ್ ನಿರ್ದೇಶಕ ಆರ್.ಕೆ. ರಮೇಶ್, ಆನೇಕಲ್ ಯೋಜನಾ ಪ್ರಾಧಿಕಾರದ ಸದಸ್ಯ ಎಂ.ಕೆಂಪರಾಜು, ಪದವೀಧರ ವೇದಿಕೆಯ ಅಧ್ಯಕ್ಷ ರಾಮೋಜಿಗೌಡ, ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಶ್ರೀನಿವಾಸ್‌, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡಹಾಗಡೆ ಹರೀಶ್, ಜಿಗಣಿ ಪುನೀತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಚ್ಯುತರಾಜು, ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮ್‌ರೆಡ್ಡಿ, ಆರ್.ಕೆ. ಕೇಶವರೆಡ್ಡಿ, ಮುಖಂಡರಾದ ಬಿ.ಪಿ. ರಮೇಶ್, ಚಿಕ್ಕನಾಗಮಂಗಲ ವೆಂಕಟೇಶ್, ಪಾರ್ಥಸಾರಥಿ, ಎ.ಎನ್. ನರೇಂದ್ರ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.