ADVERTISEMENT

‘ಕನ್ನಡ ನಾಡಿನ ಸಂಸ್ಕೃತಿ ಉಳಿಸಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:11 IST
Last Updated 19 ನವೆಂಬರ್ 2017, 4:11 IST

ವಿಜಯಪುರ: ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ನಾರಾಯಣಸ್ವಾಮಿ ಹೇಳಿದರು.

ಮಿತ್ತನಹಳ್ಳಿ–ಯಲುವಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದ ಆವರಣದ ಎಂ.ಬಿ.ನರಸಿಂಹಮೂರ್ತಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡದ ಹಿರಿಮೆ ಎಲ್ಲೆಡೆ ಸಾರಬೇಕಾಗಿದೆ. ದೇಶದಲ್ಲಿ ಹಲವಾರು ಭಾಷೆಗಳಿವೆ. ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು, ಉತ್ತಮ ಲಿಪಿ ಹೊಂದಿದೆ. ಇಂತಹ ಶ್ರೀಮಂತ ಭಾಷೆಯನ್ನು ಅಭಿವೃದ್ಧಿ ಪಡಿಸಿ, ಅನ್ಯಭಾಷಿಗರಿಗೂ ಕಲಿಸಿ ನಮ್ಮತನವನ್ನು ಉಳಿಸಿಕೊಳ್ಳಬೇಕಾಗಿದೆ. ಇತರ ಭಾಷೆಗಳನ್ನೂ ಪ್ರೀತಿಸೋಣ ಕನ್ನಡವನ್ನು ಬೆಳೆಸೋಣ’ ಎಂದರು.

ADVERTISEMENT

ಮುಖಂಡ ಎಂ.ಬಿ.ನರಸಿಂಹಮೂರ್ತಿ ಮಾತನಾಡಿ, ‘ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಅನೇಕ ಮಂದಿ ಕನ್ನಡದ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಆಂಗ್ಲಭಾಷೆಯ ವ್ಯಾಮೋಹದಿಂದಾಗಿ ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಅವರನ್ನು ಜಾಗೃತಗೊಳಿಸಬೇಕು. ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಬೇಕು’ ಎಂದರು.

ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮುತ್ತೈದೆಯರು ತಲೆಯ ಮೇಲೆ ಕಲಶಗಳನ್ನು ಹೊತ್ತುಕೊಂಡು ಪೂರ್ಣ ಕುಂಭದೊಂದಿಗೆ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ವೀರಭದ್ರ ಕುಣಿತದೊಂದಿಗೆ ಮೆರವಣಿಗೆ ನಡೆಸಿದರು. ವೀರಗಾಸೆ ಕಲಾವಿದರು, ವೀರಭದ್ರನ ಜನ್ಮರಹಸ್ಯದ ಕುರಿತು ಸಾರಿದರು.

ಮುಖಂಡರಾದ ಹೊಸಪೇಟೆ ಶಶಿಕುಮಾರ್, ವಿರೂಪಾಕ್ಷಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಆಂಜಿನಪ್ಪ, ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ ರವಿಕುಮಾರ್, ಡಿ.ಮುನಿಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಿತ್ತನಹಳ್ಳಿ ಹರೀಶ್, ಶ್ರೀಧರ್ ಗೌಡ, ಸುಗಟೂರು ದೇವರಾಜು, ನಾಗಮಂಗಲ ತಮ್ಮಣ್ಣ, ಪರಮೇಶ್, ವೆಂಕಟಾಪುರ ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ನಾಗೇಶ್, ಮಹೇಶ್ ಕುಮಾರ್, ರಾಮಕೃಷ್ಣ, ಸುರೇಶ್ ಕುಮಾರ್, ವಿಕ್ಟರ್ ರವಿ, ಅಶ್ವಥ್ ನಾರಾಯಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.