ADVERTISEMENT

ಖಾಸಗಿ ಶಾಲೆ ಬಗ್ಗೆ ಮಲತಾಯಿ ಧೋರಣೆ ಸಲ್ಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 10:01 IST
Last Updated 16 ಸೆಪ್ಟೆಂಬರ್ 2017, 10:01 IST
ದೊಡ್ಡಬಳ್ಳಾಪುರದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ಸರ್ಕಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಖಾಸಗಿ ಶಾಲೆಯ ಶಿಕ್ಷಕರನ್ನು ಮಲ ತಾಯಿ ಧೋರಣೆ ಮಾಡದೇ ನೋಡಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದರು. ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ನಗರದ ಒಕ್ಕಲಿ ಗರ ಭವನದಲ್ಲಿ ಶುಕ್ರವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಶೇ 62 ಭಾಗ ಶಿಕ್ಷಣ ಖಾಸಗಿ ಶಾಲೆಗಳಿಂದಲೇ ದೊರೆಯುತ್ತಿದೆ ಎಂದರು. ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಶಿಕ್ಷಕರ ದಿನಾಚರಣೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕರನ್ನು ಗೌರವಿಸುವ ಕೆಲಸವಾಗುತ್ತಿಲ್ಲ. ಸರ್ಕಾರ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಖಾಸಗಿ ಶಾಲೆಯ ಶಿಕ್ಷಕರನ್ನು ಅಭಿನಂದಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಖಾಸಗಿ ಶಾಲೆಗಳ ಶಿಕ್ಷಕರು ಡಿ.ಇಡಿ, ಬಿ.ಇಡಿ ಮೊದಲಾಗಿ ಅಗತ್ಯ ವಿದ್ಯಾರ್ಹತೆಯ ಪಡೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ ಎಂದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಪ್ರತಿಯೊಬ್ಬರ ಬದುಕಿನ ಮೇಲೂ ಶಿಕ್ಷಕರ ಪ್ರಭಾವ ಇದ್ದೇ ಇರುತ್ತದೆ. ಉತ್ತಮ ಸಮಾಜ ನಿರ್ಮಾಣ ಹಾಗೂ ಉತ್ತಮ ಪ್ರಜೆಗಳನ್ನು ಸಿದ್ಧಗೊಳಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ADVERTISEMENT

ಶಿಕ್ಷಕರು ಹೊಸ ಪಠ್ಯ ಹಾಗೂ ಪ್ರಸ್ತುತ ಬದುಕಿಗೆ ಅಗತ್ಯ ಇರುವ ಮೌಲ್ಯಗಳನ್ನು ಬೆಳೆಸುವ ಕಡೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ಪದವಿಗೇರಿದ ರಾಧಾಕೃಷ್ಣನ್ ಮಾದರಿಯಾಗಬೇಕಿದೆ ಎಂದರು. ಆದಿತ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಜಿ.ಶ್ರೀನಿವಾಸ್ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ಶಾಲೆಗೆ ಮೂಲಸೌಕರ್ಯ ಒದಗಿಸಬಹುದು.

ಆದರೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಅನನ್ಯವಾಗಿದ್ದು, ಇವರನ್ನು ಗುರುತಿಸುವ ಕೆಲಸ ಶ್ಲಾಘನೀಯ ಎಂದರು. ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಎ.ಸುಬ್ರಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಖಾಸಗಿ ಶಾಲೆಗಳ ಶಿಕ್ಷಕರನ್ನು ಅಭಿನಂದಿಸಲಾಯಿತು.

ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಉಪಾಧ್ಯಕ್ಷೆ ಎಂ.ಶರಾವತಿ, ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಮೇಶ್, ಖಜಾಂಚಿ ಶ್ರೀನಿವಾಸಮೂರ್ತಿ, ಸಂಯೋಜಕ ಲಕ್ಷ್ಮೀನಾರಾಯಣ್ ಹಾಗೂ ಸಂಘದ ಸದಸ್ಯರಾದ ಎಚ್.ಎಸ್.ಶೇಷಗಿರಿ, ಎಂ.ಆರ್.ಪದ್ಮಾವತಿ, ಎ.ಎಸ್.ಕೇಶವ, ಕೆ.ಜಿ.ರಘುರಾಂ, ಆರ್.ವಿಜಯಕುಮಾರ್, ಸೀಮಾ ಯಾಸ್ಮಿನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.