ADVERTISEMENT

ಕೃಷಿ ಉತ್ಪಾದನೆ ತೀವ್ರ ಕುಸಿತ?

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 10:13 IST
Last Updated 2 ಸೆಪ್ಟೆಂಬರ್ 2017, 10:13 IST
ಮಳೆಯಿಂದಾಗಿ ಚಿಗುರುತ್ತಿರುವ ರಾಗಿ ಪೈರು
ಮಳೆಯಿಂದಾಗಿ ಚಿಗುರುತ್ತಿರುವ ರಾಗಿ ಪೈರು   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾರ್ಷಿಕ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕೃಷಿ ಬೆಳೆ ಉತ್ಪಾದನೆ ಭಾರಿ ಕುಸಿತ ಕಾಣುವ ಸಾಧ್ಯತೆ ಇದೆ. ಇದರಿಂದ ಆಹಾರ ಭದ್ರತೆಗೆ ಧಕ್ಕೆ ಒಂದೆಡೆಯಾದರೆ ರೈತರಿಗೆ ದಾಸ್ತಾನಿಗೂ ಪೆಟ್ಟು ಎಂದು ವಿಶ್ಲೇಷಿಸಲಾಗುತ್ತಿದೆ.

ಬಯಲು ಸೀಮೆಯ ಅತ್ಯಂತ ಪ್ರಮುಖ ಆಹಾರ ಬೆಳೆಯಾದ ಏಕದಳ ಧಾನ್ಯವಾಗಿರುವ ರಾಗಿ ಜಿಲ್ಲೆಯ ಒಟ್ಟಾರೆ ಅಂದಾಜು ಶೇ 100 ಹೆಕ್ಟೇರ್‌ ಪೈಕಿ ಶೇಕಡ 90ರಷ್ಟು ರಾಗಿ ಬೆಳೆಗೆ ರೈತರು ಮೀಸಲು ಮಾಡಿರುತ್ತಾರೆ. ನೀರಾವರಿ ಸೌಲಭ್ಯವಿರುವ ರೈತರು ಭತ್ತ, ಅವರೆ, ನೆಲಗಡಲೆ, ಮುಸುಕಿನ ಜೋಳಕ್ಕೆ ಮೊರೆ ಹೋಗುತ್ತಾರೆ.

ಕೆಲವು ರೈತರು ತೊಗರಿಯನ್ನು ನೀರಾವರಿಯಲ್ಲಿ ಬೆಳೆಯುತ್ತಾರೆ ಉಳಿದಂತೆ ಏಕದಳ ಮತ್ತು ದ್ವಿದಳ, ಸಿರಿಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳನ್ನು ವಾಡಿಕೆ ಮಳೆಯಲ್ಲಿ ಬೆಳೆಯಬೇಕಾದ ಅನಿವಾರ್ಯತೆಯಿಂದ ಆಕಾಶದ ಕಡೆಗೆ ನೋಡಲೇ ಬೇಕಾಗಿದೆ ಎನ್ನುತ್ತಾರೆ ರೈತರು.

ADVERTISEMENT

ಹತ್ತು ವರ್ಷಗಳ ಹಿಂದಿನ ಕೃಷಿ ಇಲಾಖೆ ದಾಖಲೆಯ ಮಾಹಿತಿಯಂತೆ ಜಿಲ್ಲಾದ್ಯಂತ ಕೃಷಿ ವಿಸ್ತೀರ್ಣ 85 ಸಾವಿರ ಹೆಕ್ಟೇರ್‌ ಆಸುಪಾಸಿನಲ್ಲಿದೆ. ಕಡಿಮೆಯಾಗುತ್ತಿರುವ ವಾಡಿಕೆ ಮಳೆಯ ಪ್ರಮಾಣ, ಕೃಷಿಯತ್ತ ರೈತರ ನಿರಾಸಕ್ತಿ, ಅನಿವಾರ್ಯವಾಗಿ ಭೂಮಿ ಮಾರಾಟ ಮಾಡುತ್ತಿರುವುದು, ಹೆಚ್ಚುತ್ತಿರುವ ಖಾಸಗಿ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣದಂತಹ ಪ್ರಮುಖ ಕಾರಣಗಳಿಂದ ಬೆಳೆ ವಿಸ್ತೀರ್ಣದ ಭೂಮಿ ಕಡಿಮೆಯಾಗುತ್ತಿದೆ.

ಜತೆಗೆ ರಿಯಲ್ ಎಸ್ಟೇಟ್‌ ದಂಧೆಗೆ ರೈತರು ಶರಣಾಗುತ್ತಿದ್ದಾರೆ. ಕೃಷಿ ಉತ್ಪಾದನೆ ಕುಸಿಯುತ್ತಿದೆ. ಇದರಿಂದ ದಿನನಿತ್ಯದ ಆಹಾರ ದಿನಸಿಗಳ ಬೆಲೆಗಳು ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹತ್ತು ವರ್ಷಗಳಿಂದ ಕಣಜವೇ ಖಾಲಿಯಾಗಿದೆ, ಒಂದು ಕೆ.ಜಿ.ರಾಗಿ ಬೆಲೆ ₹28ರಿಂದ 35 ಆಗಿದೆ. ರೈತರು ಎಂದೂ ರಾಗಿ ಖರೀದಿಸಿರಲಿಲ್ಲ ಮೂರು ವರ್ಷಗಳಿಂದ ಖರೀದಿಸಲೇಬೇಕಾಗಿದೆ ಎನ್ನುತ್ತಾರೆ.

ಬಯಲು ಸೀಮೆಯ ಹವಾಮಾನಕ್ಕೆ ಬೆಳೆಯುತ್ತಿರುವ ರಾಗಿ, ಮುಸುಕಿನ ಜೋಳ, ಸಿರಿಧಾನ್ಯ, ತೊಗರಿ, ಕಡಲೆ, ಹೆಸರು, ಹುರುಳಿ ಅಲಸಂದೆ, ಅವರೆ ಜತೆಗೆ ಎಣ್ಣೆಕಾಳು ಧಾನ್ಯಗಳಾದ ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ ಎಲ್ಲಾ ರೀತಿಯ ಧಾನ್ಯಗಳ ಉತ್ಪಾದನೆ ಕುಸಿದಿದೆ. ಈ ಕುರಿತು ಕೃಷಿ ಇಲಾಖೆ ನೀಡಿರುವ ಮಾಹಿತಿ ಆತಂಕಕ್ಕೆ ಕಾರಣವಾಗಿದೆ.

2014ರ ಸಾಲಿನಲ್ಲಿ ಏಕದಳ ಧಾನ್ಯ 192.754 ಮೆಟ್ರಿಕ್ ಟನ್, ದ್ವಿದಳ ಧಾನ್ಯ 5,701 ಮೆಟ್ರಿಕ್ ಟನ್, ಎಣ್ಣೆಕಾಳು ಬೆಳೆಗಳು 951ಮೆಟ್ರಿಕ್ ಟನ್, ಉತ್ಪಾದನೆಯಾದರೆ 2015ನೇ ಸಾಲಿನಲ್ಲಿ ಮಳೆ ಆಧರಿತ ಮತ್ತು ನೀರಾವರಿ ವಿಸ್ತೀರ್ಣದಲ್ಲಿ ಏಕದಳ ಧಾನ್ಯ 4,9842.218 ಮೆಟ್ರಿಕ್ ಟನ್, ದ್ವಿದಳ ಧಾನ್ಯ 1,737.84ಮೆಟ್ರಿಕ್ ಟನ್, ಎಣ್ಣೆಕಾಳು ಧಾನ್ಯಗಳು 207.32ಮೆಟ್ರಿಕ್ ಟನ್ ಉತ್ಪಾದನೆಯಾಗಿವೆ.

ಎಲ್ಲಾ ಬೆಳೆ ಉತ್ಪನ್ನಗಳು ಇಳುವರಿಯಲ್ಲಿ ಕೊರತೆ ಹೆಚ್ಚುತ್ತಲೇ ಇರುವುದು ಅಂಕಿ ಅಂಶದಿಂದ ಅರಿಯಬಹುದು. ರಾಗಿ ಹಿಟ್ಟು ಮತ್ತು ಬೇಕರಿಯಲ್ಲಿನ ರಾಗಿ ಉತ್ಪನ್ನಗಳು ಬೆಲೆಯು ದುಬಾರಿಯಾಗುತ್ತಿದೆ. ನಗರ ಪ್ರದೇಶದಲ್ಲಿರುವ ಹೋಟೆಲ್‌ಗಳ ಮುದ್ದೆ ಊಟಕ್ಕೆ ಬರವಿಲ್ಲ, ಆದರೂ ದುಬಾರಿ ಎನ್ನುತ್ತಾರೆ ಹೋಟೆಲ್ ಗ್ರಾಹಕ ರಾಮಚಂದ್ರಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.