ADVERTISEMENT

ಅಪರಾಧ ತಡೆಗಟ್ಟಲು ಸಹಕಾರ ಅಗತ್ಯ

ಪುಟ್ಟಪ್ಪನಗುಡಿ ಬಡಾವಣೆಯಲ್ಲಿ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಮೇ 2017, 8:30 IST
Last Updated 6 ಮೇ 2017, 8:30 IST
ದೇವನಹಳ್ಳಿಯ ಪುಟ್ಟಪ್ಪನಗುಡಿ ಬಡಾವಣೆಯಲ್ಲಿ ಅಪರಾಧ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಪಿಎಸ್ಐ ನಂದೀಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು
ದೇವನಹಳ್ಳಿಯ ಪುಟ್ಟಪ್ಪನಗುಡಿ ಬಡಾವಣೆಯಲ್ಲಿ ಅಪರಾಧ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಪಿಎಸ್ಐ ನಂದೀಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು   

ದೇವನಹಳ್ಳಿ: ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ತಡೆಗಟ್ಟಲು ಸಾರ್ವಜನಿಕರು ಸಹಕರಿಸುವ ಅಗತ್ಯವಿದೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ನಂದೀಶ್ ತಿಳಿಸಿದರು. ಪಟ್ಟಣದ ಪುಟ್ಟಪ್ಪನಗುಡಿ ಬಡಾವಣೆಯಲ್ಲಿ ಅಪರಾಧ ಕುರಿತು ನಡೆದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಯಾರೇ ಶಾಂತಿ ಕದಡುವ ಪ್ರಯತ್ನ ನಡೆಸಿದರೂ ಕಠಿಣ ಕಾನೂನು ಕ್ರಮವಿದೆ. ಕುಡಿದ ಅಮಲಿನಲ್ಲಿ ಜಗಳ, ಕೂಗಾಟ, ಪರಸ್ಪರ ನಿಂದನೆ ಸಲ್ಲದು ಕಷ್ಟಪಟ್ಟು ದುಡಿದ ಹಣ ವ್ಯರ್ಥವಾಗಿ ಮದ್ಯಪಾನಕ್ಕೆ ಬಳಕೆ ಸರಿಯಲ್ಲ. ಯಾವುದೆ ಜಾತಿ ನಿಂದನೆ ತರವಲ್ಲ ಎಂದರು.

ದೇವನಹಳ್ಳಿ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಹೊರರಾಜ್ಯದ ಅನೇಕರು ತಾಲ್ಲೂಕು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿದ್ದಾರೆ. ಬಾಡಿಗೆ ನೀಡುವಾಗ ಮನೆ ಮಾಲೀಕರು ಸಂಪೂರ್ಣ ದಾಖಲೆ ಪಡೆದು ಪೊಲೀಸರ ಗಮನಕ್ಕೆ ತಂದು ಬಾಡಿಗೆ ನೀಡಬೇಕು ಮತ್ತು ಅವರ ಚಲನವಲನದ ಬಗ್ಗೆ ಅನುಮಾನ ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ರಾತ್ರಿವೇಳೆ ಅಪರಿಚಿತರಿಗೆ ಬಾಗಿಲು ತೆರೆಯಬಾರದು, ವಿವಿಧ ರೀತಿ ಸರಕು ಇತರೆ ವಸ್ತು ಮಾರಾಟದ ನೆಪದಲ್ಲಿ ಕುಡಿಯಲು ನೀರು ಮತ್ತು ವಿಳಾಸ ಪತ್ತೆ ನೆಪದಲ್ಲಿ ಮನೆಗೆ ನುಗ್ಗಿ ಅಪರಾಧ ಕೃತ್ಯ ನಡೆಸುವ ಸಾಧ್ಯತೆ ಇರುತ್ತದೆ, ಇದರ ಬಗ್ಗೆ ಜಾಗೃತೆವಹಿಸಬೇಕು ಎಂದರು.

ಮನೆಯಲ್ಲಿ ಹೆಚ್ಚು ನಗದು ಮತ್ತು ಚಿನ್ನಾಭರಣಗಳಿದ್ದರೆ ಬ್ಯಾಂಕಿನ ಸೇಫ್ ಲಾಕರ್‌ನಲ್ಲಿ ಇಡಬೇಕು, ಎರಡು ಲಕ್ಷಕ್ಕಿಂತ  ಹೆಚ್ಚು ಮೊತ್ತ ಯಾವುದೇ ಬ್ಯಾಂಕ್ ನಲ್ಲಿ ಒಂದೇ ಬಾರಿಗೆ ವಹಿವಾಟು ನಡೆಸುವ ಮೊದಲು ಪೊಲೀಸರ ನೆರವು ಪಡೆದುಕೊಳ್ಳಬೇಕು ಎಂದರು.

ಹತ್ತರಿಂದ ನೂರು ರೂಪಾಯಿ ನೋಟು ದಾರಿಯಲ್ಲಿ ಬಿಸಾಡಿ ನೋಟಿನ ಮೇಲೆ ಗಮನ ಹರಿಸುವಂತೆ ಮಾಡಿ ಹಣ ದೋಚುವ ವ್ಯವಸ್ಥಿತ ಸಂಚು ಇರುತ್ತದೆ. ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ತಕ್ಷಣ ಗಸ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು. ಹೆಡ್‌ ಕಾನ್‌ಸ್ಟೆಬಲ್‌ ಶ್ರೀನಿವಾಸ್, ಕುಮಾರ್ ಕೋಠಿ ಇದ್ದರು.

*
ಬಡಾವಣೆಯಲ್ಲಿರುವ ಮಹಿಳೆಯರು  ಬೆಳಿಗ್ಗೆ ಮತ್ತು ಸಂಜೆವೇಳೆ ವಾಯು ವಿಹಾರಕ್ಕೆ ತೆರಳುವಾಗ ಚಿನ್ನದ ಸರಗಳನ್ನು ಮನೆಯಲ್ಲಿಟ್ಟು ಹೋದರೆ ಉತ್ತಮ, ಸರಗಳ್ಳತನಕ್ಕೆ ಅವಕಾಶವಿರುವುದಿಲ್ಲ.
-ನಂದೀಶ್,  ಸಬ್‌ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT