ADVERTISEMENT

ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಆಗ್ರಹ

ಸಾಲಮನ್ನಾ, ಇತರ ಯೋಜನೆಗೆ ಹಣ ಬಳಸುವ ಪ್ರಸ್ತಾವಕ್ಕೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 10:02 IST
Last Updated 25 ಜುಲೈ 2017, 10:02 IST

ದೊಡ್ಡಬಳ್ಳಾಪುರ: ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಸಾಲಮನ್ನಾ ಮೊದಲಾದ ಇತರೆ ಯೋಜನೆಗಳಿಗೆ ಉಪಯೋಗಿಸಲು ಉದ್ದೇಶಿಸಿರುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಕೂಲಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೆಲದಾಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮೇಸ್ತ್ರಿಗಳ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಕಾರ್ಯದರ್ಶಿ ಎಚ್.ಕೆ.ಆನಂದ್ ಮಾತನಾಡಿ, ಶೇ 1ರಷ್ಟು ಸೆಸ್ ರೂಪದಲ್ಲಿ ಸಂಗ್ರಹವಾಗುತ್ತಿರುವ ಕಟ್ಟಡ ಕೂಲಿ ಕಾರ್ಮಿಕರ ಹಣದ ಮೇಲೆ ಸರ್ಕಾರ ಕಣ್ಣಾಕಿದೆ. ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 10.74 ಲಕ್ಷ ಕಾರ್ಮಿಕರಿದ್ದಾರೆ.

21 ಜಿಲ್ಲೆಗಳಲ್ಲಿ ಸಂಘಟನೆಗಳು ಸಕ್ರಿಯವಾಗಿದ್ದರೂ ಇಚ್ಛಾಸಕ್ತಿ ಇಲ್ಲದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ಕಾರ್ಮಿಕ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ ಎಂದು ದೂರಿದರು.

ADVERTISEMENT

ದೇಶದಲ್ಲಿ ಸುಮಾರು 32 ಸಾವಿರ ಕೋಟಿ ರೂಪಾಯಿ ಸೆಸ್ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದೆ. ರಾಜ್ಯದಲ್ಲಿ ಹಣವಿದ್ದರೂ ಅದನ್ನು ಸರಿಯಾಗಿ ಬಳಸುತ್ತಿಲ್ಲ ಎಂದರು.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತೆ ಕಾರ್ಮಿಕರಿಗಾಗಿ ಸೀಮಿತವಾಗಿರುವ ಹಣವನ್ನು ರೈತರ ಸಾಲ ಮನ್ನಾ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಸಂಘದ ಅಧ್ಯಕ್ಷ ಟೈಲ್ಸ್ ಕೃಷ್ಟಪ್ಪ ಮಾತನಾಡಿ, ಕಾರ್ಮಿಕ ಫಲಾನುಭಾವಿಗಳಿಗೆ 11 ವಿವಿಧ ರೀತಿಯ ಸೌಲಭ್ಯಗಳು ಶೇ 11ರಷ್ಟು ಮಾತ್ರ  ತಲುಪಿಸಿದೆ.  ಕಟ್ಟಡ ಕಾರ್ಮಿಕರ ಫೆಡರೇಷನ್ ಕೂಡ ಉಗ್ರ ಹೋರಾಟಕ್ಕೆ ಮುಂದಾಗಿದೆ ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ರಾಮಾಂಜಿನಪ್ಪ, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ರವಿ, ಪದಾಧಿಕಾರಿಗಳಾದ ನಂಜೇಗೌಡ, ನಾಗರಾಜು, ಬೀರಣ್ಣ, ಆಂಜನೇಯ, ಗಂಗರಾಜು, ಮುರುಳಿ ಭಾಗವಹಿಸಿದ್ದರು.

ಸಂಘಟಿತ ಹೋರಾಟದ ಎಚ್ಚರಿಕೆ
ಮೀಸಟ್ಟಿರುವ ಹಣದಲ್ಲಿ ಬಿಡಿಗಾಸನ್ನು ತೆಗೆಯಬಾರದು ಇದು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಇಟ್ಟಿರುವ ಹಣ ಎಂದು ಎಚ್.ಕೆ.ಆನಂದ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಕಾರ್ಮಿಕರ ಹಣವನ್ನು ತೆಗೆದಲ್ಲಿ ಅಸಂಘಟಿತ ಕಾರ್ಮಿಕರೆಲ್ಲರೂ ಸಂಘಟಿತರಾಗಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.