ADVERTISEMENT

ಚೆಕ್‌ಡ್ಯಾಂ ನಿರ್ಮಾಣಕ್ಕೆ ಚಾಲನೆ

ಜೋಗಿದೊಡ್ಡಿ ಗ್ರಾಮದ ಬಳಿ ₹50 ಲಕ್ಷ ವೆಚ್ಚದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 4 ಮೇ 2017, 9:53 IST
Last Updated 4 ಮೇ 2017, 9:53 IST

ಕೂಟಗಲ್: ಇಲ್ಲಿನ ಜೋಗಿದೊಡ್ಡಿ ಗ್ರಾಮದ ಬಳಿ ₹50 ಲಕ್ಷ ವೆಚ್ಚದ ಎರಡು ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ಅಶೋಕ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಸಣ್ಣ ನಿರಾವರಿ ಇಲಾಖೆಯ ವಿಶೇಷ ಅನುದಾನ ಯೋಜನೆಯಡಿ ತಲಾ ₹25 ಲಕ್ಷ ವೆಚ್ಚದ ಎರಡು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಎಚ್.ಎನ್. ಅಶೋಕ್ ‘ನೀರಿನ ಸಂರಕ್ಷಣೆಗೆ ಹಿಂದಿನಿಂದ ನಾವು ಸರಿಯಾದ ಒತ್ತು ನೀಡದ ಕಾರಣ ಇಂದು ನೀರಿನ ಅಭಾವ ಎಲ್ಲೆಡೆ ತೀವ್ರವಾಗಿ ಕಾಡುತ್ತಿದೆ, ಲಭಿಸುವ ನೀರನ್ನು ಸಂರಕ್ಷಿಸಿಕೊಳ್ಳುವುದು ಎಲ್ಲರ ಪ್ರಮುಖ ಜವಾಬ್ದಾರಿಯಾಗಿದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಹುತೇಕ ಕೆರೆ-ಕಟ್ಟೆಗಳು ಬರಿದಾಗಿವೆ, ಜಾನುವಾರು ಹಾಗೂ  ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ, ಇಂತಹ ಸನ್ನಿವೇಶದಲ್ಲಿ ಮಳೆ ಬಿದ್ದಾಗ ಉಪಯೋಗ ಇಲ್ಲದಂತೆ ಹರಿದು ಹೋಗುವ ಮಳೆ ನೀರನ್ನು ಚೆಕ್ ಡ್ಯಾಂಗಳ ಮೂಲಕ ಹಿಡಿದಿಟ್ಟುಕೊಂಡಾಗ ಅಂತರ್ಜಲ ವೃದ್ಧಿಯಾಗಲಿದೆ. ಜತೆಗೆ ಪ್ರಾಣಿ ಪಕ್ಷಿ ಗಳಿಗೂ ಕುಡಿಯಲು ನೀರು ದೊರೆಯಲಿದೆ’ ಎಂದು ತಿಳಿಸಿದರು.

ಎ. ಮಂಜುಗೆ ಬುದ್ಧಿ ಭ್ರಮಣೆ: ‘ಬೆಂಗಳೂರು ಹಾಲು ಒಕ್ಕೂಟದ ಸದಸ್ಯ ನರಸಿಂಹಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಲು ಶಾಸಕ ಬಾಲಕೃಷ್ಣ ಅವರೇ ಕಾರಣ’ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ್ ಅವರ ಆರೋಪಕ್ಕೆ ಅಶೋಕ್ ಅವರು ಪ್ರತಿಕ್ರಿಯೆ ನೀಡಿದರು.

‘ರಾಜಕೀಯ ದಿವಾಳಿತನದ ಅಂಚಿಗೆ ಬಂದಿರುವ ಎ.ಮಂಜು ಅವರು ಯಾವ ಪಕ್ಷದಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ತಳಮಳದಲ್ಲಿ ಬುದ್ಧಿ ಭ್ರಮಣೆ ಆದವರಂತೆ ಮಾತನಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಬಮೂಲ್‌ ಅಧ್ಯಕ್ಷ ಸ್ಥಾನದ ಆಯ್ಕೆ ಸಂದರ್ಭದಲ್ಲಿ ನರಸಿಂಹಮೂರ್ತಿ ಅವರಿಗೆ ಮೋಸ ಮಾಡಿದವರು ಯಾರು ಎಂಬುದು ಜಿಲ್ಲೆಗೆ ತಿಳಿದಿದೆ, ಶಾಸಕ ಬಾಲಕೃಷ್ಣ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಬಾಯಿ ಚಪಲಕ್ಕೆ ಮಾತಾಡುವುದನ್ನು ಮಂಜು ಅವರು ನಿಲ್ಲಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಭಾವತಿ ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಬೈರೇಗೌಡ, ಮುಖಂಡರಾದ ಜಗದೀಶ್, ಶಿವರಾಜು, ತಿಬ್ಬಯ್ಯ, ರಾಜು, ರಘು, ಶಿವಣ್ಣ, ಬಿಳಿಯಪ್ಪ, ಕುಮಾರ್, ರವಿ, ನಾಗರಾಜು, ಶಿವಣ್ಣ, ಮಹೇಶ್, ಅಜಯ್‌ಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.